ಬೆಂಗಳೂರು: ಸಂಚಾರ ಸಮಸ್ಯೆ, ಮಳೆ ಹಾನಿಯಿಂದ ನೂರಾರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿನ ಕಂಪನಿಗಳ ಸಂಘ (ಒರ್ಕಾ-ORRCA) ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬೆನ್ನಲ್ಲೇ ನಗರದ ವಿವಿಧೆಡೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶನಿವಾರ ರಾತ್ರಿ ಭೇಟಿ ನೀಡಿ, ರಸ್ತೆ ಹಾಗೂ ಮೂಲಸೌಕರ್ಯ ಪರಿಶೀಲನೆ ನಡೆಸಿದರು.
ನಗರದಲ್ಲಿನ ಅವ್ಯವಸ್ಥೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಮನವಿ ಮಾಡಿದ್ದ ಒರ್ಕಾ, ಇಲ್ಲಿನ ಸಮಸ್ಯೆಗಳಿಂದ ನೊಂದು ಐಟಿ ಮತ್ತು ಬ್ಯಾಂಕಿಂಗ್ ಕಂಪನಿಗಳು ಹೊರ ರಾಜ್ಯಕ್ಕೆ ವಲಸೆ ಹೋಗುವ ಬಗ್ಗೆಯೂ ಯೋಚಿಸುತ್ತಿವೆ ಎಂದು ಎಚ್ಚರಿಕೆ ನೀಡಿತ್ತು. ಹೀಗಾಗಿ ನಗರದ ವಿವಿಧೆಡೆ ಬಿಬಿಎಂಪಿ ಮುಖ್ಯ ಆಯುಕ್ತ, ಐಟಿ ವಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಹೆಬ್ಬಾಳ ಜಂಕ್ಷನ್‌ನಲ್ಲಿ ಪರಿಶೀಲನೆ ನಡೆಸಿದ ಆಯುಕ್ತರು, ಎಸ್ಟಿಮ್ ಹಾಲ್ ಕಡೆಯಿಂದ ಕೆ.ಆರ್.ಪುರ ಕಡೆಗೆ ಹೋಗುವ ಮಾರ್ಗದ ವಿಸ್ತರಣೆ, ಹೆಬ್ಬಾಳ ಕೆರೆ(ಬಳ್ಳಾರಿ ಮಾರ್ಗ)ಯ ರಸ್ತೆ ಅಗಲೀಕರಣ, ಎಲ್ಲ ಕಡೆ ಬೀದಿ ದೀಪಗಳನ್ನು ಅಳವಡಿಸಲು, ಪಾದಚಾರಿ ಮಾರ್ಗ ಸರಿಪಡಿಸಲು ಸೂಚಿಸಿದರು.
ಇನ್ನು ಪಾದಚಾರಿಗಳ ಕ್ರಾಸಿಂಗ್‌ಗಾಗಿ ಈಗಾಗಲೇ ಎರಡು ಕಡೆ ಲೈನಿಂಗ್ ಮಾಡಿದ್ದು, ಉಳಿದ ಕಡೆಯೂ ಕೂಡಲೆ ಲೈನಿಂಗ್ ಮಾಡಲು ಸೂಚಿಸಿದ ಅವರು, ಹೆಬ್ಬಾಳ ಜಂಕ್ಷನ್‌ನ ಪಾದಚಾರಿ ಮಾರ್ಗಗಳಿಗೆ ಗ್ರಿಲ್ ಅಳವಡಿಸಿವುದು, ಮಳೆ ನೀರು ರಸ್ತೆ ಮೇಲೆ ನಿಲ್ಲದಂತೆ ಸರಾಗವಾಗಿ ನೀರುಗಾಲುವೆಗೆ ಹರಿದು ಹೋಗುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಕೆ.ಆರ್.ಪುರ, ಹೊರ ವರ್ತುಲ ರಸ್ತೆ, ಇಬ್ಬಲೂರು ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್, ಸಾರಕ್ಕಿ ಜಂಕ್ಷನ್, ಸುಮ್ಮನಹಳ್ಳಿ ಹಾಗೂ ಗೊರಗುಂಟೆ ಪಾಳ್ಯ ಜಂಕ್ಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ | ಮೂಲ ಸೌಕರ್ಯ ಸರಿಪಡಿಸದೆ ಇದ್ದರೆ ಬೆಂಗಳೂರಿನಿಂದ ವಲಸೆ: ಐಟಿ ಕಂಪನಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ