Site icon Vistara News

Namma Metro : ಜುಲೈ ಅಂತ್ಯಕ್ಕೆ ನಾಗಸಂದ್ರ-ಮಾದಾವರ ಮೆಟ್ರೋ ಕಾಮಗಾರಿ ಪೂರ್ಣ!

Namma Metro green line

ಬೆಂಗಳೂರು: ಹಸಿರು ಮಾರ್ಗದ (Green Line) ನಾಗಸಂದ್ರದಿಂದ ಮಾದಾವರಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಮೆಟ್ರೋ ರೈಲು (Namma Metro) ಜುಲೈ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಕೇವಲ 3.7 ಕಿ.ಮೀ ವಿಸ್ತರಣೆಯ ಮೆಟ್ರೋ ಕಾಮಗಾರಿಯು ಬರೋಬ್ಬರಿ ಐದು ವರ್ಷಗಳ ನಂತರ ತಡವಾಗಿ (Nagasandra To Madavara Metro) ಪೂರ್ಣಗೊಂಡಿದೆ.

ವಿಸ್ತರಣೆಯು ಮೂರು ನಿಲ್ದಾಣಗಳನ್ನು ಒಳಗೊಂಡಿದ್ದು, ನಾಗಸಂದ್ರದಿಂದ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ) ಮತ್ತು ಮಾದಾವರ (ಬಿಐಇಸಿ)ಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಆಗಸ್ಟ್‌ 2019ರಲ್ಲೇ ಕಾಮಗಾರಿ ಪೂರ್ಣ ಮಾಡಲು ಬಿಎಂಆರ್‌ಸಿಎಲ್‌ ಮುಂದಾಗಿತ್ತು. ಆದರೆ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು.

ಇನ್ನೂ ವಿಸ್ತೃತ ಮಾರ್ಗದಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ (BIEC) ಬರುವವರಿಗೆ ಅನುಕೂಲವಾಗಲಿದೆ. ಮಾದವಾರದಿಂದ ಮಾದನಾಯಕನಹಳ್ಳಿ, ಮಾಕಳಿ ಮತ್ತು ನೆರೆಯ ನೆಲಮಂಗಲದ ನಿವಾಸಿಗಳಿಗೆ ಅನುಕೂಲಕವಾಗಲಿದೆ. ಯಾಕೆಂದರೆ ಅಂತಿಮ ನಿಲ್ದಾಣದವಾದ ಮಾದವಾರದ ಮೂಲಕ ಕೇವಲ 6 ಕಿ.ಮೀ ದೂರದಲ್ಲಿದೆ.

ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ಮಾತನಾಡಿ, ಟ್ರ್ಯಾಕ್ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ನಾವು ಟ್ರಯಲ್‌ ಪರೀಕ್ಷೆಯನ್ನು ನಡೆಸುತ್ತೇವೆ. ಜುಲೈ ಅಂತ್ಯದ ವೇಳೆಗೆ ರೈಲು ಕಾರ್ಯಾಚರಣೆಗಳು ಪ್ರಾರಂಭವಾಗಲಿವೆ ಎಂದರು.

ಇನ್ನೂ ವಿಸ್ತರಣೆ ಮಾರ್ಗದ ನಿಲ್ದಾಣಗಳ ಒಳಗೆ ಪೇಂಟಿಂಗ್ ಕೆಲಸ, ಗ್ರಾನೈಟ್ ಕಲ್ಲುಗಳ ಸ್ಥಾಪನೆ ಮತ್ತು ವಿದ್ಯುತ್ ಮತ್ತು ಸಿಗ್ನಲಿಂಗ್ ನಂತಹ ಸಿಸ್ಟಮ್ ಕೆಲಸಗಳು ಸೇರಿದಂತೆ ಕೆಲವು ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ. ಇವೆಲ್ಲವನ್ನೂ ಜೂನ್‌ಗೆ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ. ಪ್ರಾಯೋಗಿಕ ಸಂಚಾರ ಮತ್ತು ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಪಾಸಣೆಯ ನಂತರ, ಜುಲೈ ಅಂತ್ಯದ ವೇಳೆಗೆ ಈ ಮಾರ್ಗವನ್ನು ತೆರೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

ಮಾದಾವರ ಟು ತುಮಕೂರು ಮೆಟ್ರೋ ಮಾರ್ಗ

ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ ಕನಸು ನನಸಾಗುವ ಸಾಧ್ಯತೆ ಹೆಚ್ಚಾಗಿದೆ. ಎರಡು ನಗರಗಳ ನಡುವಿನ ಮೆಟ್ರೋ ಯೋಜನೆ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದ್ದು, 52.41 ಕಿ.ಮೀ. ಮಾರ್ಗದಲ್ಲಿ, 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಮಾದಾವರ (BIEC) ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು- ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿಸಲಿದೆ. ಈ ಸಂಬಂಧ ಬಿಎಂಆರ್‌ಸಿಎಲ್‌ (BMRCL) ಗೆ ಹಲವು ಗುತ್ತಿಗೆದಾರ ಕಂಪನಿಗಳಿಂದ ಕಾರ್ಯ ಸಾಧ್ಯತಾ ವರದಿ ಸಲ್ಲಿಕೆಯಾಗಿದೆ.

ತುಮಕೂರು ಮೆಟ್ರೋ ಯೋಜನೆಯು ಆರ್ಥಿಕ ಅಭಿವೃದ್ಧಿ ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಭರವಸೆಯನ್ನು ಹೊಂದಿದೆ. ಸಮರ್ಥ ಮೆಟ್ರೋ ವ್ಯವಸ್ಥೆಯು ತುಮಕೂರು-ಬೆಂಗಳೂರು ನಡುವೆ ಹೂಡಿಕೆಯನ್ನು ಆಕರ್ಷಿಸಲು, ನಗರದ ವಿವಿಧ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಸುಧಾರಿಸಲು ಮತ್ತು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಹೀಗಾಗಿ ತುಮಕೂರು ರಸ್ತೆಯ ಅಸಂಖ್ಯಾತ ಮಂದಿ ಪ್ರಯಾಣಿಕರು ವಿಸ್ತರಿತ ಮೆಟ್ರೋ ಮಾರ್ಗಕ್ಕಾಗಿ ಬಹುನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ವಿಸ್ತರಿತ ತುಮಕೂರು ಮಾರ್ಗಕ್ಕೆ ಹಲವು ಕಂಪನಿಗಳು ಕಾರ್ಯಸಾಧ್ಯತಾ ವರದಿ ಸಲ್ಲಿಕೆ ಮಾಡಿವೆ. ಈ ವರದಿಯ ಆಧಾರದ ಮೇಲೆ ಬಿಎಂಆರ್‌ಸಿಎಲ್‌ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದು, ಸರ್ಕಾರದ ಮುಂದೂಡಲಿದೆ. ಬಳಿಕ ಸಮಗ್ರ ವರದಿ ಯೋಜನೆಗೂ ಶೀಘ್ರದಲ್ಲೇ ಮೆಟ್ರೋ ಟೆಂಡರ್ ಆಹ್ವಾನ ಮಾಡಲಿದೆ. ಹೀಗಾಗಿ ಸರ್ಕಾರ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version