Site icon Vistara News

ಎಂ.ಎಸ್. ರಾಮಯ್ಯ ನಿಜವಾದ ಕರ್ಮಯೋಗಿ: ಸಚಿವ ಅಶ್ವತ್ಥನಾರಾಯಣ

ಎಂ.ಎಸ್. ರಾಮಯ್ಯ

ಬೆಂಗಳೂರು: ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಸಮಾಜದ ಸಬಲೀಕರಣ ಮತ್ತು ಬೆಳವಣಿಗೆಗೆ ಮೌಲಿಕ ಕೊಡುಗೆ ನೀಡಿದ ಎಂ.ಎಸ್.ರಾಮಯ್ಯ ಅವರು ನಿಜವಾದ ಕರ್ಮಯೋಗಿಯಾಗಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನಗರದ ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾನುವಾರ ಮಾತನಾಡಿ, ದೇಶದಲ್ಲಿ ಶಿಕ್ಷಣ ಕ್ಷೇತ್ರದ ಖಾಸಗೀಕರಣ ಆರಂಭವಾಗಿದ್ದೇ ಕರ್ನಾಟಕದಿಂದ. ಆಗ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಆದರೆ, ಖಾಸಗೀಕರಣವು ಅಗತ್ಯವಾಗಿತ್ತು. ಇದಕ್ಕೆ ಖಾಸಗೀಕರಣಕ್ಕೆ ತೆರೆದುಕೊಂಡಿದ್ದರಿಂದ ಕರ್ನಾಟಕವು ಇಂದು ಶಿಕ್ಷಣ ರಂಗದಲ್ಲಿ ಮುಂಚೂಣಿಯಲ್ಲಿದೆ ಎಂದು ನುಡಿದರು.

ರಾಮಯ್ಯ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಜಾಗತಿಕಮಟ್ಟದ ಮತ್ತು ಸ್ಪರ್ಧಾತ್ಮಕ ಶಿಕ್ಷಣ ಒದಗಿಸುತ್ತಿವೆ. ಇಂತಹ ಸಂಸ್ಥೆಗಳ ಬೆಳವಣಿಗೆಗೆ ಸರ್ಕಾರವು ಅಗತ್ಯ ನೆರವು ನೀಡಲಿದೆ ಎಂದು ಆಶ್ವಾಸನೆ ನೀಡಿದ ಅವರು, ಶಿಕ್ಷಣದ ಬೆಳವಣಿಗೆಯೇ ಸಮಾಜದ ಉನ್ನತಿಗೆ ಆಧಾರ ಸ್ತಂಭವಾಗಿದೆ. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯೇ ಸಮಾಜದ ಬೆಳವಣಿಗೆಯಾಗಿದೆ. ಆದ್ದರಿಂದ ಸಮಾಜವು ಶಿಕ್ಷಣಾಧಾರಿತವಾಗಿ ಬೆಳೆಯಬೇಕು ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಂ.ಎಸ್‌.ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಆರ್.ಜಯರಾಂ, ಕುಲಪತಿ ಎಂ.ಆರ್.ಸೀತಾರಾಂ, ಎಂ.ಆರ್.ರಾಮಯ್ಯ, ಹಿರಿಯ ವಿಜ್ಞಾನಿ ವಾಸುದೇವ ಅತ್ರೆ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | ಕೇಬಲ್ ನೆಟ್ ಮೂಲಕ ಮೀನುಗಾರಿಕೆಗೆ ಸಹಾಯಧನ; 1,000 ಮೀನುಗಾರರಿಗೆ ಹೆಚ್ಚಳ ಎಂದು ಸಿಎಂ ಬೊಮ್ಮಾಯಿ ಘೋಷಣೆ

Exit mobile version