ಬೆಂಗಳೂರು: ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೆಳಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಶ್ರೀರಾಮ್‌ಪುರ ಸನ್ ರೈಸ್ ವೃತ್ತದಿಂದ ಶೇಷಾದ್ರಿಪುರಂವರೆಗೆ ಕನ್ನಡ ಜಾಗೃತಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ ಕನ್ನಡ ಹಬ್ಬಕ್ಕೆ ಮೆರಗು ನೀಡಿದರು. ವಿವಿಧ ಸಾಂಸ್ಕೃತಿಕ ಮೇಳಗಳು ಕನ್ನಡ ಜಾಗೃತಿ ಮೆರವಣಿಗೆಯಲ್ಲಿ ಗಮನ ಸೆಳೆದವು.
ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಸಾಂಸ್ಕೃತಿಕ ಭಂಡಾರವೇ ಇದೆ. ಕನ್ನಡ ಭಾಷೆಯ ಜ್ಞಾನ ಇಂದು ದೇಶ ವಿದೇಶಗಳಲ್ಲಿ ಪಸರಿಸಿದೆ. ಯಾವುದೇ ದೇಶಕ್ಕೆ ಹೋದರು ನಮ್ಮ ಕನ್ನಡಿಗರು ನೆಲೆಸಿರುವುದನ್ನು ನಾವು ಕಾಣುತ್ತೇವೆ. ಕನ್ನಡ ಭಾಷೆಗಿರುವ ಶ್ರೀಮಂತಿಕೆಯ ಸಾಹಿತ್ಯ, ಸಂಸ್ಕೃತಿ, ಅಪಾರ ಜ್ಞಾನ ಸಂಪತ್ತಿನಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
ಗಾಂಧಿನಗರದಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, ಕನ್ನಡಕ್ಕೆ ನಮ್ಮ ಕಡೆಯಿಂದ ಒಂದು ಸಣ್ಣ ಸೇವೆ. ಯುವಕರು ನಮ್ಮ ಕನ್ನಡ ಭಾಷೆಯಲ್ಲಿರುವ ಜ್ಞಾನವನ್ನು ಸಂಪಾದಿಸಿಕೊಂಡು, ಕನ್ನಡ ಸೇವೆಗೆ ಸದಾ ಸಜ್ಜಾಗಿರಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್ ಸಮಾಲೋಚನೆ
ವಿ.ರಾಣಿ ಗೋವಿಂದರಾಜು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಕವಿ ಗೋಷ್ಠಿ ಸೇರಿದಂತೆ, ಕನ್ನಡ ನಾಳೆಗಳು ಹೇಗಿರಬೇಕು ಹಾಗೂ ಸರ್ವಜನಾಂಗದ ಶಾಂತಿಯ ತೋಟ- ಗಾಂಧಿನಗರ ಕ್ಷೇತ್ರ ಎಂಬ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಅಲ್ಲದೇ ಕನ್ನಡ ಸೇವೆ ಸಲ್ಲಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಕ್ಕೂ ಹೆಚ್ಚು ಗಣ್ಯರನ್ನು ಇದೇ ವೇಳೆ ಗೌರವಿಸಿ, ಸನ್ಮಾನಿಸಲಾಯಿತು.