ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿ ನೀಡಿದೆ. ಮಾರ್ಚ್ 10ರಂದು ಬೆಳಗ್ಗೆ ಎಂದಿಗಿಂತ ಒಂದು ತಾಸು ಮೊದಲೇ ಮೆಟ್ರೊ ರೈಲು (Namma Metro) ಕಾರ್ಯಾಚರಣೆ ನಡೆಸಲಿದೆ. ಕರ್ನಾಟಕ ಪೊಲೀಸ್ ಇಲಾಖೆಯಿಂದ ಆಯೋಜಿಸಿರುವ ರಾಜ್ಯಮಟ್ಟದ 10K ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ಅನುಕೂಲವಾಗಲೆಂದು ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಹಸಿರು ಮತ್ತು ನೇರಳೆ ಮಾರ್ಗಗಳ ಎಲ್ಲ ನಾಲ್ಕು ಟರ್ಮಿನಲ್‌ಗಳಲ್ಲಿ ವಾರದ ದಿನಗಳಲ್ಲಿ ಬೆಳಗ್ಗೆ 5ಗಂಟೆಗೆ ಮತ್ತು ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಮೆಟ್ರೊ ರೈಲು ಕಾರ್ಯಾಚರಣೆ ಆರಂಭವಾಗುತ್ತಿತ್ತು. ಆದರೆ ಈ ಭಾನುವಾರ ಮಾತ್ರ ಬೆಳಗ್ಗೆ 6ಕ್ಕೆ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಮಾದಕ ವ್ಯಸನ ವಿರುದ್ಧ ಜಾಗೃತಿಗಾಗಿ ಮ್ಯಾರಥಾನ್
ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಕ ವ್ಯಸನ ಮುಕ್ತ ವಾತಾವರಣ ನಿರ್ಮಿಸಲು ಮಾರ್ಚ್ 8ರಂದು ನಗರದಲ್ಲಿ 10ಕೆ/5ಕೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ವಿಧಾನಸೌಧದಲ್ಲಿ ಮ್ಯಾರಥಾನ್‌ಗೆ ಚಾಲನೆ ಸಿಗಲಿದ್ದು, ಕೆ.ಆರ್.ಸರ್ಕಲ್, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ಸರ್ಕಲ್, ಕ್ವೀನ್ಸ್ ಪ್ರತಿಮೆ ವೃತ್ತ, ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧ ತಲುಪಲಿದೆ. 10ಕೆ ಓಟದ ಮಾರ್ಗವು ಎರಡು ಬಾರಿ ಪುನರಾವರ್ತನೆಯಾಗಲಿದೆ.
ಇದನ್ನೂ ಓದಿ | Karnataka Weather : ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಳ; ತಡೆಯಲಾಗುತ್ತಿಲ್ಲ ಬಿಸಿಲ ಕಾವು
"ಸಂಚಾರ ಸಲಹೆ / Traffic Advisory" pic.twitter.com/UxqRTWgeUG
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) March 9, 2024
ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಮ್ಯಾರಥಾನ್ ಹಿನ್ನೆಲೆಯಲ್ಲಿ ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್.ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ, ಪೊಲೀಸ್ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಬಾಳೇಕುಂದ್ರಿ ವೃತ್ತದಿಂದ ವಿಧಾನಸೌಧದ ಕಡೆಗೆ ಬರುವ ವಾಹನಗಳನ್ನು ಪಟ್ಟಾ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ, ರಾಜಭವನ ಹಾಗೂ ಚಾಲುಕ್ಯ ವೃತ್ತದ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 6ರಿಂದ ಮದ್ಯಾಹ್ನ 11:30 ರವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಎಂ.ಎಸ್. ನಿಲ್ಡಿಂಗ್ ಸುತ್ತಮುತ್ತಲಿನ ಪ್ರದೇಶಗಳು, ಹೈಕೋರ್ಟ್ ಪಾರ್ಕಿಂಗ್ ಪ್ರದೇಶ, ಎಜಿ ಕಚೇರಿಯಿಂದ ಎಂ.ಎಸ್. ಬಿಲ್ಡಿಂಗ್ ವರೆಗೆ, ಫ್ರೀಡಂ ಪಾರ್ಕ್, ಲೋಕೋಪಯೋಗಿ ಇಲಾಖಾ ಕಚೇರಿಯ ಆವರಣ, ಕೆ.ಆರ್. ವೃತ್ತ, ಜ್ಞಾನಜ್ಯೋತಿ ಸಭಾಂಗಣದ ಆವರಣ, ಶಾಸಕರ ಭವನದ ಪಾರ್ಕಿಂಗ್ ಆವರಣ, ನೆಹರೂ ಪ್ಲಾನಿಟೋರಿಯಮ್ ಒಳಾಂಗಣ, ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ, ಅರಮನೆ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ | Vande Bharat : ಪ್ರಯಾಣಿಕರ ಗಮನಕ್ಕೆ; ಬೆಂಗಳೂರು- ಚೆನ್ನೈ 2ನೇ ವಂದೇ ಭಾರತ್ ರೈಲು ಮಾರ್ಚ್ 12ಕ್ಕೆ ಹೊರಡಲಿದೆ
ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು
ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಕೆ.ಬಿ.ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ, ಸ್ಯಾಂಕಿ ರಸ್ತೆ, ಎಂಜಿ ಕಚೇರಿಯಿಂದ ಚಾಲುಕ್ಯ ಜಂಕ್ಷನ್ ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧಿಸಲಾಗಿದೆ.