Site icon Vistara News

KUWJ Calendar: ಕೆಯುಡಬ್ಲ್ಯುಜೆ ಕ್ಯಾಲೆಂಡರ್ ಬಿಡುಗಡೆ; ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

KUWJ calendar

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವತಿಯಿಂದ 2024 ನೂತನ ವರ್ಷದ ಕ್ಯಾಲೆಂಡರ್ (KUWJ Calendar) ಅನ್ನು ಸಂಘದ ಸಭಾಂಗಣದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಅತ್ಯುತ್ತಮ ಚಲನಚಿತ್ರ ವಿಮರ್ಶಕರಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬಾ.ನಾ.ಸುಬ್ರಹ್ಮಣ್ಯ (ಸುಬ್ಬಣ್ಣ) ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಕ್ಕೆ ಭಾಜನರಾದ ಎನ್.ಆರ್.ನಂಜುಂಡೇಗೌಡ ಅವರನ್ನು ಸನ್ಮಾನಿಸಲಾಯಿತು.

ವಿಮರ್ಶೆಗೆ ಅಧ್ಯಯನ ಮುಖ್ಯ

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಎನ್.ಆರ್.ನಂಜುಂಡೇಗೌಡ ಮಾತನಾಡಿ, ಚಲನಚಿತ್ರವನ್ನು ವಿಮರ್ಶಿಸಿ ಬರೆಯಬೇಕಾದರೆ ಅದರ ಸರ್ವಾಂಗೀಣ ಮಾಹಿತಿಯನ್ನು ತಿಳಿದಿರಬೇಕು. ಬದ್ಧತೆಯಿಂದ ವೃತ್ತಿ ಧರ್ಮ ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಾಶಸ್ತಿ ಪುರಸ್ಕೃತರಾದ ಬಾನಸು ಉತ್ತಮ ಕೆಲಸ ಮಾಡಿದ್ದಾರೆ. ಅಷ್ಟೆ ಅಲ್ಲ, ಕನ್ನಡ ಚಿತ್ರೋದ್ಯಮದ ಕಾವಲುಗಾರನಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದರು.

ಯಾವುದೇ ಪೂರ್ವಗ್ರಹ ಪೀಡಿತರಾಗದೆ, ಪ್ರೇಕ್ಷಕರಿಗೆ ಚಿತ್ರದ ಸಾರವನ್ನು ತಲುಪಿಸುವ ಜವಾಬ್ದಾರಿಯನ್ನು ವಿಮರ್ಶಕ ಮಾಡಬೇಕು. ಅದಕ್ಕಾಗಿ ವಿಮರ್ಶಕರಿಗೆ ತರಬೇತಿ ಶಿಬಿರಗಳನ್ನು ನಡೆಸಿ ಚಿತ್ರದ ಸಾರವನ್ನು ಸಾರ್ವಜನಿಕರ ಮುಂದೆ ಹೇಗಿಡಬೇಕೆಂದು ತಿಳಿಸಿಕೊಡುವ ಕೆಲಸವಾಗಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ | ಇಂದಿರಾ ಗಾಂಧಿ ಪಪ್ಪಾಯಿ ‘ದಾಹ’ಕ್ಕೆ ಪೊಲೀಸ್‌ ಜೀಪ್‌ನಲ್ಲಿ ಗೋವಾ ಸುತ್ತಿದ್ದ ಬಾಣಸಿಗ; ಈ ಪುಸ್ತಕ ರೋಚಕ

ಓಲೈಕೆ ಪತ್ರಕರ್ತನಾಗಲಿಲ್ಲ

ಅತ್ಯುತ್ತಮ ಚಿತ್ರ ವಿಮರ್ಶಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾ.ನಾ.ಸುಬ್ರಮಣ್ಯ ಮಾತನಾಡಿ, ವೃತ್ತಿಗೆ ಬಂದಾಗ ಮೊದಲ ಸಂದರ್ಶನ ವನ್ನು ಶಂಕರನಾಗ್ ಮತ್ತು ಅನಂತನಾಗ್ ಅವರೊಂದಿಗೆ ನಡೆಸಿದ್ದು ಮರೆಯಲಾಗದ ಅನುಭವ. ಅರವತ್ತರ ದಶಕದಲ್ಲಿ ರಾಜ್ಯದಲ್ಲಿ ಬರಗಾಲ ಉಂಟಾದ ಸಂದರ್ಭದಲ್ಲಿ ನಿಧಿ ಸಂಗ್ರಹಣೆಯಲ್ಲಿ ವರನಟ ಡಾ.ರಾಜ್ ಕುಮಾರ್ ಅವರೊಂದಿಗಿನ ಓಡನಾಟವನ್ನೂ ಮರೆಯಲಾರೆ ಎಂದು ಹೇಳಿದರು.

ವೈಯುಕ್ತಿಕ ಬದುಕಿನಲ್ಲಿ ನಾನೆಂದೂ ಓಲೈಕೆ ಪತ್ರಕರ್ತನಾಗಲಿಲ್ಲ. ಸಮಷ್ಠಿ ದೃಷ್ಟಿಯಿಂದ ಕೆಲಸ ಮಾಡಿಕೊಂಡು ಬಂದಿರುವುದಕ್ಕೆ ಈ ಗೌರವ ಸಿಕ್ಕಿದೆ. ಈ ಸಂದರ್ಭದಲ್ಲಿ ನೈಜ ಪತ್ರಕರ್ತರ ವೃತ್ತಿಪರವಾದ ಸಂಘಟನೆಯಾಗಿರುವ ಕೆಯುಡಬ್ಲ್ಯುಜೆ ನನ್ನನ್ನು ಗೌರವಿರುವುದು ತವರಿನಲ್ಲಿ ಸಿಕ್ಕ ಸನ್ಮಾನವಾಗಿದೆ. ಅದಕ್ಕಾಗಿ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

ಸತತ ಹೊಸ ಪ್ರಯತ್ನಕ್ಕೆ ಶ್ಲಾಘನೆ

ನೂತನ ಕ್ಯಾಲೆಂಡರ್ (2024) ಬಿಡುಗಡೆಗೊಳಿಸಿ ಮಾತನಾಡಿದ, IFWJ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ ಅವರು, ಹೊಸ ಪ್ರಯತ್ನಗಳನ್ನು ಮಾಡುವ ಮೂಲಕ ಶಿವಾನಂದ ನೇತೃತ್ವದಲ್ಲಿ ಸಂಘ ಉತ್ತಮ ಕೆಲಸವನ್ನು ಮಾಡುತ್ತಿದೆ. ಸದಸ್ಯರಿಗಾಗಿ ಕೆಯುಡಬ್ಲೂೃಜೆ ಕ್ಯಾಲೆಂಡರ್ ಮಾಡುತ್ತಿರುವುದು ಅಭಿನಂದನೀಯ ಎಂದರು.

ವೃತ್ತಿ ಬಾಂಧವರಿಗೆ ಸಂಘದ ಗೌರವ

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ವೃತ್ತಿ ಬಾಂಧವರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಂಘ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿರುವ ಬಾನಾಸು ಮತ್ತು ನಂಜುಂಡೇಗೌಡ ಅವರಿಬ್ಬರದು ತುಂಬಿದ ವ್ಯಕ್ತಿತ್ವ. ಅವರನ್ನು ಸಂಘದ ವೇದಿಕೆಯಲ್ಲಿ ಗುರುತಿಸಿ ಸನ್ಮಾನಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಿಂದ ಸಂಘವು ಹಿರಿಯ ಪತ್ರಕರ್ತರ ಮನೆಗೆ ತೆರಳಿ ಅವರನ್ನು ಗೌರವಿಸುವ ಮನೆಯಂಗಳದಲ್ಲಿ ಮನಃತುಂಬಿ ನಮನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಅದು ಹಿರಿಯ ಪತ್ರಕರ್ತರಿಗೂ ಧನ್ಯತಾಭಾವ ಮೂಡಿಸಿದೆ ಎಂದರು.

ಬಾನಾಸುಗೆ ಅಭಿಮಾನದ ಗೌರವ

ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮ ಶಿವಮೊಗ್ಗ, ಹಿರಿಯ ಪತ್ರಕರ್ತರಾದ ಸಾವಿತ್ರಿ ಸುರೇಶ್ ಕುಮಾರ್, ತುಂಗ ರೇಣುಕಾ ಅವರು ಸುಬ್ಬಣ್ಣ ಅವರನ್ನು ಗೌರವಿಸುವ ಮೂಲಕ ಕೆಯುಡಬ್ಲ್ಯುಜೆ ತನಗೆ ತಾನೆ ಅಭಿಮಾನದಿಂದ ಗೌರವಿಸಿಕೊಂಡಂತಾಗಿದೆ ಎಂದು ಶ್ಲಾಸಿದರು. ಶಿವಾನಂದ ತಗಡೂರು ನೇತೃತ್ವದಲ್ಲಿ ಸಂಘ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಚಲನ ಚಿತ್ರ ಹಿರಿಯ ಪತ್ರಕರ್ತ ಚೇತನ್ ನಾಡಿಗೇರ್, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ ಅವರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಸಚಿವ ಭೈರತಿ ಸುರೇಶ್ ಅವರ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡಿರುವ ಡಿ.ಎಲ್.ಹರೀಶ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | ಗ್ಲೋಕಲ್‌ ಲೋಕ ಅಂಕಣ: 2024ರ ಹೊಸ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದೆ ಜನರೇಟಿವ್ ಎಐ

ಚಿತ್ರ ರಂಗದ ಒಳಹೊರಗನ್ನು ಬಲ್ಲ ಬಾನಾಸು ಅವರು ಕಾವಲುಗಾರ ಇದ್ದ ಹಾಗೆ. ಪ್ರತಿಯೊಂದನ್ನೂ ಬಹಳ ಸೂಕ್ಷ್ಮವಾಗಿ ಗಮನಿಸಿ ಅವಲೋಕಿಸುತ್ತಾರೆ. ಅವರ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಅವರೊಬ್ಬ ನಿಷ್ಠುರವಾದಿ. ಇದ್ದದ್ದನ್ನು ಇದ್ದ ಹಾಗೆ ಹೇಳುವ ವ್ಯಕ್ತಿ. ಕನ್ನಡ ಚಿತ್ರರಂಗಕ್ಕೆ ಅವರ ಒಟ್ಟು ಕೊಡುಗೆ ಮತ್ತು ಮೌಲ್ಯಾಧಾರಿತವಾದದ್ದು. ರಾಷ್ಟ್ರ ಪ್ರಶಸ್ತಿ ಕೂಡ ಅವರಿಗೆ ಸಿಕ್ಕ ದೊಡ್ದ ಅರ್ಹ ಗೌರವ.
| ಎನ್.ಆರ್. ನಂಜುಂಡೇಗೌಡ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ

ನಾನು ಎಂದೂ ಗಾಸಿಪ್ ಸುದ್ದಿ ಬರೆದಿಲ್ಲ. ಓಲೈಕೆ ಪತ್ರಿಕೋದ್ಯಮ ಮಾಡಲಿಲ್ಲ. ಚಲನಚಿತ್ರ ಪುಸ್ತಕಕ್ಕೆ ಈಗಾಗಲೆ ಪ್ರಶಸ್ತಿಗಳು ಬಂದಿವೆ. ವಿಮರ್ಶೆಗಾಗಿ 2021ರ ಸಾಲಿನ ಪ್ರಶಸ್ತಿ ನನಗೆ ಬಂದಿದ್ದು, ಈ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಲನಚಿತ್ರ ಪತ್ರಕರ್ತ ಎಂಬುವುದು ನನಗೆ ಹೆಮ್ಮೆ. ಕೆಯುಡಬ್ಲ್ಯುಜೆ ಗೌರವಿಸಿದ್ದು ಅಭಿಮಾನ ಹೆಚ್ಚಿಸಿದೆ.
| ಬಾ.ನಾ.ಸುಬ್ರಹ್ಮಣ್ಯ, ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ವಿಮರ್ಶಕ

ಬಾನಾಸು ನಮಗೆಲ್ಲ ಪ್ರೀತಿಯ ’ಸುಬ್ಬಣ್ಣ ’ ನಮಗೆಲ್ಲ ಏನೇ ಮಾಹಿತಿ ಬೇಕಿದ್ದರೂ ಮೊದಲು ಫೋನ್ ಮಾಡುವುದೇ ಸುಬ್ಬಣ್ಣ ಅವರಿಗೆ. ತಡವಾಗಿ ಆದರೂ ಅವರಿಗೆ ಪ್ರಶಸ್ತಿ ಬಂದಿರೋದು ನಮಗೆಲ್ಲ ಅತ್ಯಂತ ಖುಶಿ ಕೊಟ್ಟಿದೆ.
| ತುಂಗರೇಣುಕಾ, ಹಿರಿಯ ಪತ್ರಕರ್ತೆ

ಕಾರ್ಯನಿರತ ಪತ್ರಕರ್ತರ ಸಂಘ ಶಿವಾನಂದ ತಗಡೂರು ನೇತೃತ್ವದಲ್ಲಿ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಹಾಗೆಯೇ ಮಹಿಳಾ ಪತ್ರಕರ್ತರ ಪರವಾಗಿಯೂ ಕೆಯುಡಬ್ಲ್ಯುಜೆ ಸದಾ ಧ್ವನಿ ಎತ್ತುವ ಮೂಲಕ ಬೆಂಬಲವಾಗಿರಲಿ.
| ಸಾವಿತ್ರಿ ಸುರೇಶ್ ಕುಮಾರ್, ಹಿರಿಯ ಪತ್ರಕರ್ತೆ

Exit mobile version