Site icon Vistara News

Kempegowda International Airport: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕನಿಷ್ಠ ದರದಲ್ಲಿ ರೈಲು ಸೇವೆ ಇದ್ದರೂ ಬಳಸುವವರಿಲ್ಲ

Kempegowda International Airport

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (Kempegowda International Airport) ನಿತ್ಯವೂ ಸಾವಿರಾರು ಮಂದಿ ಆಟೋ, ಟ್ಯಾಕ್ಸಿ, ಬಸ್ ಮೂಲಕ ಆಗಮಿಸುತ್ತಾರೆ, ಇಲ್ಲಿಂದ ನಿರ್ಗಮಿಸುತ್ತಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿ ರೈಲು ಸೌಕರ್ಯವಿದ್ದರೂ (Train facility) ಇದರ ಬಳಕೆಗೆ ಹೆಚ್ಚಿನವರು ಆಸಕ್ತಿಯನ್ನು ತೋರಿಸುತ್ತಿಲ್ಲ. ಹಾಗಂತ ಇದರ ಬಗ್ಗೆ ಜನರಿಗೆ ಗೊತ್ತಿಲ್ಲ ಎಂದಲ್ಲ, ಗೊತ್ತಿದ್ದರೂ ಬಳಸದವರು ಅನೇಕರಿದ್ದಾರೆ. ಇದಕ್ಕೆ ನಿರ್ದಿಷ್ಟ ಕಾರಣವೂ ಇದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಹೊಂದಿಕೊಂಡು ಸೌತ್ ವೆಸ್ಟರ್ನ್ ರೈಲ್ವೇಯ (South Western Railway) ಕೆಐಎ ಹಾಲ್ಟ್ ನಿಲ್ದಾಣವಿದೆ. ರೈಲು ಪ್ರಯಾಣ ದರ ಕೇವಲ 10 ರಿಂದ 30 ರೂ. ಅಷ್ಟೇ ಆದರೂ ಹೆಚ್ಚಿನವರು ಇದರ ಪ್ರಯೋಜನವನ್ನು ಪಡೆಯುತ್ತಿಲ್ಲ. ಸೌತ್ ವೆಸ್ಟರ್ನ್ ರೈಲ್ವೇ (SWR) ಪ್ರಕಾರ ಕೆಐಎ ಹಾಲ್ಟ್ ನಿಲ್ದಾಣವನ್ನು ಪ್ರತಿದಿನ ಕೇವಲ 30 ಪ್ರಯಾಣಿಕರು ಮಾತ್ರ ಬಳಸುತ್ತಾರೆ.


2021ರಲ್ಲೇ ಉದ್ಘಾಟನೆ

ವಿಮಾನ ನಿಲ್ದಾಣದಿಂದ ಕೇವಲ 3.5 ಕಿಮೀ ದೂರದಲ್ಲಿರುವ ಕೆಐಎ ಹಾಲ್ಟ್ ನಿಲ್ದಾಣವನ್ನು ವಿಮಾನಯಾನ ಮಾಡುವವರಿಗೆ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಹಾಯ ಮಾಡಲು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ನಿರ್ಮಿಸಿತ್ತು. ಇದನ್ನು 2021 ರಲ್ಲಿ ಉದ್ಘಾಟಿಸಲಾಗಿತ್ತು. ಇದರ ಹೊರತಾಗಿಯೂ ಅನೇಕ ಬೆಂಗಳೂರಿಗರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಅಲ್ಲದೇ ರೈಲು ಸೇವೆ ಬಗ್ಗೆ ತಿಳಿದಿರುವವರು ಸಾಮಾನ್ಯವಾಗಿ ರೈಲು ಸಮಯವು ತಮ್ಮ ವಿಮಾನ ವೇಳಾಪಟ್ಟಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎನ್ನುತ್ತಾರೆ.

ಹೀಗಾಗಿ ಹೆಚ್ಚಿನ ಜನರು ವಿಮಾನ ನಿಲ್ದಾಣವನ್ನು ತಲುಪಲು ವೈಯಕ್ತಿಕ ವಾಹನಗಳು, ಕ್ಯಾಬ್‌ ಅಥವಾ ಬಿಎಂಟಿಸಿಯ ವಾಯು ವಜ್ರ ಬಸ್‌ಗಳನ್ನು ಬಳಸಲು ಬಯಸುತ್ತಾರೆ. ಸೆಂಟ್ರಲ್ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಸವಾರಿಗೆ ಸಾಮಾನ್ಯವಾಗಿ ಸುಮಾರು 900 ರೂ. ವೆಚ್ಚವಾಗುತ್ತದೆ. ಬೈಲ್ (BIAL) ಇತ್ತೀಚೆಗೆ ರೈಡ್- ಹೇಲಿಂಗ್ ಸೇವೆಗಳಿಗೆ ಪಿಕಪ್ ಶುಲ್ಕವನ್ನು ಹೆಚ್ಚಿಸಿದೆ.

ಆರು ರೈಲು ಸೇವೆ

ಪ್ರಸ್ತುತ ಸೌತ್ ವೆಸ್ಟರ್ನ್ ರೈಲ್ವೇಯು ಆರು ರೈಲುಗಳನ್ನು ಕೆಎಸ್ ಆರ್ ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳನ್ನು ಕೆಐಎ ಹಾಲ್ಟ್ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಡಿಇಎಂಯು (ಡೀಸೆಲ್- ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಮತ್ತು ಎಂಇಎಂಯು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಮಿಶ್ರಣವಾಗಿರುವ ಈ ರೈಲುಗಳು ಎಂಟರಿಂದ 12 ಕಾರುಗಳಷ್ಟು ದೊಡ್ಡದಿದೆ.

ಯಾಕೆ ರೈಲು ಬಳಸುತ್ತಿಲ್ಲ ?

ಹೆಚ್ಚಿನ ಬೆಂಗಳೂರಿಗರಿಗೆ ರೈಲುಗಳು ಸೂಕ್ತ ಆಯ್ಕೆಯಲ್ಲ. ಯಾಕೆಂದರೆ ಲಗೇಜ್ ಹೊತ್ತುಕೊಂಡು ಹೋಗುವುದು, ಅವುಗಳೊಂದಿಗೆ ರೈಲು ಹತ್ತುವುದು, ಇಳಿಯುವುದು ಹೆಚ್ಚಿನವರಿಗೆ ಕಷ್ಟದ ಕೆಲಸವಾಗಿರುತ್ತದೆ. ರೈಲು ನಿಲ್ದಾಣವೇನು ಮನೆಯ ಸಮೀಪವಿರುವುದಿಲ್ಲ. ಕನಿಷ್ಠ ರೈಲು ನಿಲ್ದಾಣ ತಲುಪಲು 30 ನಿಮಿಷಗಳಾದರೂ ಬೇಕು. ಹೆಚ್ಚುವರಿ ಸಮಯ ಮತ್ತು ಜೊತೆಗೆ ಯಾರಾದರೂ ಇದ್ದರೆ ಮಾತ್ರ ರೈಲನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಹೆಚ್ಚಿನ ವಿಮಾನ ಪ್ರಯಾಣಿಕರು.

ರೈಲ್ವೇ ಕಾರ್ಯಕರ್ತ ಕೆ. ಎನ್. ಕೃಷ್ಣ ಪ್ರಸಾದ್ ಪ್ರಕಾರ, ಈ ರೈಲುಗಳನ್ನು ವಿಶೇಷವಾಗಿ ವಿಮಾನ ನಿಲ್ದಾಣದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿಲ್ಲ. ಯಲಹಂಕದ ಅನಂತರ ಒಂದೇ ಟ್ರ್ಯಾಕ್ ಇದೆ. ಇದು ಅನೇಕ ಬಾರಿ ವಿಳಂಬಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.

Kempegowda International Airport


ಕೆಂಪೇಗೌಡ ಏರ್ ಪೋರ್ಟ್ ಗೆ ರೈಲು ಸೇವೆ

ಎಸ್‌ಡಬ್ಲ್ಯುಆರ್ ಪ್ರಸ್ತುತ ಕೆಎಸ್‌ಆರ್ ಬೆಂಗಳೂರು (ಎಸ್‌ಬಿಸಿ), ಯಶವಂತಪುರ (ವೈಪಿಆರ್), ಮತ್ತು ಬೆಂಗಳೂರು ಕಂಟೋನ್ಮೆಂಟ್ (ಬಿಎನ್‌ಸಿ) ನಿಲ್ದಾಣಗಳಿಂದ ಆರು ರೈಲುಗಳನ್ನು ನಿರ್ವಹಿಸುತ್ತದೆ. ಅದು ಕೆಐಎ ಹಾಲ್ಟ್ ನಿಲ್ದಾಣದಲ್ಲಿ ನಿಲ್ಲುತ್ತದೆ. ಈ ರೈಲುಗಳು ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಬೆಟ್ಟಹಲಸೂರು, ದೊಡ್ಡಜಾಲ, ಮಲ್ಲೇಶ್ವರಂ, ಲೊಟ್ಟೆಗೊಲ್ಲಹಳ್ಳಿ ಮತ್ತು ಕೊಡಿಗೇಹಳ್ಳಿಯಲ್ಲಿ ನಿಲುಗಡೆಯಾಗುತ್ತವೆ.

ಇದನ್ನೂ ಓದಿ: Kannappa Movie: ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮೋಹನ್‌ ಬಾಬು ಮೊಮ್ಮಗ ಅವ್ರಾಮ್ ಮಂಚು

ಬೈಲ್ ನಿಲ್ದಾಣ ಮತ್ತು ವಿಮಾನ ನಿಲ್ದಾಣದ ಟರ್ಮಿನಲ್‌ಗಳ ನಡುವೆ ಉಚಿತ ಶಟಲ್ ಬಸ್ ಅನ್ನು ಒದಗಿಸುತ್ತದೆ. ರೈಲು ನಿಲ್ದಾಣವನ್ನು ತಲುಪುವ ಐದು ನಿಮಿಷಗಳ ಮೊದಲು ತಲುಪುತ್ತದೆ. ಆದರೆ, ಭಾನುವಾರ ಮಾತ್ರ ಯಾವುದೇ ರೈಲುಗಳಿಲ್ಲ.

ಬೆಳಗ್ಗೆ 5.10 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡುವ ಮೊದಲ ರೈಲು. ಸಂಜೆ 6.20ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಕೊನೆಯ ರೈಲು ಹೊರಡುತ್ತದೆ. ನಗರಕ್ಕೆ ಹಿಂತಿರುಗುವವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ರೈಲು ಬೆಳಗ್ಗೆ 8.18ಕ್ಕೆ ಮತ್ತು ಸಂಜೆ 7.23 ಕ್ಕೆ ಕೊನೆಯ ರೈಲು ಹೋರಾಡುತ್ತದೆ.

Exit mobile version