Site icon Vistara News

Lehar Singh Siroya : ಬಿಬಿಎಂಪಿ ಆಸ್ಪತ್ರೆಗೆ ಸಿಬಿನಾಟ್, ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಯಂತ್ರ ಕೊಡುಗೆ ನೀಡಿದ ಲೆಹರ್ ಸಿಂಗ್ ಸಿರೋಯಾ

Lehar Singh Siroya

ಬೆಂಗಳೂರು: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ (Lehar Singh Siroya) ಅವರು, ಚಾಮರಾಜಪೇಟೆಯ ಡಾ.ಬಾಬು ಜಗಜೀವನ್‌ರಾಮ್‌ ಬಿಬಿಎಂಪಿ ರೆಫರಲ್‌ ಆಸ್ಪತ್ರೆಗೆ 50 ಲಕ್ಷ ರೂಪಾಯಿ ಮೌಲ್ಯದ ಸಿಬಿನಾಟ್(CBNAAT) ಮತ್ತು ಮೊಬೈಲ್‌ ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಯಂತ್ರಗಳ ಕೊಡುಗೆ ನೀಡಿದ್ದಾರೆ.

ಕ್ಷಯ ರೋಗಿಗಳ ತಪಾಸಣೆಗೆ ಬಳಕೆಯಾಗುವ ಈ ಎರಡು ವೈದ್ಯಕೀಯ ಉಪಕರಣಗಳನ್ನು ಮಂಗಳವಾರ ಶಾಸಕರಾದ ಜಮೀರ್‌ ಅಹ್ಮದ್‌ ಖಾನ್‌ ಅವರ ಉಪಸ್ಥಿತಿಯಲ್ಲಿ ಚಾಮರಾಜಪೇಟೆಯ ಡಾ.ಬಾಬು ಜಗಜೀವನ್‌ ರಾಮ್‌ ಬಿಬಿಎಂಪಿ ರೆಫರಲ್‌ ಆಸ್ಪತ್ರೆಗೆ ಆಸ್ಪತ್ರೆಗೆ ಹಸ್ತಾಂತರ ಮಾಡಿದರು.

ಸಿಬಿನಾಟ್ ಯಂತ್ರವು 2 ಗಂಟೆಗಳಲ್ಲಿ ಪರೀಕ್ಷಾ ಫಲಿತಾಂಶ ನೀಡುತ್ತದೆ. ಆರೋಗ್ಯ ಸೌಲಭ್ಯಗಳಿಂದ ವಂಚಿತವಾದ ಪ್ರದೇಶಗಳಲ್ಲಿ ಸಮುದಾಯಗಳನ್ನು ಕ್ಷಯ ಪರೀಕ್ಷೆಗೊಳಪಡಿಸಲು ಮೊಬೈಲ್‌ ಎಕ್ಸ್‌-ರೇ ಯಂತ್ರ ನೆರವಾಗಲಿದೆ. ಇವುಗಳಿಗೆ ಒಟ್ಟು 50 ಲಕ್ಷ ರೂಪಾಯಿ ವೆಚ್ಚವಾಗಿದೆ.

ಇದನ್ನೂ ಓದಿ | ಒಂದು ದೇಶ ಒಂದು ಪೊಲೀಸ್‌ ಸಮವಸ್ತ್ರಕ್ಕೆ ಕರ್ನಾಟಕ ಒಪ್ಪಿಗೆ: ಕೇಂದ್ರದ ಪ್ರಸ್ತಾವನೆಗೆ ಓಕೆ ಎಂದ ಗೃಹ ಇಲಾಖೆ

ರಾಜ್ಯಸಭೆ ಸದಸ್ಯ ಲೆಹರ್‌ ಸಿಂಗ್‌ ಮಾತನಾಡಿ, “ಆಧುನಿಕ ತಪಾಸಣಾ ವ್ಯವಸ್ಥೆಯುಳ್ಳ ಸಿಬಿನಾಟ್ ಮತ್ತು ತ್ವರಿತ ಖಚಿತ ಫಲಿತಾಂಶ ನೀಡುವವುದನ್ನು ತಿಳಿಸುವ ಮೊಬೈಲ್‌ ಎಕ್ಸ್‌-ರೇ ಉಪಕರಣ ಕ್ಷಯವನ್ನು ಮಣಿಸಲು ಸಹಕಾರಿ. ಪ್ರಧಾನಮಂತ್ರಿ ಕ್ಷಯ-ಮುಕ್ತ ಭಾರತ ಅಭಿಯಾನದಲ್ಲಿ ಎಲ್ಲರೂ ತಮ್ಮ ಕೈಲಾದ ಕೊಡುಗೆ ನೀಡಬೇಕು. 2025 ರೊಳಗೆ ಕರ್ನಾಟಕವನ್ನು ಕ್ಷಯ ಮುಕ್ತಗೊಳಿಸಲು ಕೈ ಜೋಡಿಸಬೇಕು” ಎಂದು ಮನವಿ ಮಾಡಿದರು.

ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿ “ಡಾ.ಬಾಬು ಜಗಜೀವನ್‌ ರಾಮ್‌ ಬಿಬಿಎಂಪಿ ಆಸ್ಪತ್ರೆಗೆ ಕ್ಷಯ ಪರೀಕ್ಷೆಗಾಗಿ 50 ಲಕ್ಷ ರೂ. ಮೌಲ್ಯದ ಸಿಬಿನಾಟ್ (CBNAAT) ಮತ್ತು ಮೊಬೈಲ್‌ ಎಕ್ಸ್‌-ರೇ ಯಂತ್ರವನ್ನು ದಾನ ಮಾಡಿರುವುದಕ್ಕೆ ರಾಜ್ಯಸಭೆ ಸದಸ್ಯ ಲೆಹರ್‌ ಸಿಂಗ್‌ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ, ಪಕ್ಷಾತೀತವಾಗಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಟಿಬಿ ರೋಗಪತ್ತೆಗೆ ಈ ಅತ್ಯಾಧುನಿಕ ಯಂತ್ರಗಳನ್ನು ನೀಡಿ ರೋಗಿಗಳಿಗೆ ನೆರವಾಗಿರುವುದಕ್ಕೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆʼʼ ತಿಳಿಸಿದರು.

ಲೆಹರ್‌ ಸಿಂಗ್ ಮನವಿಗೆ ರಂಕಾ ಸ್ಪಂದನೆ; 300 ಟಿಬಿ ರೋಗಿಗಳ ದತ್ತು
ಕ್ಷಯ ರೋಗಿಗಳನ್ನು ದತ್ತು ಪಡೆಯಲು ರಾಜ್ಯಸಭೆ ಸದಸ್ಯ ಲೆಹರ್‌ ಸಿಂಗ್‌ ಅವರು ನೀಡಿದ್ದ ಕರೆಗೆ ಸ್ಪಂದಿಸಿರುವ ರಂಕಾ ಸ್ಟೀಲ್ಸ್‌ನ ಬಾಬು ಲಾಲ್‌ ಜೀ ಅವರು, ಬೆಂಗಳೂರಿನಲ್ಲಿ 300 ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದಾರೆ. ಈ ರೋಗಿಗಳಿಗೆ ಮನೆ 6 ತಿಂಗಳ ಕಾಲ ಮನೆ ಬಾಗಿಲಿಗೆ ಹೆಚ್ಚು ಪ್ರೋಟೀನ್‌ ಇರುವ ಪೌಷ್ಟಿಕ ಆಹಾರವನ್ನು ಪೂರೈಸಲಾಗುತ್ತದೆ.

2025ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಪೂರಕವಾಗಿ, ರಾಜ್ಯಸಭೆ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು, ಕಳೆದ ನವೆಂಬರ್‌ 25ರಂದು ಪಿಎಂ ನಿಕ್ಷಯ್‌ ಮಿತ್ರ ಅಭಿಯಾನದಡಿ ಬೆಂಗಳೂರಿನಲ್ಲಿ 500 ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದರು. ದತ್ತು ಪಡೆದ ರೋಗಿಗಳು ಗುಣಮುಖರಾಗಲು ಅಗತ್ಯ ಪೌಷ್ಟಿಕಾಂಶವಿರುವ ಆಹಾರದ ಕಿಟ್‌ಗಳನ್ನು ನೀಡಲಾಗುತ್ತಿದೆ.

ಎನ್.ಟಿ.ಐ ನಿರ್ದೇಶಕ ಡಾ.ಸೋಮಶೇಖರ್ ಕೂಡ ಟಿಬಿ ರೋಗ ಮುಕ್ತ ಅಭಿಯಾನಕ್ಕೆ ಸಂಸದ ಲೆಹರ್ ಸಿಂಗ್ ಅವರ ನೆರವು, ಬದ್ಧತೆ ಹಾಗೂ ಸತತ ಪ್ರಯತ್ನಗಳನ್ನು ಶ್ಲಾಘಿಸಿದರು. ಡಾ.ಕಲ್ಪನಾ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | CBI Enquiry : ಗುರುರಾಘವೇಂದ್ರ, ವಸಿಷ್ಠ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐಗೆ : ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

Exit mobile version