Site icon Vistara News

Killer Bmtc : ಕಿಲ್ಲರ್ ಬಿಎಂಟಿಸಿಗೆ ವರ್ಷದ ಮೊದಲ ಬಲಿ

Road Accident Killer Bmtc rider dead

ಬೆಂಗಳೂರು: ರಾಜಧಾನಿಯಲ್ಲಿ ಕಿಲ್ಲರ್‌ ಬಿಎಂಟಿಸಿ (killer BMTC) ಬಸ್ಸಿಗೆ ವ್ಯಕ್ತಿಯೊಬ್ಬರು (Road Accident) ಬಲಿಯಾಗಿದ್ದಾರೆ. ಎಳಂಗೋವನ್ ಸೆಂಕತ್ತವಲ್ (43) ಮೃತ ದುರ್ದೈವಿ.

ಜ.6ರಂದು ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಬೈಕ್‌ ಸವಾರ ತೆರಳುತಿದ್ದ, ಅದೇ ಮಾರ್ಗದಲ್ಲಿ ಬಿಎಂಟಿಸಿ ವೋಲ್ವೋ ಬಸ್ ಬರುತ್ತಿತ್ತು.

ಈ ವೇಳೆ ವೋಲ್ವೋ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸವಾರ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಿಂದ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸೇರುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಎಚ್‌ಎಎಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್‌ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ; ರೈಲು ಸೇವೆ ಸ್ಥಗಿತ

ಕಿಲ್ಲರ್‌ ಬಿಎಂಟಿಸಿ ಬಸ್‌ಗೆ 120 ಮಂದಿ ಬಲಿ!

ಬಿಎಂಟಿಸಿ ಬೆಂಗಳೂರಿಗರ ಪ್ರಮುಖ ಸಾರ್ವಜನಿಕ ಸಾರಿಗೆ. ಬಿಎಂಟಿಸಿಗೆ ಎಷ್ಟು ಖ್ಯಾತಿ ಇದ್ದಯೋ ಅಷ್ಟೇ ಅಪಖ್ಯಾತಿಯು ಸೇರಿಕೊಂಡಿದೆ. ಚಾಲಕರ ಅತಿವೇಗ ಚಾಲನೆ, ನಿರ್ಲಕ್ಷ್ಯದಿಂದ ಅದೆಷ್ಟೋ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕಿಲ್ಲರ್‌ ಎಂದೇ ಹೆಸರು ಪಡೆದಿರುವ ಬಿಎಂಟಿಸಿಗೆ ಕಳೆದ ನಾಲ್ಕು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಾಣ (BMTC Accident) ಕಳೆದುಕೊಂಡಿದ್ದಾರೆ.

ತಿಂಗಳಿಗೆ ಒಬ್ಬರಾದರೂ ಬಿಎಂಟಿಸಿಗೆ ಬಲಿಯಾದರು ಎಂಬ ಸುದ್ದಿ ಕೇಳುತ್ತಲೇ ಇರುತ್ತವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಿಂದ ಅಪಘಾತಗಳು ಹೆಚ್ಚಾಗುತ್ತಲೆ ಇವೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ, ಸಾವಿನ‌ ಸಂಖ್ಯೆಗಿಂತ ಗಾಯಾಳುಗಳ ಸಂಖ್ಯೆಯೇ ಹೆಚ್ಚಿದೆ. 2023ರಲ್ಲಿ ಬಿಎಂಟಿಸಿಯಿಂದ ಸತ್ತವರ ಸಂಖ್ಯೆ 34 ಇದ್ದರೆ, 97 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಬಿಎಂಟಿಸಿ ಮಾತ್ರವಲ್ಲ ಕೆಎಸ್‌ಆರ್‌ಟಿಸಿ ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಇದರಿಂದಾಗಿ 2023ರಲ್ಲಿ ಹತ್ತು ಮಂದಿ ಮೃತಪಟ್ಟಿದ್ದರೆ, 28 ಅಪಘಾತಗಳಾಗಿರುವ ವರದಿಯಾಗಿದೆ. ಈ ಮಧ್ಯೆ ಸಂಚಾರಿ ನಿಯಮಗಳನ್ನು ಉಲಂಘಿಸುತ್ತಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಂಚಾರಿ ಪೊಲೀಸರ ತನಿಖೆಯಲ್ಲಿ ಕೆಲ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಚಾಲನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಧಾರವಾಡದಲ್ಲಿ ಸರಣಿ ಅಪಘಾತ; ಪ್ರವಾಸಕ್ಕೆ ಹೊರಟಿದ್ದ ನಾಲ್ವರು ಸ್ಥಳದಲ್ಲೇ ಸಾವು

bmtc accident case

ನಿಯಮ ಉಲ್ಲಂಘಿಸಿ 1 ಕೋಟಿ ದಂಡ ಕಟ್ಟಿದ ಬಿಎಂಟಿಸಿ

ಬಿಎಂಟಿಸಿಯಲ್ಲಿ ಬರೋಬ್ಬರಿ 13, 917 ಸಂಚಾರಿ ನಿಯಮ ಉಲ್ಲಂಘಿಸಿದರೆ, ಕೆಎಸ್‌ಆರ್‌ಟಿಸಿ ಚಾಲಕರು ಮೂರು ಸಾವಿರಕ್ಕೂ ಹೆಚ್ಚು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಬಿಎಂಟಿಸಿ ಬಸ್‌ ಚಾಲಕರಿಂದಲೇ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಆಗಿದೆ. ಹೀಗಾಗಿ 1,04,10,000 ರೂ. ದಂಡವನ್ನು ಬಿಎಂಟಿಸಿ ಇಲಾಖೆ ಕಟ್ಟಿದೆ. 14 ಲಕ್ಷ ರೂ. ದಂಡವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆ ಕಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ‌ ನಡೆದಿರುವ ಅಪಘಾತಗಳ‌ ಅಂಕಿ‌ ಅಂಶ ನೋಡುವುದಾದರೆ,..

ಬಿಎಂಟಿಸಿಗೆ ಬಲಿಯಾದವರು- ಗಂಭೀರ ಗಾಯಗೊಂಡವರು

2020ರಲ್ಲಿ 22 ಮಂದಿ ಸಾವು- 49 ಮಂದಿ ಗಾಯಾಳುಗಳು
2021ರಲ್ಲಿ 27 ಮಂದಿ ಸಾವು- 58 ಮಂದಿ ಗಾಯಾಳುಗಳು
2022ರಲ್ಲಿ 37 ಮಂದಿ ಸಾವು- 85 ಮಂದಿ ಗಾಯಾಳುಗಳು
2023ರಲ್ಲಿ 34 ಮಂದಿ ಸಾವು -97 ಮಂದಿ ಗಾಯಾಳುಗಳು

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಪಘಾತಗಳನ್ನು ಹೆಚ್ಚು ಮಾಡುವರ ವಿರುದ್ಧ ಕ್ರಮಕ್ಕೆ ಇಲಾಖೆ ಸೂಚನೆ ನೀಡಿದೆ. ಮುಂದಿನ ದಿನದಲ್ಲಿ ಚಾಲಕರಿಗೆ ತರಬೇತಿ ಕೊಡಲು ಪೊಲೀಸರು ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version