Site icon Vistara News

ಪರಿಷ್ಕೃತ ಶಾಲಾ ಪಠ್ಯವನ್ನು ಕೈಬಿಡಲು ಸಾಣೇಹಳ್ಳಿ ಶ್ರೀ ಆಗ್ರಹ

ಚಿತ್ರದುರ್ಗ: ಬಸವಣ್ಣನವರ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿರುವ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಬೇಕು ಎಂದು ಆರೋಪಿಸಿ ಸಾಣೇಹಳ್ಳಿಯ ತರಳಬಾಳು ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಇತ್ತೀಚೆಗಷ್ಟೆ ಪಠ್ಯಪುಸ್ತಕ ಮತ್ತು ನಾಡಗೀತೆಗೆ ಅವಮಾನ ಕುರಿತಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಯವರು ಸಿಎಂಗೆ ಪತ್ರ ಬರೆದಿದ್ದರು. ಈ ಕುರಿತು ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಅದರ ಬೆನ್ನಲ್ಲೆ ಇದೀಗ ಮತ್ತೊಬ್ಬ ಸ್ವಾಮೀಜಿ ಸರ್ಕಾರಕ್ಕೆ ಪತ್ರ ಬರೆದಿರುವುದು ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಈಗಾಗಲೇ ಶಾಲೆಗಳು ಪ್ರಾರಂಭವಾಗಿ 15 ದಿನಗಳಾಗಿವೆ. ಆದರೂ ಪಠ್ಯಪುಸ್ತಕಗಳಿಲ್ಲ ಎಂದರೆ ಶಿಕ್ಷಕರು ಏನು ಪಾಠ ಮಾಡಬೇಕು ? ಈಗಿನ ಪಠ್ಯಸಮಿತಿಯಲ್ಲಿರುವವರು ಒಂದು ವರ್ಗಕ್ಕೆ ಸೇರಿದವರೆಂಬುದು ಮೇಲ್ನೋಟಕ್ಕೆ ಎದ್ದು ತೋರುವುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಟಿಯುಳ್ಳವರು ಪಠ್ಯರಚನಾ ಸಮಿತಿಯಲ್ಲಿರಬೇಕಾದ್ದು ಅಪೇಕ್ಷಣೀಯ. ವಾಟ್ಸಾಪ್‌ನಲ್ಲಿ ನಾವು ನೋಡಿರುವಂತೆ 9 ನೆಯ ತರಗತಿಯ ‘ ಸಮಾಜ ವಿಜ್ಞಾನ ‘ ಪಠ್ಯಪುಸ್ತಕ ( ಪರಿಷ್ಕೃತ -2022 ) ಭಾಗ -1 ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ.

ಕಳೆದ ವರ್ಷವೂ ಈ ಪಾಠವಿತ್ತು ಆದರೆ ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ. ಕಳೆದ ವರ್ಷದ ಪಾಠದಲ್ಲಿ ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. “ಉನ್ನತಾಧಿಕಾರದಲ್ಲಿದ್ದರೂ ಹಣ, ಅಧಿಕಾರ, ಅಧಿಪತ್ಯ ಇವ್ಯಾವುದರಿಂದಲೂ ಇವರು ವಿಚಲಿತರಾಗಲಿಲ್ಲ. ತಮ್ಮ ಇಡೀ ಜೀವನವನ್ನು ಸಮಾಜ ಮತ್ತು ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಮೀಸಲಿರಿಸಿದರು.

ಬಸವಣ್ಣ ಸರಳ ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳವಳಿಯನ್ನು ಜನಮುಖಿಯಾಗಿಸಿದರು. ಬಸವಣ್ಣನವರ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಪಠ್ಯಪುಸ್ತಕದಲ್ಲಿ ರಚನೆ ಮಾಡಲಾಗಿದೆ. ಈ ಬದಲಾವಣೆ ನಿಜಕ್ಕೂ ಖಂಡನಾರ್ಹ.

ಬಸವೇಶ್ವನವರ ಮಾತುಗಳು

ಬಸವಣ್ಣನವರ ಶುದ್ಧ , ಪಾರದರ್ಶಕ ಬದುಕಿಗೆ ಕಲಂಕ ತಂದಂತೆ. ‘ ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು ‘ ಎನ್ನುವುದು ಶುದ್ಧ ಸುಳ್ಳು , ಅವರು ‘ ಲಿಂಗಾಯತ ಧರ್ಮವನ್ನು ಜಾರಿಯಲ್ಲಿ ತಂದರು ‘ ಎಂದಾಗಬೇಕಿತ್ತು. ಇಂತಹ ಹಲವು ದೋಷಗಳಾಗಿವೆ ಆದುದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಯುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ| ಪಠ್ಯದಲ್ಲಿ ಬ್ರಾಹ್ಮಣೀಕರಣ ಮಾಡುತ್ತಿಲ್ಲ, ಇತಿಹಾಸ ಹಾಗೂ ರಾಷ್ಟ್ರೀಯತೆ ಇದೆ ಎಂದ ಸಚಿವ ನಾಗೇಶ್‌

ಸರಿಯಾದ ಇತಿಹಾಸ ಹೇಳಬೇಕು: ಯದುವೀರ್‌

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಲೆಫ್ಟು ಬೇಡ, ರೈಟೂ ಬೇಡ. ಇತಿಹಾಸವನ್ನು ಇತಿಹಾಸವಾಗಿಯೇ ಭೋದಿಸಿ. ಮಕ್ಕಳಿಗೆ ಸರಿಯಾದ ಇತಿಹಾಸ ಹೇಳಿಕೊಡಬೇಕು. ಇತಿಹಾಸವನ್ನು ತಿದ್ದಬಾರದು. ಮಕ್ಕಳಿಗೆ ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ| ಪಠ್ಯಪುಸ್ತಕ ವಿಚಾರದಲ್ಲಿ ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯ: ಎಂ.ಜಿ.ಮಹೇಶ್

Exit mobile version