ಬೆಂಗಳೂರು: ಇತ್ತೀಚೆಗೆ ನಮ್ಮ ಮೆಟ್ರೋ (Namma Metro) ನಾನಾ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಯುವತಿಯೊಬ್ಬಳು ಕೈ ಜಾರಿದ ಮೊಬೈಲ್‌ಗಾಗಿ ಮೆಟ್ರೋ ಹಳಿಗೆ ಇಳಿದಿದ್ದಳು. ಬಳಿಕ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ ಜೆ.ಪಿ ನಗರದ ಮೆಟ್ರೋ ಹಳಿಯಲ್ಲಿ ಕಪ್ಪು ಬೆಕ್ಕೊಂದು ಟ್ರ್ಯಾಕ್‌ಗೆ ಇಳಿದು ಸಾಕಷ್ಟು ಆತಂಕವನ್ನು ಸೃಷ್ಟಿಸಿತ್ತು.
ರಾಜಧಾನಿ ಬೆಂಗಳೂರಿಗರ ನೆಚ್ಚಿನ ಟ್ರಾನ್ಸ್‌ಪೋರ್ಟ್ ಸಿಸ್ಟಂ ಎಂದರೆ ಅದು ನಮ್ಮ ಮೆಟ್ರೋ ಸೇವೆ. ಕನೆಕ್ವಿವಿಟಿ ಸಿಕ್ಕಿದ್ಮೇಲೆ ನಿತ್ಯ ಲಕ್ಷಾಂತರ ಮಂದಿ ಮೆಟ್ರೋ ರೈಲಿನಲ್ಲಿ ಓಡಾಡುತ್ತಾರೆ. ಪೀಕ್ ಟೈಂನಲ್ಲಿ ಜನದಟ್ಟಣೆಯನ್ನು ಕಂಟ್ರೋಲ್ ಮಾಡಲು ಮೆಟ್ರೋ ಸಿಬ್ಬಂದಿ ಹರಸಾಹಸವೇ ಪಡಬೇಕು. ಈ ಮಧ್ಯೆ ಆಗಾಗ ನಡೆಯುವ ಅಚಾತುರ್ಯಗಳು ಸಿಬ್ಬಂದಿಯ ತಲೆನೋವಿಗೆ ಕಾರಣವಾಗಿದೆ.
ಮೆಟ್ರೋ ಸಿಬ್ಬಂದಿ ಅಕ್ಷರಶಃ ಮೈ ಎಲ್ಲ ಕಣ್ಣಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಯಾವಾಗ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಬಿಡುತ್ತಾರೋ ಎಂಬ ಆತಂಕದಲ್ಲಿ ಇದ್ದಾರೆ. ಈ ನಡುವೆ ಜೆ.ಪಿ.ನಗರ ಮೆಟ್ರೋ ಹಳಿಗೆ ಬೆಕ್ಕುವೊಂದು ಜಿಗಿದಿದ್ದು, ಕ್ಷಣ ಕಾಲ ಆತಂಕವನ್ನು ಸೃಷ್ಟಿಸಿತ್ತು.
ಟ್ರ್ಯಾಕ್‌ನಲ್ಲಿ ಬೆಕ್ಕು ಇರುವುದನ್ನು ಕಂಡ ಪ್ರಯಾಣಿಕರು ಕೂಡಲೇ ಮೆಟ್ರೋ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬೆಕ್ಕನ್ನು ರಕ್ಷಣೆ ಮಾಡಲು ಮುಂದಾಗಿಲ್ಲ. ಬದಲಿಗೆ ಟ್ರ್ಯಾಕ್‌ನಲ್ಲಿದ್ದ ಬೆಕ್ಕನ್ನು ಓಡಿಸಲು ಮುಂದಾಗಿದ್ದಾರೆ ಎಂದು ಟ್ವಿಟ್ಟರ್ (ಎಕ್ಸ್) ಮೂಲಕ ಆಕ್ರೋಶ ಹೊರಹಾಕಿದ್ದಾರೆ
ಮೆಟ್ರೋ ಟ್ರ್ಯಾಕ್ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಜಾಲಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ ಹಳಿಯ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿತ್ತು. ಕೂಡಲೇ ಸಿಬ್ಬಂದಿ ಆ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ನಡೆದ ಹಿನ್ನೆಲೆಯಲ್ಲಿ ಯಶವಂತಪುರ- ನಾಗಸಂದ್ರ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಜ.5ರ ಸಂಜೆ 7:12ಕ್ಕೆ ಮೆಟ್ರೋ ಹಳಿಗೆ ಕೇರಳ ಮೂಲದ ಯುವಕ ಧುಮುಕಿದ್ದ. ಯುವಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಆತನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನ ಸ್ನೇಹಿತನನ್ನು ವಿಚಾರಣೆ ಮಾಡುತ್ತಿದ್ದಾರೆ. ರೈಲು ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಶವಂತಪುರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಹೊರ ಬರಬೇಕಾಯಿತು.
ಅಬ್ಬಿಗೆರೆಯ ಫ್ಯಾಕ್ಟರಿಯೊಂದರಲ್ಲಿ ಕೇರಳ ಮೂಲದ 23 ವರ್ಷದ ಯುವಕ ಕೆಲಸ ಮಾಡುತ್ತಿದ್ದ. ಯುವಕ ರೈಲ್ವೆ ಹಳಿಗೆ ಹಾರುತ್ತಿದ್ದಂತೆ ಮೆಟ್ರೊ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಯುವಕನಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇತ್ತೀಚೆಗೆ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಟ್ರ್ಯಾಕ್‌ಗೆ ಇಳಿದಿದ್ದ ಘಟನೆ ನಡೆದಿತ್ತು. ಕೂಡಲೇ ಸಿಬ್ಬಂದಿ ವಿದ್ಯುತ್ ಸಂಪರ್ಕ್ ತೆಗೆದು ಮಹಿಳೆಯನ್ನು ರಕ್ಷಿಸಿದ್ದರು. ಮೊಬೈಲ್ ಕೆಳಗೆ ಬಿದ್ದಿದ್ದರಿಂದ ರೈಲು ಹಳಿಗೆ ಮಹಿಳೆ ಇಳಿದಿದ್ದರು. ಬಿಎಂಆರ್‌ಸಿಎಲ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಆಗುವ ಅನಾಹುತ ತಪ್ಪಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.