ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬಿಎಂಆರ್ಸಿಎಲ್ ಮತ್ತೊಂದು ಹಂತದ ಮೆಟ್ರೋ ಸಂಚಾರಕ್ಕೆ ಸಜ್ಜಾಗುತ್ತಿದೆ. ಬೈಯಪ್ಪನಹಳ್ಳಿ-ಕೆಆರ್ಪುರಂ, ಕೆಂಗೇರಿ-ಚಲ್ಲಘಟ್ಟ ಮಾರ್ಗದ ಮೆಟ್ರೋ ಸಂಚಾರಕ್ಕೆ (Namma Metro) ಸಿದ್ಧ ಮಾಡಿಕೊಳ್ಳುತ್ತಿದೆ. ಈ ಮಾರ್ಗವು ಸೆ. 18ರ ಗಣೇಶ ಹಬ್ಬದಂದೇ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿಸಿ ರೈಲಿನ ಟ್ರಯಲ್ ರನ್ ನಡೆಸಲಾಗುತ್ತಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಬಿಎಂಆರ್ಸಿಎಲ್ಗೆ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ. ಅದೆಲ್ಲವೂ ಮುಗಿದು ಸಿಎಂಆರ್ಎಸ್ ಗ್ರೀನ್ ಸಿಗ್ನಲ್ ನೀಡಿದರೆ ಸೆ.15 ನಂತರ ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಸಂಚಾರ ಆರಂಭಿಸಲಾಗುತ್ತದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Bengaluru Bandh : ಏರ್ಪೋರ್ಟ್ನಲ್ಲಿ ವೈಟ್ಬೋರ್ಡ್ ಕಾರುಗಳಲ್ಲಿ ಡಬಲ್ ರೇಟ್ ಸುಲಿಗೆ
ಸಿಎಂಆರ್ಎಸ್ ಪರಿಶೀಲನೆಯೊಂದಿಗೆ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸುವ ತಯಾರಿಯಲ್ಲಿದೆ. ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದ 2.1 ಕಿಮೀ ಮತ್ತು ಕೆಂಗೇರಿ-ಚಲ್ಲಘಟ್ಟ 2 ಕಿ.ಮೀ ಮೆಟ್ರೋ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ಗಣೇಶ ಚತುರ್ಥಿಯಂದು (ಸೆ.18) ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಮಾರ್ಗದ ಉದ್ಘಾಟನೆಗೆ ಯೋಜಿಸಲಾಗುತ್ತಿದೆ.
ಸೆಪ್ಟೆಂಬರ್ 15ರ ನಂತರ ಯಾವುದೇ ಸಮಯದಲ್ಲಾದರೂ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಸಿದ್ದಇರುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿದ ನಂತರ ಉದ್ಘಾಟನಾ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ನೇರಳೆ ಮಾರ್ಗವು 39.34 ಕಿ.ಮೀ ಉದ್ದವಿದ್ದು, ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಿಂದ ಕೆಆರ್ ಪುರಕ್ಕೆ ಸಂಪರ್ಕಿಸುತ್ತದೆ. ಕೆ.ಆರ್. ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ಚೈನ್ ಲಿಂಕ್ ಪೂರ್ಣಗೊಂಡರೆ ಪ್ರಯಾಣಿಕರಿಗೆ ಸುಲಭವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹದೇವಪುರ, ಐಟಿಪಿಬಿ ಮತ್ತು ಕಾಡುಗೋಡಿ ಮುಂತಾದ ಪ್ರದೇಶಗಳಿಗೆ ಹೋಗುವ ಐಟಿ ಮಂದಿಗೆ ಸಹಾಯವಾಗುತ್ತದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ