ಬೆಂಗಳೂರು: ಡಾ.ನಾಗರಾಜ ಜಮಖಂಡಿ ಅವರನ್ನು(Media Awards) ಹತ್ತಿರದಿಂದ ಬಲ್ಲವರು ಅವರ ಸ್ನೇಹದ ಸಂಕೋಲೆಯಲ್ಲಿ ಇದ್ದವರೇ ಆಗಿದ್ದು, ಅವರು ನಮ್ಮನ್ನು ಅಗಲಿದಂತಹ ದಿನ ಬರಬಾರದಿತ್ತು. ಅವರ ನಿಧನದಿಂದ ರಾಜ್ಯ ಹಾಗೂ ಮಾಧ್ಯಮ ಲೋಕ, ಅವರ ಸ್ನೇಹ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ. ಅವರೊಬ್ಬ ಸ್ನೇಹಜೀವಿಯಾಗಿದ್ದು, ಪರೋಪಕಾರ ಅವರ ಗುಣಧರ್ಮವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಾ. ನಾಗರಾಜ್ ಜಮಖಂಡಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ “ಡಾ. ನಾಗರಾಜ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ 2022 ಪ್ರದಾನ” ಸಮಾರಂಭದಲ್ಲಿ ಮಾತನಾಡಿದರು.
ಇದನ್ನೂ ಓದಿ | Karnataka Politics | ಉತ್ತರ ಕರ್ನಾಟಕದಲ್ಲಿ ಅಹಿಂದ ಅಸ್ತ್ರ; ಒಂದೇ ವೇದಿಕೆಯಲ್ಲಿ ಐವರು ಜಾರಕಿಹೊಳಿ ಸಹೋದರರು?
ಡಾ. ನಾಗರಾಜ್ ಜಮಖಂಡಿ ಅವರ ವಿಶೇಷ ಗುಣವೆಂದರೆ ಅವರ ನಗು. ಸ್ನೇಹಜೀವಿಯಾಗಿದ್ದ ಅವರಲ್ಲಿ ಪರೋಪಕಾರಿ ಗುಣವಿತ್ತು. ವೃತ್ತಿಯನ್ನು ಪ್ರೀತಿಸುತ್ತಿದ್ದ ಅವರು, ಉದಯ ಟಿವಿಯ ಸುದ್ದಿ ಮಾಧ್ಯಮದಲ್ಲಿ ಸೃಜನಾತ್ಮಕವಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಜ್ಯದ ಬಗ್ಗೆ ಸಮಗ್ರ ಚಿಂತನೆಯನ್ನು ತಮ್ಮ ವಿಷಯ ನಿರೂಪಣೆಯ ಮೂಲಕ ವ್ಯಕ್ತಪಡಿಸುತ್ತಿದ್ದರು. ಅವರಿಗೆ ಸ್ನೇಹ, ಇತರರ ಬಗ್ಗೆ ಕಾಳಜಿ ಅವರ ಗುಣಧರ್ಮವಾಗಿತ್ತು. ಹಾಗೆಯೇ ಸದಾ ಚಟುವಟಿಕೆಯಿಂದ ಇರುತ್ತಿದ್ದ ನಾಗರಾಜ್ ಅವರದ್ದು ವಿಶೇಷವಾದ, ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದರು ಎಂದರು.
ಸ್ನೇಹಕ್ಕೆ ವಯಸ್ಸಿನ ಅಂತರವಿರಲಿಲ್ಲ
ಹಾಗೆಯೇ ನಮ್ಮನ್ನು ಅಗಲಿರುವ ಮತ್ತೊಬ್ಬ ವ್ಯಕ್ತಿ, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಲಿಂಗಸ್ವಾಮಿ ಅವರು ಅತ್ಯಂತ ಕ್ರಿಯಾಶೀಲರಾಗಿದ್ದು, ಪರಿಶ್ರಮದಿಂದ ಮಾಧ್ಯಮ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ವಿಶಿಷ್ಟ ವ್ಯಕ್ತಿತ್ವದಿಂದ ಅಲ್ಪ ಸಮಯದಲ್ಲಿಯೇ ಒಳ್ಳೆಯ ಹೆಸರನ್ನು ಸಂಪಾದಿಸಿದರು. ನಾನು ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ನನ್ನ ಜತೆ ಸದಾ ಇರುತ್ತಿದ್ದರು. ಮಾಧ್ಯಮ ಕ್ಷೇತ್ರದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಬಗ್ಗೆ ಕಾಲಕಾಲಕ್ಕೆ ತಿಳಿಸುತ್ತಿದ್ದರು. ನನ್ನ ಅವರ ಸಂಬಂಧ ವಿಶ್ವಾಸಮಯವಾಗಿತ್ತು. ನಮ್ಮ ಸ್ನೇಹಕ್ಕೆ ವಯಸ್ಸಿನ ಅಂತರವಿರಲಿಲ್ಲ. ಅವರ ಅಗಲಿಕೆ ಬಹಳಷ್ಟು ನೋವನ್ನು ತಂದಿದೆ ಎಂದರು.
ನಾಗರಾಜ ಜಮಖಂಡಿ ಹಾಗೂ ಗುರುಲಿಂಗಸ್ವಾಮಿ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ. ಬದುಕು ಬಹಳ ದೊಡ್ಡದು, ಅದನ್ನು ಯಾವುದೇ ಪರಿಸ್ಥಿತಿಯಲ್ಲಿ ಧೈರ್ಯದಿಂದ ಎದುರಿಸಬೇಕು ಎಂದು, ಮೃತರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳು ಸಾಂತ್ವನ ಮಾತುಗಳನ್ನು ನುಡಿದರು.
ಪ್ರಶಸ್ತಿ ಪುರಸ್ಕೃತರಾದ ಸಂಜೆವಾಣಿ ಸಂಪಾದಕ ಜಿ.ಮಲ್ಲಪ್ಪ ಅವರು ಅತ್ಯಂತ ಆತ್ಮೀಯರು, ನನ್ನ ಹಿತಚಿಂತಕರು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಸುವರ್ಣ ನ್ಯೂಸ್ ವಾಹಿನಿಯ ರಾಜಕೀಯ ವಿಶ್ಲೇಷಕ ಪ್ರಶಾಂತ್ ನಾತು ಅವರು ರಾಜಕೀಯ ವಿಷಯಗಳನ್ನು ಅತ್ಯುತ್ತಮವಾಗಿ ವಿಶ್ಲೇಷಿಸುತ್ತಾರೆ. ಈ ಎಲ್ಲ ಸಾಧಕರು ತಮ್ಮ ಸಾಧನೆಯ ಹಾದಿಯಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಶಾಸಕ ಆರ್.ವಿ. ವೆಂಕಟೇಶ್, ಮಾಜಿ ಶಾಸಕ ಹಾಗೂ ಡಾ. ನಾಗರಾಜ್ ಜಮಖಂಡಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಮೋಹನ್ ಲಿಂಬಿಕಾಯಿ ಹಾಗೂ ಕಾರ್ಯದರ್ಶಿ ಮಂಗಳಾ ನಾಗರಾಜ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ | Voter data | ಸಿಎಂ ಬೊಮ್ಮಾಯಿ ಹಗರಣದ ರಿಯಲ್ ಕಿಂಗ್ ಪಿನ್ ಎಂದ ಕಾಂಗ್ರೆಸ್, ರಾಜೀನಾಮೆಗೆ ಒತ್ತಾಯ