Site icon Vistara News

Namma Metro : ಬಟ್ಟೆ ಗಲೀಜು ಎಂದು ರೈತನಿಗೆ ಅಪಮಾನ; ಸರ್ಕಾರ, ಬಿಎಂಆರ್‌ಸಿಎಲ್‌ಗೆ ಚಾಟಿ ಬೀಸಿದ ಎನ್‌ಎಚ್‌ಆರ್‌ಸಿ

National Human Rights Commission issues notice to BMRCL state government

ಬೆಂಗಳೂರು: ಹಾಕಿಕೊಂಡಿರುವ ಬಟ್ಟೆ ಕ್ಲೀನ್‌ ಇಲ್ಲ ಎಂಬ ಕಾರಣಕ್ಕೆ ರೈತರೊಬ್ಬರನ್ನು ಮೆಟ್ರೋ (Namma Metro) ಪ್ರವೇಶಿಸಲು (Metro denies entry to Farmer) ಅವಕಾಶ ನೀಡದೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದೀಗ ಬಿಎಂಆರ್‌ಸಿಎಲ್‌ ನಡೆಗೆ ಕಿಡಿಕಾರಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ನೋಟಿಸ್‌ ಜಾರಿ ಮಾಡಿದೆ.

ಫೆ.26ಕ್ಕೆ ರಾಜಾಜಿನಗರದ ಮೆಟ್ರೋ ಸ್ಟೇಷನ್‌ನಲ್ಲಿ ತಲೆ ಮೇಲೆ ಮೂಟೆ ಹೊತ್ತು ಬಂದ ರೈತನೊಬ್ಬನನ್ನು ಒಳಗೆ ಬಿಡದೆ ಅಪಮಾನಿಸಿದ ಘಟನೆಯನ್ನು ಸಹಪ್ರಯಾಣಿಕರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಹೀಗಾಗಿ ಈ ಸಂಬಂಧ ಸ್ವಯಂ ಪ್ರೇರಿತವಾಗಿ ಕೇಸ್‌ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು, ಬಿಎಂಆರ್‌ಸಿಎಲ್‌ ಹಾಗೂ ರಾಜ್ಯ ಸರ್ಕಾರಕ್ಕೂ ನೋಟಿಸ್‌ ಜಾರಿ ಮಾಡಿದೆ. ಸಾರ್ವಜನಿಕ ಸಾರಿಗೆಯಲ್ಲಿ ವ್ಯಕ್ತಿಯೊಬ್ಬರ ಬಟ್ಟೆಯ ಆಧಾರದ ಮೇಲೆ ಪ್ರವೇಶವನ್ನು ನಿರಾಕರಣೆ ಮಾಡುವಂತಿಲ್ಲ. ಈ ರೀತಿಯಾದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಕಾರಣ ಕೇಳಿ ವರದಿ ನೀಡುವಂತೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ಜಾರಿಗೊಳಿಸಿದೆ. ನಾಲ್ಕು ವಾರದಲ್ಲಿ ಘಟನೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ: Kannada signboard rules: ಕರ್ನಾಟಕದಲ್ಲಿ ಕನ್ನಡ ಬೋರ್ಡ್‌ ಕಡ್ಡಾಯ; 2 ವಾರ ಗಡುವು ವಿಸ್ತರಿಸಿದ ಡಿಕೆಶಿ

ಸಿಬ್ಬಂದಿ ಅಮಾನತು

ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಸಿಬ್ಬಂದಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಬಿಎಂಆರ್‌ಸಿಎಲ್‌ (BMRCL) ಮುಜುಗರಕ್ಕೆ ಕಾರಣರಾದ ಸಿಬ್ಬಂದಿ ಅಮಾನತು ಮಾಡಿತ್ತು. ಈ ಬಗ್ಗೆ X ನಲ್ಲಿ ಅಧಿಕೃತ ಮಾಹಿತಿ ನೀಡಿ ವಿಷಾದ ವ್ಯಕ್ತಪಡಿಸಿದ ಬಿಎಂಆರ್‌ಸಿಎಲ್‌ ( BMRCL) ಪ್ರಯಾಣಿಕರಿಗೆ ಉಂಟಾದ ಅನುಕೂಲತೆಗೆ ವಿಷಾದಿಸಿತ್ತು.

ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿತ್ತು. ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ನಮ್ಮ ಮೆಟ್ರೋ ಹೇಳಿತ್ತು.

ಈ ನಡುವೆ, ಮೆಟ್ರೋದಲ್ಲಿ ರೈತನ ತಡೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯ ಸ್ವಾಮಿ, ಈ ರೀತಿಯ ನಡವಳಿಕೆ ತಪ್ಪು, ಆತ ಒಳ್ಳೆಯ ಬಟ್ಟೆಯನ್ನೇ ಹಾಕಿದ್ದಾನೆ. ಬಟ್ಟೆ ಹರಿದು ಹೋಗಿದೆ ಅನ್ನೋದೆಲ್ಲ ನಮ್ಮ ಸಂಸ್ಕಾರ ಅಲ್ಲ. ಅವರವರ ಶಕ್ತಿ ಅನುಸಾರ ಬಟ್ಟೆ ಧರಿಸುತ್ತಾರೆ. ರೈತನನ್ನು ಯಾರೇ ತಡೆದಿದ್ದರೂ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ತಡೆದು ಅಪಮಾನ ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿರುವ ಅವರು ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು.

ಇದನ್ನೂ ಓದಿ: Budget Session : ನಮ್ಮ ಪಾಲು ಕೇಳೋದು ತಪ್ಪಾ, ಮೋದಿ ಸಿಎಂ ಆಗಿದ್ದಾಗ ಕೇಳಿಲ್ವಾ?; ಸಿದ್ದರಾಮಯ್ಯ

ಮೆಟ್ರೋ ನಿಲ್ದಾಣದಲ್ಲಿ ಆಗಿದ್ದೇನು?

ತಲೆಯ ಮೇಲೆ ಬಟ್ಟೆಯ ಮೂಟೆಯೊಂದನ್ನು ಹೊತ್ತುಕೊಂಡು ಬಂದ ವ್ಯಕ್ತಿಯೊಬ್ಬರನ್ನು ಮೆಟ್ರೋ ಸುರಕ್ಷತಾ ತಪಾಸಣೆ ಸಿಬ್ಬಂದಿ ತಡೆದಿದ್ದರು. ಆಗ ಅದನ್ನು ನೋಡಿದ ಸಹಪ್ರಯಾಣಿಕರೊಬ್ಬರು ಅವರನ್ನು ಯಾಕೆ ಒಳಗೆ ಬಿಡುತ್ತಿಲ್ಲ ಎಂದು ಕೇಳಿದ್ದರು. ಆಗ ಸಿಬ್ಬಂದಿ ಅವರ ಬಟ್ಟೆ ಗಲೀಜಾಗಿದೆ, ಹೀಗಿದ್ದರೆ ಸಹ ಪ್ರಯಾಣಿಕರಿಗೆ ಅಸಹ್ಯವಾಗುತ್ತದೆ. ಆ ಕಾರಣಕ್ಕಾಗಿ ಒಳಗೆ ಬಿಡಲಾಗುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ಸಹಪ್ರಯಾಣಿಕರು ಭದ್ರತಾ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಮೆಟ್ರೋ ಪ್ರಯಾಣಿಕರು ಯಾವ ರೀತಿಯ ಬಟ್ಟೆ ಧರಿಸಬೇಕು ಎಂದು ಎಲ್ಲಾದರೂ ನಿಯಮವಿದೆಯಾ ಎಂದು ಕೇಳಿದ ಸಹಪ್ರಯಾಣಿಕರು ರೈತರಿಗೆ ಈ ರೀತಿ ಅಪಮಾನ ಮಾಡಿದ್ದು ಸರಿಯಾ ಎಂದು ಕೇಳಿದ್ದರು.

ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕೆ ಒಳಗೆ ಬಿಡುವುದಿಲ್ಲ ಅಂತೀರಲ್ಲಾ.. ನನ್ನ ಬಟ್ಟೆ ಲಕಲಕ ಹೊಳೆಯುತ್ತಿದೆ. ಹಾಗಿದ್ದರೆ ನನ್ನನ್ನು ಫ್ರೀ ಆಗಿ ಕರೆದುಕೊಂಡು ಹೋಗುತ್ತೀರಾ ಎಂದು ಕೇಳಿದ್ದರು. ಕೊನೆಗೆ ಸಿಬ್ಬಂದಿಯ ಯಾವ ಮಾತಿಗೂ ಕ್ಯಾರೇ ಅನ್ನದೆ ರೈತನನ್ನು ಮೆಟ್ರೋ ರೈಲಿನಲ್ಲಿ ಕರೆದುಕೊಂಡು ಹೋಗಿದ್ದರು.

ಅವರ ಮೂಟೆಯಲ್ಲಿ ಏನಾದರೂ ವಸ್ತುಗಳಿವೆ ಎಂಬ ಕಾರಣಕ್ಕಾಗಿ ಅವರನ್ನು ತಡೆದರೆ ನಾನೇನೂ ಮಾತನಾಡುವುದಿಲ್ಲ. ಆದರೆ, ಒಬ್ಬ ರೈತನ ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕಾಗಿ ಆತನನ್ನು ಅಪಮಾನಿಸಬಾರದು ಎಂದು ಸಹಪ್ರಯಾಣಿಕ ಲೈವ್‌ ವಿಡಿಯೊದಲ್ಲಿ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version