Site icon Vistara News

ನ.19 ರಂದು ಮೇಧಾನಮನಮ್-ಸಂಸ್ಕೃತೋತ್ಸವ, ಮೈತ್ರೀ ಪುರಸ್ಕಾರ ಪ್ರದಾನ

Ramachandra G Bhatta and Umakanta Bhatta Kerekai

ಬೆಂಗಳೂರು: ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ವತಿಯಿಂದ ಮೇಧಾನಮನಮ್, ಸಂಸ್ಕೃತೋತ್ಸವ ಮತ್ತು ಮೈತ್ರೀ ಪುರಸ್ಕಾರ-2023 ಪ್ರದಾನ ಸಮಾರಂಭವನ್ನು ನವೆಂಬರ್‌ 19ರಂದು ಬೆಳಗ್ಗೆ 9 ಗಂಟೆಗೆ ನಗರದ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನವು ಪ್ರತಿವರ್ಷವೂ ಸಂಸ್ಕೃತ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ ಹಿರಿಯ ವಿದ್ವಾಂಸರಿಬ್ಬರನ್ನು ಗುರುತಿಸಿ ಮೈತ್ರೀ ಪುರಸ್ಕಾರ ನೀಡಿ ಗೌರವಿಸುತ್ತದೆ. ಈ ಬಾರಿ ಮೈತ್ರೀ ಪುರಸ್ಕಾರಕ್ಕೆ ಈ ವರ್ಷ ನಾಡಿನ ಖ್ಯಾತ ವಿದ್ವಾಂಸ, ವೇದವಿಜ್ಞಾನ ಗುರುಕುಲ ಸ್ಥಾಪಿಸಿ ನೂರಾರು ವಿದ್ವಾಂಸರನ್ನು ನಾಡಿಗೆ ಕೊಟ್ಟ, ವ್ಯಾಸ ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ವೇದವಿಜ್ಞಾನ ಶೋಧಸಂಸ್ಥಾನದ ಅಧ್ಯಕ್ಷರು, ಅಖಿಲಭಾರತ ಗುರುಕುಲ ಪ್ರಕಲ್ಪದ ಸಂರಕ್ಷಕರು ಆದ ಪ್ರೊ. ರಾಮಚಂದ್ರ ಜಿ. ಭಟ್ಟ, ಕೋಟೆಮನೆ ಹಾಗೂ ಹಿರಿಯ ವಿದ್ವಾಂಸ ವಿದ್ಯಾವಾಚಸ್ಪತಿ ವಿದ್ವಾನ್ ಉಮಾಕಾಂತ್ ಭಟ್ಟ ಕೆರೆಕೈ ಅವರನ್ನು ಆಯ್ಕೆ ಮಾಡಲಾಗಿದೆ.

ನವೆಂಬರ್ 19ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈ ಇಬ್ಬರು ಸಾಧಕರಿಗೆ ಮೈತ್ರೀ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.

ಇದನ್ನೂ ಓದಿ | Shankarnag Natakothsava: ರಂಗಪಯಣ ಬಳಗದಿಂದ ನ.20ರಿಂದ ʻಶಂಕರ್‌ ನಾಗ್‌ ನಾಟಕೋತ್ಸವʼ

ಸಂಸ್ಕೃತದ ಹಬ್ಬ

ಮೇಧಾನಮನಮ್, ಸಂಸ್ಕೃತೋತ್ಸವದಲ್ಲಿ ಸಂಸ್ಕೃತ ಪುಸ್ತಕಗಳ ಲೋಕಾರ್ಪಣೆ, ವಿವಿಧ ವಿಷಯಗಳ ಪ್ರದರ್ಶಿನಿ, ನೃತ್ಯ ಸಂಗೀತ, ಸಾಮರಸ್ಯಮ್ ಸಂಸ್ಕೃತ ಭಾವಗೀತೆಗಳ ಭಾವಯಾನ, ಯೋಧರ ಯಶೋಗಾಥೆಯ ರೋಮಾಂಚಕ ಕ್ಷಣಗಳಿರಲಿವೆ. ಇನ್ನು ವಿವಿಧ ಕ್ಷೇತ್ರದ ಗಣ್ಯರೊಡನೆ ಸೆಲ್ಫಿಯ ಸಂಭ್ರಮ, ಗಣ್ಯ ವಿದ್ವಾಂಸರಿಗೆ ಅಭಿನಂದನೆ, ಎಲ್ಲಕ್ಕಿಂತ ಹೆಚ್ಚಾಗಿ ಸಾಧಕರಿಗೆ ಸನ್ಮಾನ ಹಾಗೂ ರುಚಿ, ಶುಚಿಯಾದ ಆಹಾರ ಪಾನೀಯಗಳಿರಲಿವೆ. ಒಟ್ಟಾರೆ, ಇದು ಸಾವಿರಾರು ಸಂಸ್ಕೃತ ಪ್ರೇಮಿಗಳು ಒಂದೆಡೆ ಸೇರಿ ಆಚರಿಸುವ ಸಂಸ್ಕೃತದ ಹಬ್ಬವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version