Site icon Vistara News

Nudi Namana: ಅಗಲಿದ ಹಿರಿಯ ಪತ್ರಕರ್ತ ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

KUWJ homage to departed senior journalists

ಬೆಂಗಳೂರು: ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್, ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯೂಜೆ) ನುಡಿ ನಮನ ಸಲ್ಲಿಸಿ, ಅವರೆಲ್ಲರ ಭಾವಚಿತ್ರಕ್ಕೆ ಪುಷ್ಪನಮನ (Nudi Namana) ಸಲ್ಲಿಸಲಾಯಿತು.

ನಗರದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಚೇತನಗಳ ಸ್ಮರಣಾರ್ಥ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ನುಡಿನಮನ ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಅಗಲಿದ ಹಿರಿಯ ಪತ್ರಕರ್ತರರುಗಳು ಕೆಯುಡಬ್ಲ್ಯೂಜೆ ಜತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.

ಜಿಎನ್‌ಆರ್ ಪತ್ರಿಕೋದ್ಯಮದಲ್ಲಿ ಶಿಸ್ತಿನ ಸಿಪಾಯಿ: ಬಿ.ಕೆ ರವಿ

ಕೊಪ್ಪಳ ವಿ.ವಿ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥ್ ರಾವ್ ಅವರ ಕೊಡುಗೆ ಅನನ್ಯ. ಪ್ರಜಾವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಸಾಪ್ತಾಹಿಕವನ್ನು ಅವರು ವಿಭಿನ್ನವಾಗಿ ರೂಪಿಸಿದರಲ್ಲದೆ, ಪತ್ರಿಕೋದ್ಯಮದಲ್ಲಿ ಅವರು ಶಿಸ್ತಿನ ಸಿಪಾಯಿಯಾಗಿಯೂ ಜನಪ್ರಿಯರಾದರು ಎಂದು ತಮಗೆ ಮಾರ್ಗದರ್ಶನ ನೀಡಿದ ನೆನಪನ್ನು ಮೆಲುಕು ಹಾಕಿದರು.

ಅಗಲಿದ ಹಿರಿಯರ ನೆನಪಿನಲ್ಲಿ ಕೆಯುಡಬ್ಲ್ಯೂಜೆ ಕಾರ್ಯಕ್ರಮ ರೂಪಿಸಿ ಮಾದರಿ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದ ಅವರು, ಸಚ್ಚಿದಾನಂದಮೂರ್ತಿ ಅವರು ದೆಹಲಿಯಲ್ಲಿ ಮೂರು ದಶಕಗಳ ಕಾಲ ಪತ್ರಕರ್ತನಾಗಿ ಉತ್ತಮ ಸೇವೆ ಸಲ್ಲಿಸಿದರು ಎಂದರು.

ಇದನ್ನೂ ಓದಿ | Karnataka Sambhrama 50: ಹೋರಾಟ, ತ್ಯಾಗ-ಬಲಿದಾನದಿಂದ ಕನ್ನಡ ನಾಡು ಉದಯ: ಸಿದ್ದರಾಮಯ್ಯ

ಸಚ್ಚಿ ಅವರ ಪ್ರತಿಭೆ ಅನನ್ಯ: ಎಚ್. ಬಿ. ದಿನೇಶ್

ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕ ಎಚ್.ಬಿ. ದಿನೇಶ್ ಅವರು ಮಾತನಾಡಿ, ದೆಹಲಿ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಚ್ಚಿದಾನಂದ ಮೂರ್ತಿ ಸದಾ ಸ್ನೇಹಪರರಾಗಿದ್ದರು. ರಾಜ್ಯದ ಅಭಿವೃದ್ಧಿ ಯೋಜನೆಗೆ ದೆಹಲಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದರು ಎಂದು ತಿಳಿಸಿದರು.

ಸಿ.ಆರ್.ಕೆ. ಚಳವಳಿಗಳ ನೇತಾರ: ಸಿದ್ಧನಗೌಡ ಪಾಟೀಲ್

ನವ ಕರ್ನಾಟಕ ಪಬ್ಲಿಕೇಶನ್ಸ್‌ನ ʼಹೊಸತುʼ ಮಾಸಿಕದ ಸಂಪಾದಕ ಸಿದ್ಧನಗೌಡ ಪಾಟೀಲ್ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿ ಹುದ್ದೆ ಸೇರಿ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಸಿ.ಆರ್.ಕೃಷ್ಣರಾವ್ ಅವರು ಚಳವಳಿಗಳ ನೇತಾರ ಆಗಿದ್ದರು. ಸಿ.ಆರ್.ಕೆ. ರಾವ್ ಅವರು ಪತ್ರಕರ್ತರ ಮತ್ತು ಪತ್ರಿಕಾ ಸಂಸ್ಥೆಗಳ‌ ಕೊಂಡಿಯಾಗಿ ಪ್ರಧಾನ ಪಾತ್ರ ವಹಿಸಿಕೊಂಡಿದ್ದರು ಎಂದು ಗುಣಗಾನ ಮಾಡಿದರು.

ಮಣೂರ ಅವರ ಪತ್ರಿಕಾ ರಂಗದ ಸೇವೆ ಅನನ್ಯ: ಬಿ.ವಿ.ಮಲ್ಲಿಕಾರ್ಜುನಯ್ಯ

ಹಿರಿಯ ಪತ್ರಕರ್ತರಾಗಿದ್ದ ಪಿ.ಎಂ.ಮಣೂರ ಅವರು ಬಹಳಷ್ಟು ಪತ್ರಕರ್ತರನ್ನು ಬೆಳೆಸುವ ಮೂಲಕ, ಪತ್ರಿಕೋದ್ಯಮದಲ್ಲಿ ಅಜಾತಶತ್ರುವಾಗಿದ್ದರು ಎಂದು ಐ.ಎಫ್.ಡಬ್ಲ್ಯೂ.ಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಹೇಳಿದರು.
ವಿವಿಧ ವಿಷಯಗಳಲ್ಲಿ ಪ್ರಭುತ್ವ ಹೊಂದಿದ್ದ ಮಣೂರರವರ ಪತ್ರಿಕಾ ಸೇವೆ ನಿಜಕ್ಕೂ ಸ್ಮರಣೀಯ ಎಂದರು.

ಕೆ. ಪ್ರಹ್ಲಾದರಾವ್ ಉತ್ತಮ ಸಂಘಟಕರಾಗಿದ್ದರು: ಪಿ. ಶೇಷಚಂದ್ರಿಕಾ

ಕೋಲಾರವು ಹಿರಿಯ ಪತ್ರಕರ್ತರಾಗಿದ್ದ ಕೆ.ಪ್ರಹ್ಲಾದರಾವ್ ಅವರ ಕರ್ಮಭೂಮಿ ಆಗಿದ್ದರೂ, ಜಿಲ್ಲಾ ಮಟ್ಟದ ಪತ್ರಕರ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ಅವರು ಸರ್ಕಾರ ಅಧಿಕಾರಿಗಳ ಬಳಿಗೆ ಹೋಗುವ ಮೂಲಕ ಉತ್ತಮ ಸಂಘಟಕರೂ ಆಗಿದ್ದರು ಎಂದು ಹಿರಿಯ ಪತ್ರಕರ್ತ ಪಿ.ಶೇಷಚಂದ್ರಿಕಾ ನುಡಿದರು.

ಹಿರಿಯ ಪತ್ರಕರ್ತರಾದ ಈಶ್ವರ ದೈ ತೋಟ ಅವರು ಮಾತನಾಡಿ, ತಾವು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಇವರೆಲ್ಲರ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು. ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ.ಜೆ.ಎಂ.ಚಂದುನವರ, ಸಾಗ್ಗರೆ ರಾಮಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಚೇತನಗಳ ಗುಣಗಾನ ಮಾಡಿದರು.

ವಿತರಕರಿಬ್ಬರ ಸಾವಿಗೆ ಸಂತಾಪ

ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಾದ ಕುಮಾರ್ ಮತ್ತು ಮನೋಜ್ ಅವರಿಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಅವರುಗಳ ಬಗ್ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ.ಜಿಕ್ರಿಯಾ, ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ್ ಸೇರಿ ಸಂಘದ ಹಲವಾರು ಸದಸ್ಯರು ನುಡಿನಮನ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯ ಸಂಘದ ಖಜಾಂಚಿ ವಾಸುದೇವ ಹೊಳ್ಳ ಅವರು ವಂದನಾರ್ಪಣೆ ಮಾಡಿದರು.

ಕೆಯುಡಬ್ಲ್ಯೂಜೆಗೆ 1 ಲಕ್ಷ ರೂ ದತ್ತಿನಿಧಿ ಪ್ರತಿಷ್ಠಾಪಿಸಿದ ಕೆಪಿಎಸ್ ಪ್ರಮೋದ್

ಬೆಂಗಳೂರು: ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಅಮೋಘ ನ್ಯೂಸ್‌ನ ಕೆಪಿಎಸ್ ಪ್ರಮೋದ್ ಅವರು ತಮ್ಮ ತಂದೆಯ ಹೆಸರಿನಲ್ಲಿ 1 ಲಕ್ಷ ರೂ. ದೇಣಿಗೆ ಚೆಕ್ ಅನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ ಇದ್ದರು.

ಇದನ್ನೂ ಓದಿ | Vistara Kannada Sambhrama : ನ. 4ರಂದು ವಿಸ್ತಾರ ಕನ್ನಡ ಸಂಭ್ರಮ; ಇದು ವಿಸ್ತಾರ ನ್ಯೂಸ್‌ ವರ್ಷ ವೈಭವ

ಮಂಡ್ಯ ಜಿಲ್ಲೆಯ ಪೌರವಾಣಿ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಕೆ.ಪ್ರಹ್ಲಾದರಾವ್ ಅವರು ಉದಯ ಟಿವಿ ಜಿಲ್ಲಾ ವರದಿಗಾರರಾಗಿ, ಪಿಟಿಐ ವರದಿಗಾರರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಸ್ಮರಣಾರ್ಥವಾಗಿ ಪ್ರಶಸ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿವರ್ಷ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತ ಕೆ.ಪ್ರಹ್ಲಾದರಾವ್ ಹೆಸರಿನಲ್ಲಿ ಒಬ್ಬರು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಪ್ರಶಸ್ತಿಗೆ ತಂದೆಯ ಹೆಸರಿನಲ್ಲಿ ದೇಣಿಗೆ ನೀಡಿದ ಕೆಪಿಎಸ್ ಪ್ರಮೋದ್ ಅವರಿಗೆ ಕೆಯುಡಬ್ಲ್ಯೂಜೆ ಅಭಿನಂದನೆ ಸಲ್ಲಿಸಿದೆ.

Exit mobile version