Site icon Vistara News

KEA : ವೈದ್ಯಕೀಯ ಅರ್ಹತಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ; ಪದ್ಮನಾಭ ಮೆನನ್‌ಗೆ ಮೊದಲ ಸ್ಥಾನ

KEA

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯೂನಾನಿ ಮತ್ತು ಹೋಮಿಯೋಪಥಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದು, ರಾಜ್ಯದವರೆಂದು ಕ್ಲೇಮ್ ಮಾಡಿರುವ 92,858 ಮಂದಿಯ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ ಸೈಟ್ ನಲ್ಲಿ (KEA) ಪ್ರಕಟಿಸಿದೆ.

ಪಟ್ಟಿಯಲ್ಲಿ ಅತಿ ಹೆಚ್ಚು ಅಂಕ (716 ಅಂಕ) ಪಡೆದ ಪದ್ಮನಾಭ ಮೆನನ್ ಮೊದಲ ಸ್ಥಾನದಲ್ಲಿ ಇದ್ದಾರೆ. ಅತಿ ಕಡಿಮೆ ಅಂದರೆ 127 ಅಂಕ ಪಡೆದವರು ಕೂಡ ಈ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ‌ ಪಡೆದಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ವೈದ್ಯಕೀಯ ಕೋರ್ಸ್‌ಗೆ ಅರ್ಹತೆ ಪಡೆದು ಇನ್ನೂ ಅರ್ಜಿ ಸಲ್ಲಿಸದೇ ಇರುವವರಿಗೆ ಒಂದೆರಡು ದಿನದಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಲಿಂಕ್ ಬಿಡುಗಡೆ ಮಾಡಲಾಗುವುದು. ಅದರ ನಂತರ ನೀಟ್ ಅಂಕ ದಾಖಲಿಸಲು ಎಲ್ಲ ಅರ್ಹರಿಗೂ ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

ಪಿಜಿ ದಂತ ವೈದ್ಯ: ಆ.3ರಿಂದ 2ನೇ ಸುತ್ತಿನ ಸೀಟು ಹಂಚಿಕೆ

ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ (ಪಿಜಿಇಟಿ- ಎಂಡಿಎಸ್-24) ಕೋರ್ಸ್‌ ನ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ 3ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಛಾಯ್ಸ್-2 ಆಯ್ಕೆ ಮಾಡಿ, ಶುಲ್ಕ ಪಾವತಿಸಿರುವವರು; ಛಾಯ್ಸ್-3 ಅನ್ನು ಆಯ್ಕೆ ಮಾಡಿರುವವರು ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವವರು ಆ.3ರಿಂದ ಕೆಇಎ ಕಚೇರಿಯಲ್ಲಿ ತಮ್ಮ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆ ಸಲ್ಲಿಸದಿದ್ದರೆ ಅಂತಹವರಿಗೆ ಸೀಟು ಹಂಚಿಕೆ ಮಾಡಲಾಗುವುದಿಲ್ಲ ಎಂದು ಪ್ರಸನ್ನ ತಿಳಿಸಿದ್ದಾರೆ.

ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆ.3ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಆ.4ರಿಂದ 6ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಸಮಯ ನೀಡಲಾಗುತ್ತದೆ. ಆ.7ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಆ.8ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಲು ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆ.13 ಕೊನೆ ದಿನ ಎಂದು ಅವರು ವಿವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version