Site icon Vistara News

Dept of higher education | ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್‌ ಸಿದ್ಧ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

Dept of higher education

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ (dept of higher education) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕುಂದುಕೊರತೆಗಳನ್ನು ಸುಲಭವಾಗಿ ಪರಿಹರಿಸಲು ಸಮಗ್ರ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಇದನ್ನು ‘ಸುಶಾಸನ ದಿನ’ವಾದ ಡಿ.25ರಂದು ಉದ್ಘಾಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಬೋಧಕರನ್ನು ಉದ್ದೇಶಿಸಿ ವರ್ಚ್ಯುವಲ್ ಸಭೆಯಲ್ಲಿ ಸೋಮವಾರ ಮಾತನಾಡಿದರು.

ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆದಷ್ಟೂ ಮಟ್ಟಿಗೆ ನ್ಯಾಯಾಲಯದ ಹೊರಗೆಯೇ ನಿವಾರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಪೋರ್ಟಲ್‌ ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಸರಳವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಕುಂದುಕೊರತೆಗಳನ್ನು ಆಲಿಸಿ, ಪಿಂಚಣಿ, ಬಡ್ತಿ, ನಿಯೋಜನೆ, ವರ್ಗಾವಣೆ ಮುಂತಾದ ವಿಚಾರಗಳನ್ನು ಸುಲಭವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ವಿಶೇಷ | SCST ಮೀಸಲು ನಂತರ ಸರ್ಕಾರದ ಮತ್ತೊಂದು ಅಸ್ತ್ರ: ಸದಾಶಿವ ಆಯೋಗದ ಕುರಿತು ಮಹತ್ವದ ನಿರ್ಧಾರ

ಉನ್ನತ ಶಿಕ್ಷಣದ ಹಂತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶವಿರುವ ‘ಓಪನ್‌ ಎಲೆಕ್ಟಿವ್ಸ್’ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಹಾಗೆಯೇ, ಪದವಿಯ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ವಿವರಗಳನ್ನು ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಜತೆಗೆ, ಪದವೀಧರರಾಗಿ ಹೊರಹೋಗಿರುವ ವಿದ್ಯಾರ್ಥಿಗಳನ್ನೂ ಇದರಲ್ಲಿ ನೋಂದಾಯಿಸಬೇಕು. ಇದರಿಂದ ಆ ಮಕ್ಕಳಿಗೆ ಯಾವ ಕೌಶಲಗಳನ್ನು ಕಲಿಸಬಹುದು ಎನ್ನುವುದು ಉದ್ಯಮ ವಲಯದವರಿಗೂ ಗೊತ್ತಾಗುತ್ತದೆ. ಆದ್ದರಿಂದ ಎನ್‌ಇಪಿ ಬಗ್ಗೆ ಕಾಲೇಜು ಹಂತದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು.

ಜಾಗತಿಕ ಸ್ಪರ್ಧೆಯ ಈ ಯುಗದಲ್ಲಿ ರಿಯಾಯಿತಿಗಾಗಲಿ, ರಾಜಿಗಾಗಲಿ ಅವಕಾಶವಿಲ್ಲ. ಆದ್ದರಿಂದ ಸ್ಮಾರ್ಟ್ ಕ್ಲಾಸ್‌ರೂಂ ಇರುವೆಡೆಗಳಲ್ಲಿ ಅದರ ಮೂಲಕವೇ ಬೋಧನೆ ನಡೆಯಬೇಕು. ಕೆಎಲ್‌ಎಂಎಸ್‌ ವ್ಯವಸ್ಥೆಯಲ್ಲಿರುವ ಪಠ್ಯಗಳನ್ನು ನೂರಕ್ಕೆ ನೂರರಷ್ಟು ಉಪಯೋಗಿಸಿಕೊಳ್ಳಬೇಕು. ಜತೆಗೆ ಇದರ ಅಡಿಯಲ್ಲಿ ಪ್ರತಿ ವಿದ್ಯಾರ್ಥಿಯೂ ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.

ಇಲಾಖೆಯಲ್ಲಿ ಸುಶಾಸನದ ಅತ್ಯುತ್ತಮ ಅಂಶಗಳೆಲ್ಲವೂ ಜಾರಿಗೆ ಬರಬೇಕು. ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳನ್ನು ಸಾಕಷ್ಟು ಸುಧಾರಿಸಲಾಗಿದೆ. ಈಗಂತೂ ಆಯಾ ಕಾಲೇಜುಗಳಲ್ಲಿ ಸಂಗ್ರಹವಾಗುವ ಹಣವನ್ನು ಆಯಾ ಕಾಲೇಜುಗಳಿಗೇ ನೀಡಲಾಗುತ್ತಿದೆ. ಈ ಮೂಲಕ ಆರ್ಥಿಕ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ಹೆಚ್ಚಿನ ಉತ್ತರದಾಯಿತ್ವಗಳನ್ನು ರೂಢಿಗೆ ತರಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ | ಸದಾಶಿವ ಆಯೋಗ ಕುರಿತು ಟ್ವೀಟ್‌ ಮಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ: ದಲಿತರಿಗೆ ವಂಚಿಸಿದ್ದು ನೀವೇ ಎಂದ ಬಿಜೆಪಿ

Exit mobile version