ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ಸು (killer BMTC) ಡಿಕ್ಕಿಯಾದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬರು ಕೆಳಗೆ ಬಿದ್ದು, (road accident) ಮೃತಪಟ್ಟಿದ್ದಾರೆ. ಯಶವಂತಪುರ ಬಳಿಯ ಗಾರೆಪ್ಪನ ಪಾಳ್ಯ ರಸ್ತೆಯಲ್ಲಿ ಹೂವಿನ ಮಾರ್ಕೆಟ್ ಸಮೀಪ ಅಪಘಾತ ನಡೆದಿದೆ. ಕಳೆದ 10 ದಿನಗಳಲ್ಲಿ ಇದು ಬಿಎಂಟಿಸಿ ಪಡೆದುಕೊಂಡ ಮೂರನೇ ಬಲಿಯಾಗಿದೆ.
ಗಂಗಾಧರ್ (21) ಬಿಎಂಟಿಸಿಗೆ ಸ್ಥಳದಲ್ಲೇ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ. ಇವರು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (HAL)ಗೆ ಇಂಟರ್ನ್‌ಶಿಪ್ ಸರ್ಟಿಫಿಕೇಟ್ ತರಲು ತೆರಳುತ್ತಿದ್ದರು ಎಂದು ಗೊತ್ತಾಗಿದೆ.
ಬಿಎಂಟಿಸಿ ಬಸ್ ಹಿಂಭಾಗದಿಂದ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಕೆಳಗೆ ಬಿದ್ದ ಗಂಗಾಧರ್ ಮೇಲೆ ಬಸ್ಸಿನ ಚಕ್ರ ಹರಿದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಒಯ್ಯಲಾಗಿದೆ. ಅಪಘಾತದ ಸ್ಥಳಕ್ಕೆ ಯಶವಂತಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತ ಎಸಗಿದ್ದ BMTC ಬಸ್ ಚಾಲಕನಿಗೆ ಠಾಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ರಾಜಧಾನಿಯಲ್ಲಿ ಬಿಎಂಟಿಸಿ ಬಸ್ಸುಗಳಿಂದ ದ್ವಿಚಕ್ರ ವಾಹನ ಚಾಲಕರು ಬಲಿಯಾಗುವುದು ಹೆಚ್ಚುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಬಿಎಂಟಿಸಿ ಸಂಬಂಧಿತ ಅಪಘಾತಗಳಲ್ಲಿ ಮೂವರು ಬಲಿಯಾಗಿದ್ದಾರೆ.
ಅಕ್ಟೋಬರ್ 5ರಂದು ನಡೆದ ಅಪಘಾತದಲ್ಲಿ ಓವರ್ ಟೇಕ್ ಮಾಡುವ ವೇಳೆ ಬಿಎಂಟಿಸಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವಿಗೀಡಾಗಿದ್ದರು. ಅಟ್ಟೂರಿನ ಬಳಿಯ ಮದರ್ ಡೈರಿ ಬಳಿ ಅಟ್ವೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್ ಓವರ್‌ಟೇಕ್ ಮಾಡಲು ಹೋದ ಬೈಕ್ ಸವಾರ ಭರತ್ ರೆಡ್ಡಿ (23) ಕೆಳಗೆ ಬಿದ್ದು, ಅವರ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಅಕ್ಟೋಬರ್ 9ರಂದು ಬಿಎಂಟಿಸಿಗೆ ಮೂರು ವರ್ಷದ ಮಗು ಬಲಿಯಾಗಿತ್ತು. ಬೆಂಗಳೂರಿನ ಗಾರೇಪಾಳ್ಯ ಜಂಕ್ಷನಲ್ಲಿ ಘಟನೆ ನಡೆದಿತ್ತು. ತಂದೆಯ ಜತೆ ಬೈಕ್‌ನಲ್ಲಿ ಮಗು ಮನೆಗೆ ಹೋಗುತ್ತಿತ್ತು. ಬಿಎಂಟಿಸಿ ಬಸ್ಸು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಕೆಳಗೆ ಬಿದ್ದು, ಮಗುವಿನ ಮೇಲೆ ಬಸ್ಸು ಹರಿದು ಸ್ಥಳದಲ್ಲೇ ಮೃತಪಟ್ಟಿತ್ತು. ಬಿಎಂಟಿಸಿ ಬಸ್ ಹಾಗೂ ಚಾಲಕರನ್ನು ಹುಳಿಮಾವು ಪೊಲೀಸರು ವಶಕ್ಕೆ ಪಡೆದಿದ್ದರು.
ಕಳೆದ ತಿಂಗಳು ನಾಲ್ಕುವರೆ ವರ್ಷದ ಪುಟ್ಟ ಮಗುವೊಂದು ಬಿಎಂಟಿಸಿಗೆ ಬಲಿಯಾಗಿತ್ತು. ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿತ್ತು. ಮಗಳನ್ನು ಶಾಲೆಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದ ತಂದೆಗೆ ಡಿಕ್ಕಿ ಹೊಡೆದು ಬೀಳಿಸಿದ ಬಸ್ಸು, ಮಗುವಿನ ಮೇಲೆ ಹರಿದು ಜೀವ ತೆಗೆದಿತ್ತು. ತಂದೆ ಗಾಯಗಳೊಂದಿಗೆ ಪಾರಾಗಿದ್ದರು.
ಹೆಚ್ಚಿನ ಬಿಎಂಟಿಸಿ ಬಸ್ಸುಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಇನ್ನು ಹಲವು ಚಾಲಕರಿಂದ ಅಪಘಾತಗಳು ನಡೆಯುತ್ತಿವೆ. ವೇಗದ, ನಿರ್ಲಕ್ಷ್ಯದ ಚಾಲನೆಗೆ ತಡೆ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Killer BMTC: ಚಾಲಕನ ನಿಯಂತ್ರಣ ತಪ್ಪಿದ ಬಸ್‌ನಿಂದ ಸರಣಿ ಅಪಘಾತ, ಬೈಕ್ ಸವಾರ ಸಾವು