Site icon Vistara News

KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

KCET 2024

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ಕೋರ್ಸ್‌ಗಳ ಪ್ರವೇಶಕ್ಕೆ ಈ ಬಾರಿ ಏಕಕಾಲದಲ್ಲೇ ಸೀಟು ಹಂಚಿಕೆ ಪ್ರಕ್ರಿಯೆ (KCET 2024) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನೀಟ್ ಪರೀಕ್ಷೆಯ ಫಲಿತಾಂಶದ ಪಟ್ಟಿಯನ್ನು ಕೆಇಎಗೆ ಹಸ್ತಾಂತರಿಸಿದ ನಂತರ ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಇತರ ವೈದ್ಯಕೀಯ ಕೋರ್ಸುಗಳ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಕೆಇಎ ತಿಳಿಸಿದೆ.

ಇತ್ತೀಚೆಗೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆದ್ಯತೆಗಳನ್ನು ದಾಖಲಿಸಲು ಎಂಜಿನಿಯರಿಂಗ್, ಪಶುವೈದ್ಯಕೀಯ ಇತ್ಯಾದಿ ಕೋರ್ಸ್ ಗಳಿಗೆ ಅವಕಾಶ ನೀಡಲಾಗಿತ್ತು. ಎನ್‌ಎಂಸಿ ತನ್ನ ಮೊದಲ ಸುತ್ತಿನ ನೀಟ್‌ ಕೌನ್ಸೆಲಿಂಗ್ ಪ್ರಾರಂಭಿಸಿದ ನಂತರ ಕೆಸಿಇಟಿ ಸೀಟು ಹಂಚಿಕೆ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಇಎ ತಿಳಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಇಎ ಮಂಡಳಿ ಸಭೆಯಲ್ಲಿ ಆಗಸ್ಟ್ ಎರಡನೇ ವಾರದಲ್ಲಿ ಸಿಇಟಿ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿದೆ.

ಇನ್ನು ಎನ್‌ಎಂಸಿ ವೈದ್ಯಕೀಯ ಕೋರ್ಸ್‌ಗಳಿಗೆ ಆಗಸ್ಟ್‌ 14ರಿಂದ ಕೌನ್ಸೆಲಿಂಗ್‌ ಪ್ರಾರಂಭಿಸುವುದಾಗಿ ಹೇಳಿದೆ. ಹೀಗಾಗಿ ಎನ್‌ಎಂಸಿ ತನ್ನ ಮೊದಲ ಸುತ್ತಿನ ನೀಟ್‌ ಕೌನ್ಸೆಲಿಂಗ್ ಪ್ರಾರಂಭಿಸಿದ ಮೂರು ದಿನಗಳ ನಂತರ ಎಲ್ಲಾ ಕೋರ್ಸ್‌ಗಳಿಗೆ ಕೌನ್ಸೆಲಿಂಗ್ ಪುನರಾರಂಭಿಸುತ್ತೇವೆ ಎಂದು ಕೆಇಎ ಕಾರ್ಯನಿರ್ವಾಹಕ ಪ್ರಸನ್ನ ತಿಳಿಸಿದ್ದಾರೆ. ವೈದ್ಯಕೀಯೇತರ ಕೋರ್ಸ್‌ಗಳಿಗೆ ಆಯ್ಕೆ ಪ್ರವೇಶವನ್ನು ಪ್ರಾರಂಭಿಸಿದ್ದೇವೆ ಮತ್ತು ಹಂಚಿಕೆ ಮಾತ್ರ ಬಾಕಿ ಉಳಿದಿದೆ.

ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಈ ಹಂತದಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದು ಕಷ್ಟಸಾಧ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ನೀಡುವ ಸೂಚನೆ ಪ್ರಕಾರ ಅವರಿಗೂ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Wild Animals : ರಸ್ತೆಗೆ ಅಡ್ಡಲಾಗಿ ಮಲಗಿಕೊಂಡ ಚಿರತೆ; ಕಾಡಿನಿಂದ ಹಸು ಜತೆಗೆ ಓಡೋಡಿ ಬಂದ ಜಿಂಕೆ

ಯುಜಿಸಿಇಟಿ ಆಪ್ಷನ್ ಎಂಟ್ರಿಗೆ ಆ.4 ಕೊನೆ ದಿನ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ತಮ್ಮ ಆಸಕ್ತಿಯನುಸಾರ ಆಪ್ಷನ್ (ಇಚ್ಛೆ) ದಾಖಲು ಮಾಡುವುದು ಆಗಸ್ಟ್ 4ರಂದು ಕೊನೆಯಾಗಲಿದೆ. ಕಾಲೇಜು ಮತ್ತು ಕೋರ್ಸ್ ಆಯ್ಕೆಗೆ ಇನ್ನೂ ಒಂದು ದಿನ ಸಮಯ ಇದ್ದು, ಎಚ್ಚರಿಕೆಯಿಂದ ಇಚ್ಛೆ ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಎಂಜಿನಿಯರಿಂಗ್, ಯೋಗ- ನ್ಯಾಚುರೋಪಥಿ, ಪಶು ವೈದ್ಯ, ಕೃಷಿ ವಿಜ್ಞಾನ, ನರ್ಸಿಂಗ್, ಬಿ-ಫಾರ್ಮಾ ಫಾರ್ಮಾ-ಡಿ ಕೋರ್ಸ್ ಗಳ ಪ್ರವೇಶಕ್ಕೆ ಇಚ್ಛೆ ದಾಖಲಿಸಲು ಕೆಇಎ ಅವಕಾಶ ನೀಡಿತ್ತು. ಮುಂದಿನ ಹಂತದಲ್ಲಿ ಅಣಕು ಸೀಟು ಹಂಚಿಕೆ ಮಾಡಲಾಗುತ್ತದೆ.

ಆ.3ರಿಂದ ಪಿಜಿ ದಂತ ವೈದ್ಯಕೀಯ 2ನೇ ಸುತ್ತಿನ ಸೀಟು ಹಂಚಿಕೆ

ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ (ಪಿಜಿಇಟಿ- ಎಂಡಿಎಸ್-24) ಕೋರ್ಸ್‌ ನ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ 3ರಿಂದ ಆರಂಭವಾಗಿದೆ. ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಛಾಯ್ಸ್-2 ಆಯ್ಕೆ ಮಾಡಿ, ಶುಲ್ಕ ಪಾವತಿಸಿರುವವರು; ಛಾಯ್ಸ್-3 ಅನ್ನು ಆಯ್ಕೆ ಮಾಡಿರುವವರು ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವವರು ಆ.3ರಿಂದ ಕೆಇಎ ಕಚೇರಿಯಲ್ಲಿ ತಮ್ಮ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆ ಸಲ್ಲಿಸದಿದ್ದರೆ ಅಂತಹವರಿಗೆ ಸೀಟು ಹಂಚಿಕೆ ಮಾಡಲಾಗುವುದಿಲ್ಲ.

ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆ.3ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಆ.4ರಿಂದ 6ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಸಮಯ ನೀಡಲಾಗುತ್ತದೆ. ಆ.7ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಆ.8ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಲು ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆ.13 ಕೊನೆ ದಿನ ಎಂದು ಅವರು ವಿವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version