Site icon Vistara News

Namma Bharatha | ‘ನಮ್ಮ ಭಾರತ’ ಪುಸ್ತಕದಲ್ಲಿ ಗಂಭೀರ, ಚಿಂತನಶೀಲ ಬರಹಗಳಿವೆ: ರವೀಂದ್ರ ಭಟ್‌

Namma Bharatha

ಬೆಂಗಳೂರು: ನಗರದ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಶನಿವಾರ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ, ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರ “ನಮ್ಮ ಭಾರತ” (Namma Bharatha) ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವು ಅತಿಥಿಗಳ ಸಂವಾದದ ರೂಪದಲ್ಲಿ ನಡೆದದ್ದು ವಿಶೇಷವಾಗಿತ್ತು.

ನಮ್ಮ ಭಾರತ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಮಾತನಾಡಿ, ಕೆಡಕುಗಳನ್ನು ಕಡಿಮೆ ಮಾಡಲು ಏನೆಲ್ಲ ಸಾಧ್ಯವೋ ಅವನ್ನೆಲ್ಲ ಮಾಡಬೇಕು. ಇದೇ ಆಶಯದೊಂದಿಗೆ ಕ್ಯಾಪ್ಟನ್‌ ಈ ಪುಸ್ತಕ ಬರೆದಿದ್ದಾರೆ. ಒಂದು ಪಕ್ಷದೊಳಗಿದ್ದು, ಅದನ್ನು ಮೀರುವ ಗುಣವನ್ನು ಕ್ಯಾಪ್ಟನ್ ತೋರಿದ್ದಾರೆ. ಅದನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ‘ನಮ್ಮ ಭಾರತ’ ಪುಸ್ತಕದಲ್ಲಿ ಆರ್ಥಿಕತೆ, ಸಮಾಜ, ರಾಜಕೀಯ, ಉದ್ಯಮ ಮುಂತಾದ ಕ್ಷೇತ್ರಗಳ ಬಗ್ಗೆ ಗಂಭೀರವಾದ ಚಿಂತನಶೀಲ ಬರಹಗಳ ಜತೆಗೆ ಕೆಲವು ಹಾಸ್ಯ ಪ್ರಸಂಗಗಳೂ ಇವೆ ಎಂದು ಹೇಳಿದರು.

ಲಕ್ಷಾಂತರ ಭಾರತೀಯರ ವಿಮಾನ ಪಯಣದ ಕನಸನ್ನು ನನಸಾಗಿಸಿ ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕ್ಯಾಪ್ಟನ್‌ ಜಿ.ಆರ್.ಗೋಪಿನಾಥ್ ಮಾತನಾಡಿ, ಇಂದು ನಾವು ಅಸಹಿಷ್ಣುತೆಯ ಬಗ್ಗೆ ಮಾತಾಡುತ್ತಿರುವುದೇ ನಮ್ಮ ದೌರ್ಭಾಗ್ಯ. ದೇಶದ ಉದ್ಯಮ ವಲಯದಲ್ಲಿ ಖಾಸಗೀಕರಣ ಬಹಳ ಮುಖ್ಯ, ಏಕೆಂದರೆ ಸಾರ್ವಜನಿಕ ವಲಯದ ಉದ್ದಿಮೆಗಳು ಹೆಚ್ಚು ದಕ್ಷವಾಗಿರುವುದಿಲ್ಲ. ಆದರೆ ಖಾಸಗಿ ವಲಯದ ಏಕಸ್ವಾಮ್ಯತೆ ರಾಕ್ಷಸನಿದ್ದಂತೆ. ಹಾಗೆ ಆಗಲು ಬಿಡಬಾರದು ಎಂದು ಹೇಳಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಬುದ್ಧಿವಂತಿಕೆ ಒಂದೇ ನಿಮ್ಮ ಮಗುವಿನ ಆಸ್ತಿ ಅಲ್ಲ, ಅದಕ್ಕೆ ಬೇಕು ಈ ನಾಲ್ಕು Qಗಳು

ಕ್ಯಾಪ್ಟನ್ ಗೋಪಿನಾಥ್ ಅವರು ಬರೆದ ಮೂಲ “Our India” ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿರುವ ವಿಜಯ್‌ ಜೋಷಿ ಮಾತನಾಡಿ, ಇಡೀ ಪುಸ್ತಕವನ್ನು ಪ್ರಜಾಪ್ರಭುತ್ವದ ಚಿಂತನೆಗಳನ್ನು ಇಟ್ಟುಕೊಂಡು ಕ್ಯಾಪ್ಟನ್ ಬರೆದಿದ್ದಾರೆ. ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಈ ಪುಸ್ತಕ ಕನ್ನಡಕ್ಕೆ ಬರಲೇಬೇಕಿತ್ತು. ಇದನ್ನು ಕನ್ನಡಕ್ಕೆ ತರುವ ಅವಕಾಶ ನನಗೆ ಒದಗಿ ಬಂದಿದ್ದಕ್ಕೆ ಬಹಳ ಸಂತಸವಾಗುತ್ತಿದೆ ಎಂದು ಧನ್ಯವಾದ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಖ್ಯಾತ ಸಾಹಿತಿ, ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕ್ಯಾಪ್ಟನ್‌ ಅವರ ಆಶಾವಾದದ ಗುಣವನ್ನು ಮೆಚ್ಚಿಕೊಂಡು, ಆದ್ಯತೆಗಳ ಪಲ್ಲಟವಾಗಿರುವ ಇಂದಿನ ಕಾಲದಲ್ಲಿ ‘ಬಹುತ್ವ ಭಾರತ’ದ ಪರಿಕಲ್ಪನೆಗೆ ಒತ್ತುಕೊಟ್ಟರು. ಕ್ಯಾಪ್ಟನ್‌ ಅವರದ್ದು ಆಯ ತಪ್ಪದ ಆಲೋಚನೆ. ಇಂದಿನ ಧಾರ್ಮಿಕ ಮೂಲಭೂತವಾದ, ಕೋಮು ಸಂಘರ್ಷ, ಅಸಹಿಷ್ಣುತೆ, ಭ್ರಷ್ಟಾಚಾರ, ಬಡತನ ಮುಂತಾದ ಪಿಡುಗುಗಳನ್ನು ಮೀರುವ ಒಂದು ಆಶಾವಾದ ಈ ಪುಸ್ತಕದಲ್ಲಿದೆ. ಸ್ವಾತಂತ್ರ್ಯ, ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಇಲ್ಲ. ಇಂದು ನಾವೆಲ್ಲರೂ ಜಾತಿ ಎಂಬ ಜೈಲು, ಧರ್ಮ ಎಂಬ ದ್ವೀಪಗಳಲ್ಲಿ ಬಂಧಿಯಾಗಿದ್ದೇವೆ. ಇದರಿಂದ ಕಳಚಿಕೊಳ್ಳಬೇಕು. ನಾಯಕ, ಖಳನಾಯಕರನ್ನು ಸೃಷ್ಟಿಸುವ ಚಾಳಿಯನ್ನು ನಾವು ಬಿಡಬೇಕು. ನಮ್ಮ ದೇಶವೇ ನಿಜವಾದ ನಾಯಕ ಎಂದ ಅವರು, ಕ್ಯಾಪ್ಟನ್ ಅವರು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬಗ್ಗೆ ಒಲವು ಇಟ್ಟುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಖಕಿ, ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಗೀತಾ ವಸಂತ ಮಾತನಾಡಿ, ಕ್ಯಾಪ್ಟನ್‌ ಗೋಪಿನಾಥ್ ಅವರು ತಮ್ಮ ಒಂದೇ ಜೀವಿತಾವಧಿಯಲ್ಲಿ ಹಲವು ಅವತಾರಗಳನ್ನು ಎತ್ತಿರುವ ಮಹಾನ್ ವ್ಯಕ್ತಿ. ಯೋಧ, ಕೃಷಿಕ, ಉದ್ಯಮಿ, ಬರಹಗಾರರಾಗಿ ಬದುಕಿನ ಕುಲುಮೆಯಲ್ಲಿ ಬೆಂದು, ಅಪಾರ ಅನುಭವಗಳಿಂದ ತಿದ್ದಿ, ತೀಡಲ್ಪಟ್ಟ ಕ್ಯಾಪ್ಟನ್ ಅವರು ಬಹಳ ಪ್ರಾಮಾಣಿಕವಾಗಿ ಬರೆಯುತ್ತಾರೆ. ಭಾರತ ಒಂದು ಮಹಾನ್ ದೇಶ ಎಂದು ಹೇಳುವಾಗ, ಇಲ್ಲಿನ ಎರಡು ಬಗೆಗಳು, ಕಹಿ ಸತ್ಯಗಳನ್ನು ಹೇಳಲು ಕ್ಯಾಪ್ಟನ್ ಹಿಂಜರಿದಿಲ್ಲ. ಲೌಕಿಕ ಮತ್ತು ಅಲೌಕಿಕ ವಿಷಯಗಳೆರೆಡರ ಬಗ್ಗೆಯೂ ಪರಿಣತಿಯಿಂದ ಬರೆಯಬಲ್ಲ ಕ್ಯಾಪ್ಟನ್ ಅವರು ನಿಜವಾದ ಅರ್ಥದಲ್ಲಿ ಒಬ್ಬ ಬುದ್ಧಿಜೀವಿ ಎಂದು ಹೇಳಿದರು.

ಹರಿವು ಬುಕ್ಸ್‌ನ ನಿರ್ದೇಶಕ ರತೀಶ ರತ್ನಾಕರ ಮಾತನಾಡಿ, ಹರಿವು ಬುಕ್ಸ್‌ಗೆ ಒಂದು ವರ್ಷ ತುಂಬಿದ ಹೊತ್ತಲ್ಲಿ ಕ್ಯಾಪ್ಟನ್ ಗೋಪಿನಾಥ್‌ ಅವರಂತಹ, ಕನ್ನಡಿಗರಲ್ಲಿ ಹುರುಪು ತುಂಬುವ ಒಬ್ಬ ಕೆಚ್ಚೆದೆಯ ಕನ್ನಡಿಗನೊಂದಿಗೆ ಕೆಲಸ ಮಾಡಿದ್ದು ನಮ್ಮ ಸಂಸ್ಥೆಯ ಹೆಮ್ಮೆ. ಅವರ ಪುಸ್ತಕ ನಮ್ಮ ಪ್ರಕಾಶನದಿಂದ ಹೊರಬಂದಿರುವುದು ನಮ್ಮ ಪುಣ್ಯ ಎಂದು ಹೇಳಿದರು.

ಇದನ್ನೂ ಓದಿ | Kannada Sahitya Parishat | ಡಿ.30ರಿಂದ ಕನ್ನಡ ಸಾಹಿತ್ಯ ಪರಿಷತ್‌ ಸಾಹಿತ್ಯ ಪರೀಕ್ಷೆ

Exit mobile version