ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಮೂರು ದಿನಗಳಿಂದ ಚಿರತೆಯೊಂದು ಓಡಾಡುತ್ತಿದ್ದು, ಅಪಾರ್ಟ್‌ಮೆಂಟ್ ಒಂದರ ಮೊದಲ ಮಹಡಿಯವರೆಗೂ ಹೋಗಿ (Leopard Spotted) ಬಂದಿದೆ. ಅರಣ್ಯ ಇಲಾಖೆಯ (Forest department) ಸಿಬ್ಬಂದಿ ಅದನ್ನು ಹಿಡಿಯಲು ಹರಸಾಹಸ ಪಡುತ್ತಿದ್ದರೂ ಚಳ್ಳೆಹಣ್ಣು ತಿನ್ನಿಸಿದೆ.
ಆನೇಕಲ್‌ನ ಕೂಡ್ಲು ಗೇಟ್ ಬಳಿ ಅ.29ರ ರಾತ್ರಿಯಿಂದ ಕಾಣಿಸಿಕೊಂಡಿರುವ ಚಿರತೆ, ಅ. 30ರಂದು ಒಂದು ಅಪಾರ್ಟ್ಮೆಂಟ್‌ನೊಳಕ್ಕೆ ನುಗ್ಗಿದೆ. ಫಸ್ಟ್ ಫ್ಲೋರ್‌ವರೆಗೂ ಹೋಗಿ ತಿರುಗಾಟ ನಡೆಸಿದೆ. ಕೂಡ್ಲು ಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್‌ಮೆಂಟ್‌ನೊಳಗೆ ಕಾಣಿಸಿಕೊಂಡ ಚಿರತೆ ಪಾರ್ಕಿಂಗ್ ಲಾಟ್‌ನಿಂದ ಪ್ರವೇಶಿಸಿ ಮೊದಲ ಮಹಡಿಯವರೆಗೆ ಸಂಚಾರ ನಡೆಸಿದೆ. ನಿನ್ನೆ ರಾತ್ರಿ ಕೂಡಾ ಕೂಡ್ಲು ಬಳಿಯ ಐಟಿ ಟೆಕ್ ಪಾರ್ಕ್ ಬಳಿ ಚಿರತೆ ಕಾಣಿಸಿಕೊಂಡಿದೆ.
ಸದ್ಯ ವೈಟ್‌ಫೀಲ್ಡ್- ಕೂಡ್ಲುಗೇಟ್ ಪ್ರಾಂತ್ಯದಲ್ಲಿ ಓಡಾಡಿಕೊಂಡಿದ್ದು, ರಾತ್ರಿ ಅದರ ಓಡಾಟ ಕೆಲವು ಸಿಸಿ ಟಿವಿಗಳಲ್ಲಿ ಗೊತ್ತಾಗಿದೆ. ಚಿರತೆ ಹಿಡಿಯಲು ಮುಂದಾಗಿರುವ ಅರಣ್ಯಾಧಿಕಾರಿಗಳು ರಾತ್ರಿಯೆಲ್ಲ ಅನೌನ್ಸ್‌ಮೆಂಟ್ ಮಾಡುತ್ತಿದ್ದು, ನಾಗರಿಕರು ಯಾರೂ ಹೊರಗೆ ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಪ್ರಕಟಿಸಿದ್ದಾರೆ.
ಚಿರತೆ ಕಾಣಿಸಿಕೊಂಡ ಅಪಾರ್ಟ್ಮೆಂಟ್‌ಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಬಲೆಗೆ ಎರಡು ಪಂಜರ ಅಳವಡಿಸಲಾಗಿದೆ. ಅಧಿಕಾರಿಗಳು ಅಪಾರ್ಟ್ಮೆಂಟ್‌ಗಳಿಗೆ ತೆರಳಿ ಸೆಕ್ಯೂರಿಟಿಗಳಿಗೆ ಹಾಗೂ ನಿವಾಸಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಚಿರತೆ ಓಡಾಟ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು, ಒಬ್ಬೊಬ್ಬರೇ ಓಡಾಡದಂತೆ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ. ರಾತ್ರಿ ಚಿರತೆ ಕಾಣಿಸಿಕೊಂಡರೆ ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಈ ನಡುವೆ ಹೊಸಪಾಳ್ಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಹೊಯ್ಸಳ ಬೀಟ್ ವಾಹನದ ಮುಂದೆ ಅದು ಹಾದು ಹೋಗಿದೆ. ಸೈರನ್ ಹಾಕಿದ ಹಿನ್ನೆಲೆಯಲ್ಲಿ ಚಿರತೆ ಬಿಲ್ಡಿಂಗ್ ಒಳಗೆ ನುಗ್ಗಿದ್ದು, ಪಟಾಕಿ ಹೊಡೆಯುವ ಮೂಲಕ ಅದನ್ನು ಓಡಿಸಲು ಮುಂದಾದರು. ಸದ್ಯ ಕಾರ್ಯಾಚರಣೆ ನಿಲ್ಲಿಸಿರುವ ಅರಣ್ಯ ಸಿಬ್ಬಂದಿ ನಾಳೆ ರಾತ್ರಿ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಲಿದ್ದಾರೆ.
ಆಪರೇಷನ್ ಚಿರತೆಗೆ ಸುಮಾರು 50 ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಕಳೆದ ನಾಲ್ಕು ದಿನದಿಂದ ಬೆಂಗಳೂರಿನ ಸಿಂಗಸಂದ್ರ, ಸೋಮಸುಂದರಪಾಳ್ಯ, ಪರಂಗಿಪಾಳ್ಯ, ಬಂಡೇಪಾಳ್ಯ ಸುತ್ತಲೂ ಚಿರತೆ ಓಡಾಟ ನಡೆಸುತ್ತಿದ್ದು, ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿದೆ ಎಂದು ಊಹಿಸಲಾಗಿದೆ. ಚಿರತೆ ಸೆರೆಗೆ ನಾಲ್ಕು ಬೋನುಗಳನ್ನು ಹಾಕಲಾಗಿದೆ.
ಇದನ್ನೂ ಓದಿ: Leopard Spotted : ವೈಟ್‌ಫೀಲ್ಡ್‌ನಲ್ಲಿ ಕಾರಿಗೆ ಅಡ್ಡ ಬಂದ ಚಿರತೆ!