ಬೆಂಗಳೂರು: ಪ್ರಸ್ತುತ ಅಲ್ಲಲ್ಲಿ ಕಾಣುತ್ತಿರುವ, ಮುಸುಕಿನ ಗುದ್ದಾಟದಂತಿರುವ ಭಾಷಾ ವಿವಾದಗಳು ಭವಿಷ್ಯದಲ್ಲಿ ವ್ಯಾಪಕವಾಗುವ ಸಾಧ್ಯತೆಯಿದ್ದು, ಅದಕ್ಕೆ ಉತ್ತರವೇನು ಎಂದು ಚಿಂತನೆ ನಡೆಯಬೇಕಿದೆ ಎಂದು ಲೇಖಕ, ವಿಮರ್ಶಕ ಡಾ. ಜಿ.ಬಿ. ಹರೀಶ್ ಅಭಿಪ್ರಾಯಪಟ್ಟಿದ್ದಾರೆ.
ಮಂಥನ ಬೆಂಗಳೂರು ವತಿಯಿಂದ ರಾಜಾಜಿನಗರದ ಕೆಎಲ್‌ಇ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ʼಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ- ಒಂದು ವಿಚಾರಗೋಷ್ಠಿʼ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಲ್ಕು ಸಾಗರ ಪರ್ಯಂತವಿರುವ ಭರತಖಂಡದ ಮೇಲಿನ ಅಸೀಮ ಪ್ರೀತಿ, ಅರಿವನ್ನು ರಾಷ್ಟ್ರೀಯತೆ ಎಂದು ಹೇಳಬಹುದು. ಸೃಷ್ಟಿಯ ಮೂಲ ಉದ್ದೇಶವೇ ಆನಂದ ಅನ್ವೇಷಣೆ. ಇದರ ಮುಂದುವರಿದು ಭಾಗದಲ್ಲಿ, ಹಿಮಾಲಯದಿಂದ ದಕ್ಷಿಣಕ್ಕೆ, ಸಮುದ್ರದಿಂದ ಉತ್ತರಕ್ಕೆ ಇರುವ ಭೂಭಾಗ ಭಾರತ ಎಂದು ಹೇಳಲಾಗುತ್ತದೆ.
ಹಿಮಾಲಯದ ತಪ್ಪಲಿನಲ್ಲಿರುವ ಯಾವುದೋ ಭಾಗ ಅಲ್ಲಿನ ಪ್ರಾದೇಶಿಕತೆ. ಆದರೆ ಜೀವನದಲ್ಲೊಮ್ಮೆ ಹಿಮಾಲಯಕ್ಕೆ ಒಂದು ಸಾರಿ ಹೋಗಿಬರಬೇಕು ಎಂದು ಭಾವಿಸುತ್ತೇವಲ್ಲಾ ಅದೇ ರಾಷ್ಟ್ರೀಯತೆ. ಸಾಂಸ್ಕೃತಿಕವಾಗಿ, ಅಧ್ಯಾತ್ಮಿಕವಾಗಿ ಮಾತನಾಡುವುದಾದರೆ ಟಿಬೆಟ್, ನೇಪಾಳ, ಶ್ರೀಲಂಕಾವನ್ನು ಹೊರತುಪಡಿಸಿ ರಾಷ್ಟ್ರೀಯತೆಯನ್ನು ಮಾತನಾಡಲು ಆಗುವುದಿಲ್ಲ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಾರೂ ತಮ್ಮ ಸೀಮಿತ ಪ್ರದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿರಲಿಲ್ಲ. ಇಂತಹ ಸನ್ನಿವೇಷದಲ್ಲಿ, ಭಾಷಾ ಕಂದಕವನ್ನು ಸೃಷ್ಟಿಸುವ ಕಾರ್ಯ ಆಗುತ್ತಿದೆ. ಡಾ. ಎಂ.ಎಂ. ಕಲಬುರ್ಗಿ ಅವರೂ ವಿಭಿನ್ನ ರೀತಿಯಲ್ಲಿ ಆರ್ಯ ದ್ರಾವಿಡ ಸಿದ್ಧಾಂತವನ್ನು ಪ್ರತಿಪಾದಿಸಿದರು. ಕೃಷ್ಣದೇವರಾಯನ ಆಸ್ಥಾನದಲ್ಲಿ ಆಂಧ್ರಕ್ಕೇ ಹೆಚ್ಚು ಮಹತ್ವ ನೀಡಿದ್ದರು ಎಂದು ಅನೇಕರು ವಾದ ಮಾಡುತ್ತಾರೆ.
ಮೇಲ್ನೋಟಕ್ಕೆ ಸರಿ ಎಂದು ಕಾಣಿಸುವ ಮಾತುಗಳಿಂದಲೇ ಭಾಷಾ ಕಂದಕವನ್ನು ನಿರ್ಮಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ವರ್ಸಸ್ ಶಿವಾಜಿ ಎನ್ನುವ ರೀತಿಯಲ್ಲಿ ಅನೇಕ ವಿಚಾರಗಳು ಅಲ್ಲಲ್ಲಿ ಕಾಣುತ್ತಿವೆ. ಕೆಲವು ಹೆಸರುಗಳ ಕುರಿತು ರಾಜಕೀಯ ಉದ್ದೇಶದಿಂದ ವಿವಾದಗಳು ನಡೆಯುತ್ತಿವೆ. ಈಗ ಮುಸುಕಿನ ಗುದ್ದಾಟಗಳು ಬರುವ ದಿನಗಳಲ್ಲಿ ವ್ಯಾಪಕ ಆಗಬಹುದು ಎಂದು ಭಾವಿಸಿದರೆ ಅದಕ್ಕೆ ಉತ್ತರ ಏನು ಎಂದು ತಿಳಿದುಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ | ಸವಿಸ್ತಾರ ಅಂಕಣ | ಆರ್‌ಎಸ್‌ಎಸ್ ಚಿಂತನೆಗಳೊಂದಿಗೆ ಬಿಜೆಪಿ ನಾಯಕರ ಆಲೋಚನೆಗಳೇಕೆ ತಾಳೆ ಆಗುತ್ತಿಲ್ಲ?
ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು ಮಾತನಾಡಿ, ರಾಷ್ಟ್ರೀಯತೆ, ಭಾರತೀಯತೆ ಎನ್ನುವುದು ಅಪಾಯಕಾರಿ ಎನ್ನುವಂತೆ ಅಕಡೆಮಿಕ್ ವಲಯದಲ್ಲಿ ಬಿಂಬಿಸಲಾಗಿದೆ. ಪ್ರಾದೇಶಿಕತೆ ಅಪಾಯಕಾರಿಯಲ್ಲ, ಆದರೆ ಪ್ರಾದೇಶಿಕ ವಾದ ಅಪಾಯಕಾರಿ ಇಂದು ಎಲ್ಲೆಡೆ ಮೆರೆಯುತ್ತಿದೆ. ಮೇಲ್ನೋಟಕ್ಕೆ ಈ ಪ್ರಾದೇಶಿಕ ವಾದ ಕರ್ನಾಟಕದಲ್ಲಿ, ಕೇರಳದಲ್ಲಿ ಕಂಡಿತು ಎನ್ನಿಸಿದರೂ ಅದರ ಹಿಂದೆ ಯಾವುದೋ ಗುಂಪು ಕೆಲಸ ಮಾಡುತ್ತಿದೆ ಎನ್ನುವುದನ್ನು ನಾವು ತಿಳಿಯಬೇಕು. ಪ್ರತ್ಯೇಕ ತಮಿಳು ದೇಶ, ಪ್ರತ್ಯೇಕ ಪಂಜಾಬ್, ನಾಗಾಲ್ಯಾಂಡ್ ಪ್ರತ್ಯೇಕತೆಗಳಿಗೆ ಒಯ್ಯುತ್ತಿದೆ.
ರಾಜೀವ್ ಮಲ್ಹೋತ್ರಾ ಅವರ ಕೃತಿಗಳಲ್ಲಿ ಇದಕ್ಕೆ ಪ್ರಮುಖವಾಗಿ ಮಿಷನರಿ ಶಕ್ತಿಗಳು, ಮಾವೊವಾದಿ ಶಕ್ತಿಗಳು ಇದರ ಹಿಂದೆ ಇವೆ ಎನ್ನುವುದನ್ನು ತಿಳಿಸಿಕೊಡುತ್ತಾರೆ. ಸಮುದಾಯ, ಭಾಷೆ, ಬುಡಕಟ್ಟುಗಳ ಹೆಸರುಗಳ ಆಧಾರದಲ್ಲೇ ಪ್ರತ್ಯೇಕತೆಯನ್ನು ಬಿಂಬಿಸುತ್ತಿದ್ದಾರೆ.
ಕನ್ನಡ ಮತ್ತು ರಾಷ್ಟ್ರೀಯತೆಯ ಸಂಬಂಧದ ಕುರಿತು ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಹಾಗೂ ರಾಷ್ಟ್ರಕವಿ ಕುವೆಂಪು ಅವರು ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎನ್ನುವುದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿರುವುದರ ಹಿಂದೆ ಅನುಮಾನಗಳಿವೆ.
ಪ್ರಾದೇಶಿಕತೆ ಹಾಗೂ ರಾಷ್ಟ್ರೀಯತೆ ಒಂದಕ್ಕೊಂದು ವಿರುದ್ಧ, ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಅಕಡೆಮಿಕ್ ವಲಯದಲ್ಲಿ ಬಿಂಬಿಸಲಾಗಿದೆ. ಆದರೆ ಆಲೂರು ವೆಂಕಟರಾಯರು, ಕುವೆಂಪು ಅವರು ಎಂದಿಗೂ ಸ್ಥಳೀಯತೆ, ರಾಷ್ಟ್ರೀಯತೆ ಹಾಗೂ ವಿಶ್ವದ ನಡುವೆ ಒಂದು ಸಾವಯವ ಸಂಬಂಧವನ್ನು ಕಂಡಿದ್ದರು ಎಂದು ತಿಳಿಸಿದರು.
ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಮಾತನಾಡಿ, ನಮ್ಮ ದೇಶದಲ್ಲಿ 1947ರ ನಂತರ ನಮ್ಮ ದೇಶದಲ್ಲಾದ ಅನೇಕ ಸಮಸ್ಯೆಗಳಿಗೆ ಕೆಲವರು ಕಾರಣರಾದ್ಧರಿಂದ ಅವರನ್ನೇ ದೂಷಿಸಬೇಕಾಗುತ್ತದೆ. ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಎನ್ನಲಾಗುತ್ತದೆ. ಆದರೆ ನಾವು ಅದನ್ನು ಏಕತೆಯಲ್ಲಿ ವಿಭನ್ನತೆ ಎನ್ನಬೇಕು. ನಾವು ಒಂದೇ ವಿಚಾರವನ್ನು ವಿವಿಧ ರೂಪದಲ್ಲಿ ಅಭಿವ್ಯಕ್ತಗೊಳಿಸುತ್ತೇವೆ. ಕನ್ನಡ ಪ್ರಾದೇಶಿಕ ಭಾಷೆ ಎನ್ನುವುದಕ್ಕಿಂತಲೂ ಈ ರಾಷ್ಟ್ರದ ಭಾಷೆ ಎಂದು ಭಾವಿಸಿದರೆ ನಮ್ಮ ಒಟ್ಟು ಪರಿಕಲ್ಪನೆಯೇ ಬದಲಾಗುತ್ತದೆ.
ಸಿನಿಮಾ ಕ್ಷೇತ್ರದ ಕುರಿತು ಮಾತನಾಡಿ, ಹಿಂದಿ ಹೇಗೆ ರಾಷ್ಟ್ರೀಯ ಸಿನಿಮಾ ಆಗುತ್ತದೆ? ಕನ್ನಡ-ತೆಲುಗು-ತಮಿಳಿನಲ್ಲಿ ಮಾಡಿದ ಸಿನಿಮಾ ಪ್ರಾದೇಶಿಕ ಸಿನಿಮಾ ಆಗುತ್ತದೆ? ಕಾಂತಾರಾ-ಕೆಜಿಎಫ್ ಸಿನಿಮಾಗಳು ಈ ನಂಬಿಕೆಯನ್ನು ಹೊಡೆದು ಹಾಕಿವೆ. ಕರ್ನಾಟಕದಲ್ಲಿ ಡಾ. ರಾಜಕುಮಾರ್, ತೆಲುಗಿನಲ್ಲಿ ಎನ್.ಟಿ. ರಾಮರಾವ್, ತಮಿಳಿನಲ್ಲಿ ಶಿವಾಜಿ ಗಣೇಶನ್ ಅವರುಗಳು ದೇಶದ ನಾಯಕರುಗಳನ್ನು ಪರಿಚಯಿಸಿದರು. ಆದರೆ ಹಿಂದಿಯಲ್ಲಿ ಅತಿ ದೊಡ್ಡ ಸಿನಿಮಾ ಎಂದರೆ ಮೊಘಲ್ ಎ ಆಜಂ. ಇದರಲ್ಲಿ ಯಾವುದು ರಾಷ್ಟ್ರೀಯ, ಯಾವುದು ಪ್ರಾದೇಶಿಕ ಎಂದು ನಿರ್ಧಾರ ಮಾಡಬೇಕು. ಇಲ್ಲಿನ ಎಲ್ಲ ಭಾರತೀಯ ಭಾಷೆಗಳೂ ರಾಷ್ಟ್ರೀಯ ಭಾಷೆ ಎಂದು ತಿಳಿಯಬೇಕು. ನಾವು ಯಾವುದೇ ಹಿಂಜರಿಕೆ ಇಲ್ಲದೆ ಕನ್ನಡಿಗ ಎಂದು ಹೇಳಿಕೊಳ್ಳುವುದನ್ನು ಕಲಿಯಬೇಕು ಎಂದರು.
ಇತಿಹಾಸ-ಪುರಾತತ್ವಶಾಸ್ತ್ರ ಪ್ರಾಧ್ಯಾಪಕ ಡಾ. ಎಂ. ಕೊಟ್ರೇಶ್ ಮಾತನಾಡಿ, ಧರ್ಮ ಅರ್ಥ ಕಾಮ ಮೋಕ್ಷ ಪರಿಕಲ್ಪನೆಯ ಅಡಿಯಲ್ಲಿ, ಆನಂದದ ಒರೆಗಲ್ಲಿನ ಆಧಾರದಲ್ಲಿ ಭಾಷೆಗಳ ವೈವಿಧ್ಯತೆಯನ್ನು ಆನಂದಿಸಬೇಕು. ಕೃಷ್ಣದೇವರಾಯ ತೆಲುಗಿನಲ್ಲಿಯೂ ಅದ್ಭುತ ಕೃತಿ ಬರೆಯುತ್ತಾನೆ. ಆದರೆ ಕೃಷ್ಣದೇವರಾಯ ಕನ್ನಡದವನೋ ತೆಲುಗಿನವನೋ ಎಂಬ ಚರ್ಚೆ ನಡೆಯುತ್ತಿರುವುದು ಹಾಸ್ಯಾಸ್ಪದ. ಕೃಷ್ಣದೇವರಾಯ ತಿರುಪತಿಗೆ ನೀಡಿದಷ್ಟೇ ಕೊಡುಗೆಯನ್ನು ಹಂಪಿಗೂ ನೀಡಿದ್ದಾನೆ. ಆದರೆ ಇಲ್ಲಿ ಭೇದ ಹುಟ್ಟುಹಾಕಲಾಗುತ್ತದೆ. ಈ ಅಸ್ಮಿತೆಯ ಭಯವನ್ನು ಹುಟ್ಟುಹಾಕುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಇದನ್ನೂ ಓದಿ | ವೀರ ಸಾವರ್ಕರ್ ವಿರಚಿತ ಜಯೋಸ್ತುತೆ ಗೀತೆ ಮರು ಸೃಷ್ಟಿಸಿದ ಶಿವಮೊಗ್ಗದ ಯುವಕರು; ಸಾತ್ಯಕಿ ಸಾವರ್ಕರ್ ಹರ್ಷ