ಬೆಂಗಳೂರು: ನಮ್ಮ ಮೆಟ್ರೋ (Namma Metro) ವಿನೂತನ ತಂತ್ರಜ್ಞಾನ ಅಳವಡಿಕೆಗೆ ದಾಪುಗಾಲಿಡುತ್ತಿದೆ. ದೆಹಲಿಯಲ್ಲಿ ಈಗಾಗಲೇ ಚಾಲಕರಿಲ್ಲದ ಮೆಟ್ರೊ ರೈಲುಗಳು ಓಡಾಡುತ್ತಿದೆ. ಇದೀಗ ಬೆಂಗಳೂರಲ್ಲೂ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (yellow Line) ಚಾಲಕರಿಲ್ಲದ ರೈಲು ಓಡಾಡಲಿದೆ. ಆರ್.ವಿ.ರಸ್ತೆ- ಬೊಮ್ಮಸಂದ್ರ (Rv road to Bomasandhra) ನಡುವೆ ಚಾಲಕ ರಹಿತ ರೈಲುಗಳು ಸಂಚರಿಸಲಿದೆ. ದೆಹಲಿ ಮೆಟ್ರೋ ಬಳಿಕ ಈಗ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಈ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುತ್ತಿದೆ.
ಮುಂದಿನ ತಿಂಗಳು ಅಕ್ಟೋಬರ್ ಅಂತ್ಯದೊಳಗೆ ಚೀನಾದಿಂದ 12 ಬೋಗಿಗಳನ್ನು ಒಳಗೊಂಡಿರುವ 2 ರೈಲುಗಳು ನಗರಕ್ಕೆ ಬರುವ ನಿರೀಕ್ಷೆ ಇದೆ. ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಚಾಲಕ ರಹಿತ ಮೆಟ್ರೊ ಬೋಗಿ ಪೂರೈಕೆ ಮಾಡುವ ಟೆಂಡರ್ ಪಡೆದಿದ್ದು, ಒಟ್ಟು 216 ಬೋಗಿಗಳನ್ನು ಪೂರೈಕೆ ಮಾಡಲಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಮಾಹಿತಿ ನೀಡಲಿದ್ದಾರೆ.
ಇದನ್ನೂ ಓದಿ: Namma Metro : ಚಾಲಕನಿಲ್ಲದೆ ಈ ಮಾರ್ಗದಲ್ಲಿ ನಮ್ಮ ಮೆಟ್ರೊ ಓಡಾಟ!; ಪ್ರಾಯೋಗಿಕ ಪರೀಕ್ಷೆ ಹೇಗಿತ್ತು ನೋಡಿ..
ಸಿವಿಲ್ ಕಾಮಗಾರಿ ಪೂರ್ಣ
ಆರ್.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ ಬಹುತೇಕ ಸಿವಿಲ್ ಕಾಮಗಾರಿ ಮುಕ್ತಾಯವಾಗಿದೆ. ರೈಲುಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಈ ಮಾರ್ಗದ ವಾಣಿಜ್ಯ ಸಂಚಾರ ವಿಳಂಬವಾಗುತ್ತಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ, ಈ ವರ್ಷಾಂತ್ಯಕ್ಕೆ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಅಲ್ಲದೆ ಪ್ರಸ್ತುತ ಮೆಟ್ರೋ ರೈಲುಗಳ ಕಾರ್ಯಾಚರಣೆ ವ್ಯವಸ್ಥೆಗಿಂತ ಪೈಲಟ್‌ರಹಿತ ವ್ಯವಸ್ಥೆ ಭಿನ್ನವಾಗಿದ್ದು, ಪರೀಕ್ಷೆ, ಸಿಗ್ನಲಿಂಗ್ ಸೇರಿ ಇತರೆ ಪರೀಕ್ಷೆಗಳಿಗೆ ಸಮಯ ಹಿಡಿಯಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದಲ್ಲಿ 15 ನಿಲ್ದಾಣಗಳು ಬರಲಿದೆ. ಸಾವಿರಾರು ಮಂದಿ ಪ್ರಯಾಣಿಕರು ಶೀಘ್ರ ಕಾರ್ಯಾಚರಣೆಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಳದಿ ಮಾರ್ಗದಲ್ಲಿ ಸಿಬಿಟಿಸಿ ಉಪಕರಣ ಅಳವಡಿಕೆ ಬಳಿಕ ವಿವಿಧ ಹಂತಗಳ ಪರೀಕ್ಷೆಗಳು ನಡೆಯಲಿದ್ದು, ಇದಕ್ಕಾಗಿ ಕನಿಷ್ಠ 10 ತಿಂಗಳು ಸಮಯ ಹಿಡಿಯಲಿದೆ. ಹೀಗಾಗಿ ಆದಷ್ಟು ಬೇಗ ಹಳದಿ ಮಾರ್ಗ ಲೋಕಾರ್ಪಣೆಯಾಗಲಿ ಎಂದು ಮೆಟ್ರೋ ಪ್ರಯಾಣಿಕರು ಆಗ್ರಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ