Site icon Vistara News

KEA : ಕೆಯುಡಬ್ಲ್ಯೂಎಸ್‌ಡಿಬಿ ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಪ್ರಕಟ; ಆ.27ರವರೆಗೆ ಆಕ್ಷೇಪಣೆಗೆ ಅವಕಾಶ

KEA

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA), ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಯ (KUWSDB) ಖಾಲಿ ಇರುವ ಒಟ್ಟು 50 ಎಇ ಹುದ್ದೆಗಳಿಗೆ ಫೆ.10 ರಿಂದ ಮಾ.10 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ನಂತರ ಇದೇ ಆಗಸ್ಟ್‌ 11ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರ ಕೀ ಉತ್ತರಗಳನ್ನು ಆ.12 ರಂದು ಪ್ರಕಟಿಸಲಾಗಿತ್ತು. ಆ. 15 ರವರೆಗೆ ಆಕ್ಷೇಪಣೆಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಪ್ರಾಧಿಕಾರದಲ್ಲಿ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರಿಂದ ಪರಿಶೀಲಿಸಿ ವಿಷಯ ತಜ್ಞರ ಶಿಫಾರಸ್ಸಿನಂತೆ ಆ. 20 ರಂದು ಪರಿಷ್ಕೃತ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅದರಂತೆ ಆ. 11 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ತಾತ್ಕಾಲಿಕ ಅಂಕಪಟ್ಟಿಯನ್ನು ಆ. 23ರಂದು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪ್ರಕಟಿತ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಆ.27ರ ಸಂಜೆ 5:30ರ ಒಳಗೆ ಪೂರಕ ದಾಖಲೆಗಳೊಂದಿಗೆ ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆಕ್ಷೇಪಣೆ ಲಿಂಕ್‌ನಲ್ಲಿ ಮಾತ್ರ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಅಂಚೆ/ಪತ್ರದ ಮೂಲಕ ಅಥವಾ ಇ-ಮೇಲ್ ಮೂಲಕ ಸಲ್ಲಿಸುವ ಅಥವಾ ಪೂರಕ ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಎಕ್ಸ್‌ಮೂಲಕ ತಿಳಿಸಲಾಗಿದೆ.

ಇದನ್ನೂ ಓದಿ: Students Fighting: ಹುಡುಗಿ ವಿಷ್ಯಕ್ಕೆ ಕಿರಿಕ್‌; ಬೆಂಗಳೂರು-ತುಮಕೂರು ಹುಡುಗರ ಮಧ್ಯೆ ಹೊಡಿಬಡಿ‌

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ; ಅರ್ಜಿ ಅಂಗೀಕೃತವಾಗಿರದಿದ್ದರೆ ದಾಖಲೆ ಸಲ್ಲಿಸಲು ಆ.26 ಕೊನೆಯ ದಿನ

ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಸಲ್ಲಿಸಿರುವ ಅರ್ಜಿ ಅಂಗೀಕೃತ ವಾಗಿರದಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಆ.26ರೊಳಗೆ ಪೂರಕ ದಾಖಲೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಈ ಬಗ್ಗೆ ಸೂಚನೆ ನೀಡಿದ್ದು, ಪ್ರಾಧಿಕಾರವು ಪೂರಕ ದಾಖಲೆಗಳನ್ನು ಪರಿಗಣಿಸಿ ಅರ್ಜಿಗಳನ್ನು ದೃಢೀಕರಿಸಲಿದೆ ಎಂದಿದ್ದಾರೆ. ಅರ್ಜಿದಾರರು ತಮ್ಮ ಅರ್ಜಿ ಸ್ಥಿತಿಯನ್ನು ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಪರಿಶೀಲಿಸಬಹುದು.

ಕಡ್ಡಾಯ ಕನ್ನಡ ಪರೀಕ್ಷೆ

ಗ್ರಾಮ ಆಡಳಿತ ಹುದ್ದೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲೇಬೇಕು. ಸೆಪ್ಟೆಂಬರ್ 29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಈ ಪರೀಕ್ಷೆಗೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರ ಅನ್ವಯ, ಕನ್ನಡ ಭಾಷಾ ಪರೀಕ್ಷೆಯಲ್ಲಿ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅಕ್ಟೋಬರ್ 27ರಂದು ಪತ್ರಿಕೆ- 1 ಮತ್ತು ಪತ್ರಿಕೆ-2 ಇವುಗಳನ್ನು ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version