ಬೆಂಗಳೂರು: ಸೋಮವಾರ ಕೆಪಿಎಸ್‌ಸಿ (KPSC Recruitment) ಮುಂಭಾಗ ನೂರಾರು ನೊಂದ ಅಭ್ಯರ್ಥಿಗಳು ಜಮಾಯಿಸಿ ಕಣ್ಣೀರು ಹಾಕಿದ್ದರು. ಕೈಗಾರಿಕ ತರಬೇತಿ ಮತ್ತು ಉದ್ಯೋಗ ಆಯುಕ್ತಾಯದಲ್ಲಿನ ಗ್ರೂಪ್ ಸಿ ವೃಂದದ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಆಯ್ಕೆಯಾದರೂ, ಕೆಲಸ ಸಿಗದೇ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ಆಯೋಗದ ವಿಳಂಬ ಧೋರಣೆ ಖಂಡಿಸಿ ಅಭ್ಯರ್ಥಿಗಳು ಕಿಡಿಕಾರಿದರು. 2018ರಲ್ಲಿ ನೋಟಿಫಿಕೇಶನ್ ಮಾಡಿ, 2022 ಫೈನಲಿಸ್ಟ್ ಅನೌನ್ಸ್ ಮಾಡಲು ನಾಲ್ಕು ವರ್ಷ ತೆಗೆದುಕೊಂಡರು. ಬಳಿಕ ಮೆರಿಟ್ ಲಿಸ್ಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆಯೋಗವೇ ಕೋರ್ಟ್ ಮೊರೆಹೋಯಿತು. ಆ ನಂತರ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಟಿಸಿ, ಪಟ್ಟಿಯಲ್ಲಿ ಆದ್ಯತೆ ಬಗ್ಗೆ ಶೀಘ್ರವಾಗಿ ಪ್ರಕಟಿಸಲಾಗುವುದೆಂದು ಆಯೋಗವು ತಿಳಿಸಿತು.
ಇದನ್ನೂ ಓದಿ: Dengue Fever : ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ; ಬೆಂಗಳೂರಲ್ಲಿ 1,230 ಮಂದಿಗೆ ಫೀವರ್!
ಆದರೆ 11 ತಿಂಗಳು ಕಳೆದರೂ ನೇಮಕಾತಿ ಪತ್ರ ಸಿಕ್ಕಿಲ್ಲ. ಸೆಲೆಕ್ಷನ್ ಲಿಸ್ಟ್‌ನಲ್ಲಿ ಹೆಸರು ಬಂದವರು ಸತ್ತೇ ಹೋಗಿದ್ದಾರೆ. ಕೆಲವರು 50 ವರ್ಷ ದಾಟಿದ್ದಾರೆ. ಕುಟುಂಬಗಳು ಬೀದಿಗೆ ಬಂದಿವೆ ಎಂದು ಗೋಳಾಡಿದರು. ಕೆಪಿಎಸ್‌ಸಿಯಿಂದ ಆಯ್ಕೆಯಾದರೂ ಉದ್ಯೋಗ ಸಿಕ್ಕಿಲ್ಲ. ವಯಸ್ಸು 40 ದಾಟುತ್ತಿದ್ದರೂ ಹೋರಾಟ ಮಾಡುವ ಅನಿವಾರ್ಯ ಎದುರಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ಹೊರ ಹಾಕಿದರು.
ವರ್ಷ ಕಳೆದರೂ ಇಂದಿಗೂ ಅಭ್ಯರ್ಥಿಗಳಿಗೆ ನ್ಯಾಯ ಲಭಿಸಿಲ್ಲ. ಸರ್ಕಾರ ಬದಲಾದರೂ ಇವರ ಪರದಾಟಕ್ಕೆ ಮಾತ್ರ ಮುಕ್ತಿ ಸಿಕ್ಕಿಲ್ಲ. 400 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ಉಳಿದ 500 ಅಭ್ಯರ್ಥಿಗಳ ಬಾಳಿನಲ್ಲಿ ಆಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ನೊಂದ ಅಭ್ಯರ್ಥಿಗಳು ಬಿಜೆಪಿ ಸರ್ಕಾರದ ಸಚಿವರಾಗಿದ್ದ ಡಾ. ಸಿ.ಎನ್ ಅಶ್ವತ್ಥನಾರಾಯಣರನ್ನೂ ಭೇಟಿಯಾಗಿದ್ದರು. ಇದೀಗ ಈಗೀನ ಸಚಿವರಾದ ಶರಣ್ ಪ್ರಕಾಶ್ ಪಾಟೀಲರನ್ನೂ ಭೇಟಿಯಾಗಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನ್ಯಾಯ ದೊರಕಿಸಿ ಇಲ್ಲ ದಯಾಮರಣ ನೀಡುವಂತೆ ಕೋರಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ