ಬೆಂಗಳೂರು: ವಿಧಾನಪರಿಷತ್ತಿನ ಶಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಶಾಸಕರುಗಳು ನಿವೃತ್ತಿಯ ನಂತರವು ಜನಸಾಮಾನ್ಯರ ಧ್ವನಿಯಾಗಿ ಉತ್ತಮ ಸಮಾಜ ಸೇವೆ ಸಲ್ಲಿಸುವಂತಾಗಲಿ ಎಂದು ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪೂರೆ ಬುಧವಾರ ಶುಭಹಾರೈಸಿದರು. ನಿವೃತ್ತಿ ಹೊಂದಿದ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತಿ ಹೊಂದುತ್ತಿರುವ ಶಾಸಕರುಗಳು ಕಳೆದ ಹಲವು ವರ್ಷಗಳಿಂದ ಸದನದ ಹೊರಗೆ – ಒಳಗೆ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ. ಹಲವು ಅಧಿವೇಶನ, ಸಮಿತಿ ಸಭೆ ಮೊದಲಾದ ಕಾರ್ಯಕಲಾಪಗಳಲ್ಲಿ ಭಾಗವಹಿಸಬೇಕಾದ ಸಂದರ್ಭದಲ್ಲಿ ಅವರುಗಳು ತೋರುತ್ತಿದ್ದ ಸಮಯಪ್ರಜ್ಞೆ, ವಾಕ್ಚಾತುರ್ಯ, ಪ್ರಶ್ನೋತ್ತರಗಳನ್ನು ಕೇಳುವ ವಿಧಾನ, ಉತ್ತರಿಸುವ ಬಗೆ ಇವೆಲ್ಲವೂ ಯುವ ಜನಾಂಗದವರಿಗೆ ಹಾಗೂ ಹೊಸದಾಗಿ ವಿಧಾನ ಪರಿಷತ್ತಿಗೆ ಆಯ್ಕೆಗೊಂಡಂತಹ ಸದಸ್ಯರುಗಳಿಗೆ ಮಾರ್ಗದರ್ಶನವಾಗಲಿದೆ ಎಂದರು.
ನಿವೃತ್ತಿಯಾಗುತ್ತಿರುವ ಸದಸ್ಯರಾದ ಆರ್.ಬಿ. ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಸ್. ವೀಣಾ ಅಚ್ಚಯ್ಯ, ಕೆ.ವಿ. ನಾರಾಯಣಸ್ವಾಮಿ, ಲಹರ್ ಸಿಂಗ್ ಸಿರೋಯಾ, ಹೆಚ್.ಎಂ. ರಮೇಶ್‍ಗೌಡ, ಲಕ್ಷ್ಮಣ ಸಂಗಪ್ಪ ಸವದಿ ಅವರ ಮುಂದಿನ ಜೀವನವು ಸುಖಕರವಾಗಿರಲೆಂದು ಹಾರೈಸಿದರು.
ಅಲ್ಲಂ ವೀರಭದ್ರಪ್ಪ ಅವರು ಮಾತನಾಡಿ, ಜೀವನದಲ್ಲಿ ಉತ್ತಮ ಸ್ಥಾನ ಸಿಗಲು ಅದೃಷ್ಟ ಮಾಡಿರಬೇಕು. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜೀವ ಇರುವವರೆಗೂ ರೈತರ, ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
ಎಸ್. ವೀಣಾ ಅಚ್ಚಯ್ಯ ಮಾತನಾಡಿ, ನನ್ನ ಕೈಲಾದ ಸೇವೆಯನ್ನು ಸಲ್ಲಿಸಿದ್ದೇನೆ. ಕೊಡಗಿನ ಜನರಿಗೆ ಉತ್ತಮ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು.
ಇದನ್ನೂ ಓದಿ| MLC election | ದಕ್ಷಿಣ ಪದವೀಧರರ ಕ್ಷೇತ್ರ ಪ್ರತಿಷ್ಠೆಯ ಕಣ, ಎಲ್ಲ ಪಕ್ಷಗಳದ್ದೂ ಅಸ್ಪಷ್ಟ ಚಿತ್ರಣ