ಬೆಂಗಳೂರು: ಸಪ್ತಕ ಸಂಸ್ಥೆಯಿಂದ ಕಲಾತಪಸ್ವಿ ಲಲಿತಾ ಉಭಯಕರ ಸ್ಮರಣಾರ್ಥ ʼಲಲಿತಾ ನಮನʼ ವಿಶೇಷ ಸಂಗೀತ ಕಾರ್ಯಕ್ರಮವನ್ನು ಅಕ್ಟೋಬರ್ 29ರಂದು ಸಂಜೆ 5.30ಕ್ಕೆ ನಗರದ ಮಲ್ಲೇಶ್ವರದ 8ನೇ ಮುಖ್ಯರಸ್ತೆ, ಕೆನರಾ ಯೂನಿಯನ್‌ನ ಟಿ.ಎಸ್.ಆರ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಚಾಲಕ ಜಿ.ಎಸ್.ಹೆಗಡೆ ತಿಳಿಸಿದ್ದಾರೆ.
ಕೊಲ್ಕತ್ತಾದ ತಬಲಾ ಕಲಾವಿದ ಪಂಡಿತ್ ರೂಪಕ ಭಟ್ಟಾಚಾರ್ಜಿ, ಗಾಯಕ ಉಸ್ತಾದ್ ವಾಸಿಂ ಅಹಮ್ಮದ್ ಖಾನ್, ಬೆಂಗಳೂರಿನ ಹಾರ್ಮೋನಿಯಂ ಲೆಹರಾ ಕಲಾವಿದ ಸತೀಶ ಕೊಳ್ಳಿ, ಹಾರ್ಮೋನಿಯಂ ಕಲಾವಿದ ವ್ಯಾಸಮೂರ್ತಿ ಕಟ್ಟಿ, ತಬಲಾ ಕಲಾವಿದ ಉದಯರಾಜ ಕರ್ಪೂರ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಆಶ್ವಾಸನ ಫೌಂಡೇಶನ್ ಮೂಲಕ ಹಲವು ಸಮಾಜಸೇವಾ ಕಾರ್ಯಗಳನ್ನು ಮಾಡಿರುವ ಲಲಿತಾ ಉಭಯಕರ ಅವರ ನೆನಪಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಮಕ್ಕಳ ಕಥೆ | ಕೇಳಿದ್ದೆಲ್ಲಾ ಕೊಡುವ ಪಾತ್ರೆಯೂ, ಮುಟ್ಟಿದವರಿಗೆ ಬಾರಿಸುವ ಬೆತ್ತವೂ!
ಸತ್ಕಾರ್ಯಗಳ ಸಾಗರ ಆಶ್ವಾಸನ ಫೌಂಡೇಶನ್
ಪಾರಂಪರಿಕ ಕೂಡು ಕುಟುಂಬ ವ್ಯವಸ್ಥೆ ಕಣ್ಮರೆಯಾಗುತ್ತಿರುವುದನ್ನು ಎರಡು ದಶಕಗಳ ಹಿಂದೆಯೇ ಮನಗಂಡು, ಅದರ ನೇರ ಗಂಭೀರ ಪರಿಣಾಮ ಹಿರಿಯ ಜೀವಿಗಳ ಮೇಲೆ ಆಗುತ್ತಿರುವುದನ್ನು ಕಣ್ಣಾರೆ ನೋಡಿದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಚಂದಾವರ ಗ್ರಾಮದ ಲಲಿತಾ ಶಿವರಾಮ ಉಭಯಕರ್, 1993ರಲ್ಲಿ ಆಶ್ವಾಸನ ಫೌಂಡೇಶನ್ ಎಂಬ ಸಾಮಾಜಿಕ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು.
ಮಹಾನಗರ ಬೆಂಗಳೂರಿನಲ್ಲಿ ಎಂಟು ಕಡೆ ಹಿರಿಯ ಜೀವಿಗಳ ಸಂಧ್ಯಾ ಸಮಯಕ್ಕಾಗಿ ಸಹಾಯ ಸೇವಾ ಕೇಂದ್ರಗಳನ್ನು ಫೌಂಡೇಶನ್ ಸ್ಥಾಪಿಸಿದೆ. ಈ ಮೂಲಕ ಹಿರಿಯರಿಗೆ ಬೇಕಾದ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಆಧ್ಯಾತ್ಮ ವಿಚಾರ ಸಂಕಿರಣ, ಸಾಮಾಜಿಕವಾಗಿ ಬದಲಾಗುತ್ತಿರುವ ಜಗತ್ತಿನ ಅನೇಕ ವಿಷಯಗಳ ವಿವರಣೆ ನೀಡುವುದು, ಆರೋಗ್ಯ ತಪಾಸಣೆ, ವಿದ್ಯುತ್, ನೀರಿನ ಬಿಲ್, ವಿಮಾ ಕಂತುಗಳ ಪಾವತಿ ಮಾಡಲು ಸಹಾಯ ಹೀಗೆ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ, ಧನಸಹಾಯದ ಬದಲು, ಅಗತ್ಯ ಇರುವ ಔಷಧೋಪಚಾರ, ಬಟ್ಟೆ, ಅವಶ್ಯಕತೆ ಇರುವ ವಸ್ತುಗಳ ನಿರಾಶ್ರಿತರು, ಕೊಳೆಗೇರಿ ನಿವಾಸಿಗಳ ಸ್ಥಳಕ್ಕೇ ಹೋಗಿ ಸವಲತ್ತು ವಿತರಣೆ ಮಾಡುವ ಕಾರ್ಯ ಆಶ್ವಾಸನ ಫೌಂಡೇಶನ್ ಮಾಡುತ್ತಿದೆ.
ಪ್ರತಿ ವರ್ಷವೂ ಹಿರಿಯರ ದಿನಾಚರಣೆ ಆಚರಿಸಿ ಪ್ರಾಜ್ಞರಿಂದ ಉಪನ್ಯಾಸ, ಪ್ರಸ್ತುತ ಸದಸ್ಯರಲ್ಲಿ ಹಿರಿಯರಲ್ಲಿ ಹಿರಿಯರು (ತೊಂಬತ್ತು ವರ್ಷ ಮೇಲ್ಪಟ್ಟವರು) ಸನ್ಮಾನಿಸುವುದು, ರಾಜ್ಯ ಮಟ್ಟದಲ್ಲಿ ಅನೇಕ ವರ್ಷಗಳ ಕಾಲ ಸಂಗೀತ, ಚಿತ್ರಕಲೆ, ಗುಡಿ ಕೈಗಾರಿಕೆ, ಯಕ್ಷಗಾನ ವಿಭಾಗದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ದೂರದೂರಿನಿಂದ ಕರೆದು ಶಾಲು ಹೊದೆಸಿ ಗೌರವಿಸಿ, ಪುಟ್ಟದಾದ ಹಮ್ಮಿಣಿ ನೀಡಿ ಆಶ್ವಾಸನ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗುತ್ತದೆ.
ಲಲಿತಾ ಶಿವರಾಮ ಉಭಯಕರ್ ಪುತ್ರ ದೇವನಂದನ್, ಪ್ರತಿ ವರ್ಷವೂ ಲಲಿತಾ ಶಿವರಾಮ ಉಭಯಕರ್ ಅವರ ನೆನಪಿನಲ್ಲಿ ಯುವ ಸಂಗೀತೋತ್ಸವ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಈ ಉತ್ಸವ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು, ಉಸ್ತಾದ್ ರಶೀದ್ ಖಾನ್, ಪಂಡಿತ್ ಯೋಗೀಶ್ ಸಂಶಿ, ಪಂಡಿತ್ ಉದಯ್ ಭಾವಲ್ಕರ್ ಹೀಗೆ ಹಲವಾರು ಕಲಾವಿದರು ಪ್ರಸಿದ್ಧಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ಅಕ್ಟೋಬರ್ 15ರಂದು ಆಶ್ವಾಸನ -2022 ಪ್ರಶಸ್ತಿ ಪ್ರದಾನ
ಹತ್ತಾರು ವರ್ಷಗಳಿಂದ ಆಶ್ವಾಸನ ಸೇವಾ ಸಂಸ್ಥೆಯ ಸ್ವಯಂ ಸೇವಕನಾಗಿ, ಆಯ್ಕೆ ಸಮಿತಿ ಮುಖ್ಯಸ್ಥನಾಗಿ ದುಡಿಯುವ ಭಾಗ್ಯ ಈಗಿನ ಆಶ್ವಾಸನ ಫೌಂಡೇಶನ್ ಅಧ್ಯಕ್ಷೆ ಮಾಲವಿಕಾ ಉಭಯಕರ್ ಬಿಜೂರ ಅವರು ನನಗೆ ನೀಡಿದ್ದು ನನ್ನ ಸೌಭಾಗ್ಯ. ಈ ಬಾರಿ ಆಶ್ವಾಸನ ಫೌಂಡೇಶನ್‌ನಿಂದ ಅಕ್ಟೋಬರ್ 15 ರಂದು ಬೆಳಗ್ಗೆ 10ಕ್ಕೆ ನಗರದ ಲೆವೆಲ್ಲೆ ರಸ್ತೆಯ ರೋಟರಿ ಕ್ಲಬ್ ಆಫ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹಿರಿಯರ ದಿನಾಚರಣೆಯಲ್ಲಿ ದಾಂಡೇಲಿಯ ಉಸ್ತಾದ್ ಕಾಸಿಂ ಜಮಾದಾರ್(ಸಂಗೀತ), ನಿಟ್ಟೂರಿನ ಸಂತೆಗುಳಿ ನಾರಾಯಣ ಭಟ್ಟ( ಯಕ್ಷಗಾನ), ಕೆಕ್ಕಾರಿನ ಜಿ.ಡಿ.ಭಟ್ಟ (ಚಿತ್ರ ಕಲೆ), ನವಲಗುಂದದ ರಮತಾಬೀ ಕುತುಬ್ಬೀನ್ ಪಟವೇಗಾರ್ (ನೇಕಾರ ವೃತ್ತಿ) ಇವರಿಗೆ ಆಶ್ವಾಸನ -2022 ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಜಿ.ಎಸ್. ಹೆಗಡೆ ತಿಳಿಸಿದ್ದಾರೆ.
ಇದನ್ನೂ ಓದಿ | ಕನ್ನಡಕ್ಕಾಗಿ ʼಕೈʼ ಎತ್ತಲು ಈಗ ಕಾನೂನು ಬಲ: ಸಮಗ್ರ ಭಾಷಾ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ