Site icon Vistara News

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Namma Metro

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ (Namma Metro) ಇಳಿದು ಸ್ಟೇಷನ್‌ನಿಂದ (Metro Station) ಹೊರ ಬಂದ ಕೂಡಲೇ ಆಟೋ ಹಿಡಿಯೋದು ದೊಡ್ಡ ಸಮಸ್ಯೆ. ಯಾಕೆಂದರೆ ಕೆಲ ಚಾಲಕರು ಬರಲ್ಲ ಅನ್ನೋದು, ಕೆಲವರು ಜಾಸ್ತಿ ರೇಟು ಕೇಳೋದು ಮೊದಲಾದ ಸಮಸ್ಯೆಗಳನ್ನು ಮೆಟ್ರೋ ಪ್ರಯಾಣಿಕರು ಅನುಭವಿಸುತ್ತಲೇ ಇರುತ್ತಾರೆ. ಮೆಟ್ರೋ ಫೀಡರ್‌ ಬಸ್‌ಗಳು ಇದ್ದರೂ, ಪ್ರಯಾಣಿಕರು ತಾವು ತಲುಪಬೇಕಾದ ಜಾಗಕ್ಕೆ ಹೋಗಲು ಆಗದೆ ಹೆಚ್ಚು ಹಣ ಕೊಟ್ಟು ಆಟೋದಲ್ಲೇ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಮೆಟ್ರೋ ಮಿತ್ರ ಇದ್ದರೂ ಅದು ಹಲವು ದೋಷದಿಂದ ಸೈಡ್‌ಲೈನ್‌ ಆಗಿದೆ. ಸದ್ಯ ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೆ ಪರಿಹಾರ ಸಿಗಲಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಈಗಾಗಲೇ ಹೆಸರು ಮಾಡಿರುವ ‘ನಮ್ಮ ಯಾತ್ರಿ’ (Namma yatri) ಸಂಸ್ಥೆ ಶೀಘ್ರದಲ್ಲೇ ನಮ್ಮ ಮೆಟ್ರೋ (BMRCL) ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಿದೆ.

ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ ರಿಕ್ಷಾ ಸೇವೆಯನ್ನು ಪ್ರಾರಂಭಿಸಲಿದೆ. ಮೆಟ್ರೋ ರೈಲು ನಿಲ್ದಾಣಗಳಿಗೆ ಕೊನೆಯ ಮೈಲಿ ಸಂಪರ್ಕ ಸೌಲಭ್ಯ ಕಲ್ಪಿಸಲು ನಮ್ಮ ಯಾತ್ರಿಯಿಂದ ಆಟೋರಿಕ್ಷಾ ಸೇವೆಗಳನ್ನು ಒದಗಿಸಲಾಗುತ್ತದೆ. ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ-ರಿಕ್ಷಾ ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಬಿಎಂಆರ್‌ಸಿಎಲ್ ಕೈಜೋಡಿಸಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಸುರಕ್ಷಿತ, ಕೈಗೆಟುಕುವ ಬೆಲೆಯಲ್ಲಿ ಸೇವೆ ನೀಡಲು ಯೋಜನೆ ರೂಪಿಸುತ್ತಿದೆ.

ಮೂವಿಂಗ್ ಟೆಕ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿರುವ ನಮ್ಮ ಯಾತ್ರಿ, ಮೇ ಅಂತ್ಯದ ವೇಳೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಚಿಂತಿಸುತ್ತಿದೆ. ಈ ಸೇವೆಯು ಆಟೋ ರಿಕ್ಷಾ ಚಾಲಕರು ‘ಕ್ಯೂ’ ವ್ಯವಸ್ಥೆಯನ್ನು ಬಳಸಿಕೊಂಡು ಮೆಟ್ರೋ ನಿಲ್ದಾಣಗಳಿಂದ ಸೇವೆ ನೀಡುತ್ತಾರೆ. ಸರದಿಯಲ್ಲಿ ಯಾವುದೇ ಗ್ರಾಹಕರು ಇಲ್ಲದಿದ್ದರೆ, ಚಾಲಕರು ಸಾಮಾನ್ಯ ರೈಡ್ ಕೂಡ ತೆಗೆದುಕೊಳ್ಳಬಹುದು.

ಮೊದಲ ಪ್ರಯೋಗವನ್ನು ಇಂದಿರಾ ನಗರ ಮೆಟ್ರೋ ಸ್ಟೇಷನ್‌ನಲ್ಲಿ ನಡೆಯಲಿದೆ. ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಮತ್ತು ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಬಿಎಂಆರ್‌ಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಯಶಸ್ಸಿನ ಆಧಾರದ ಮೇಲೆ ಈ ಸೌಲಭ್ಯವನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Accident : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

ಕಳೆದ ವರ್ಷ, ಆಟೋ ರಿಕ್ಷಾ ಚಾಲಕರ ಒಕ್ಕೂಟವು ಲಾಸ್ಟ್ ಮೈಲಿ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ಮೆಟ್ರೋ ಮಿತ್ರವನ್ನು ಪ್ರಾರಂಭಿಸಿತು. ಆದರೆ ಸಾಕಷ್ಟು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಿತು. ನಮ್ಮ ಯಾತ್ರಿ ಸೇವೆ ವಿಭಿನ್ನವಾಗಿದ್ದು ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದರು.

ನಿತ್ಯಾ 40 ಲಕ್ಷ ಮಂದಿ ನಮ್ಮ ಮೆಟ್ರೋಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, 134 ಮೆಟ್ರೋ ಫೀಡರ್ ಬಸ್‌ಗಳಲ್ಲಿ 76,000 ಪ್ರಯಾಣಿಕರು ಮಾತ್ರ ಬಳಸುತ್ತಾರೆ. ಸಾಮಾನ್ಯವಾಗಿ ಆಟೋ ರಿಕ್ಷಾ ಚಾಲಕರು ಕಡಿಮೆ ದೂರಕ್ಕೆ ಹೆಚ್ಚಿನ ದರ ವಿಧಿಸುವುದರಿಂದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂದಿನ ಪ್ರಿಪೇಯ್ಡ್ ಆಟೋ ಸೇವೆಗಳು ಹೆಚ್ಚು ಜನಪ್ರಿಯವಾಗದಿರಲು ಇದು ಕೂಡ ಒಂದು ಕಾರಣ. ಹೀಗಾಗಿ ‘ನಮ್ಮ ಯಾತ್ರಿ’ ಜತೆಗೆ ಮೆಟ್ರೋ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version