Site icon Vistara News

Ambedkar Jayanti: ಡಾ.ಬಿ.ಆರ್‌.ಅಂಬೇಡ್ಕರ್ ಕನಸಿನ ಸಮಾನತೆಯ ಸಮಾಜ ಕಟ್ಟಲು ಶ್ರಮಿಸೋಣ: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ

#image_title

ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಪುಲಿಕೇಶಿ ನಗರದ ಟ್ಯಾನರಿ ರಸ್ತೆಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 132ನೇ ಅಂಬೇಡ್ಕರ್ ಜಯಂತಿಯನ್ನು (Ambedkar Jayanti) ಶುಕ್ರವಾರ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಿದರು.

ಈ ವೇಳೆ ಮಾತನಾಡಿದ ಅಖಂಡ ಶ್ರೀನಿವಾಸ್ ಮೂರ್ತಿ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಪಾಯ ಹಾಕಿಕೊಟ್ಟ ಮಹನೀಯರು. ಸಮಾನತೆ ಸಮಾಜದ ಕನಸು ಕಂಡಂತಹ ಅವರು ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರು ಬಹಳ ಕಷ್ಟ-ನೋವುಗಳ ನಡುವೆ ಬದುಕು ಕಟ್ಟಿಕೊಂಡವರು. ಅಸಮಾನತೆ, ಅಸ್ಪೃಶ್ಯತೆ ತೊಲಗಬೇಕೆಂಬ ನಿಟ್ಟಿನಲ್ಲಿ ಹೋರಾಟ ಮಾಡಿ ಸಮಾನತೆಯ ಶಿಕ್ಷಣಕ್ಕೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ನಿಲುವು, ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಾರತದ ಸತ್ಪ್ರಜೆಯಾಗಲು ಪ್ರಯತ್ನಿಸಬೇಕು. ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಅವರು, ತಮ್ಮ ಶಿಕ್ಷಣದ ಮೂಲಕ ಅವರನ್ನು ಕೀಳಾಗಿ ಕಂಡ ಸಮಾಜಕ್ಕೆ ಉತ್ತರ ನೀಡಿದರು. ಭಾರತದ ಅತ್ಯುನ್ನತ ಸ್ಥಾನಕ್ಕೇರಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಬದುಕಿನ ಹೋರಾಟದ ದಿನಗಳು ನಮಗೆಲ್ಲರಿಗೂ ಮಾದರಿಯಾಗಬೇಕು. ನಾವು ಕೂಡ ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸೋಣ ಎಂದು ಹೇಳಿದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಆಗಮಿಸಿದ್ದ ಕಾರ್ಯಕರ್ತರಿಗೆ ಶಾಸಕರು ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿದರು. ಕಾಂಗ್ರೆಸ್ ಪಕ್ಷದ ಪುಲಿಕೇಶಿ ನಗರದ ಟಿಕೆಟ್ ಆಕಾಂಕ್ಷಿಯಾಗಿರುವ ಅಖಂಡ ಶ್ರೀನಿವಾಸ್ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ 3ನೇ ಪಟ್ಟಿಯಲ್ಲಿ ಟಿಕೆಟ್ ಸಿಗಬಹುದೆಂಬ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ | Ambedkar Jayanti 2023: ಹೈದ್ರಾಬಾದ್‌ನಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ, ಕಾಪ್ಟರ್ ಮೂಲಕ ಪುಷ್ಪಾರ್ಚನೆ

ಬೊಮ್ಮನಹಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ

ಬೊಮ್ಮನಹಳ್ಳಿ: ಬೆಂಗಳೂರು ಹೊರವಲಯದ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ.ಸತೀಶ್ ರೆಡ್ಡಿ, ಬಿಜೆಪಿ ಎಸ್.ಸಿ ಘಟಕದ ಸಾವಿರಾರು ಜನ ಕಾರ್ಯಕರ್ತರು ಭಾಗಿಯಾಗಿದ್ದರು.

Exit mobile version