ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಯನ್ನು ನಮ್ಮ ಮೆಟ್ರೋ ಕೈಗೆತ್ತಿಕೊಂಡಿದೆ. ಹೀಗಾಗಿ ಕೆಲವು ದಿನಗಳ ಕಾಲ ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ. ಈ ಮೂಲಕ ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣದ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ
ಸೆಪ್ಟೆಂಬರ್ 11ರವರೆಗೆ ರೈಲು ಓಡಾಟ ಬಂದ್
ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆಗಸ್ಟ್ 20, 23, 30 ರಂದು ಹಾಗೂ ಸೆಪ್ಟೆಂಬರ್ 6 ಮತ್ತು 11ರಂದು ಪೂರ್ಣ ದಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇನ್ನೂ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಆಗಸ್ಟ್ 24 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00 ಗಂಟೆಗೆ ಪ್ರಾರಂಭವಾಗಲಿದೆ. ಇನ್ನೂ 25ರಂದು ಮೊದಲ ರೈಲು ಸೇವೆಯು ಬೆಳಗ್ಗೆ 5ರ ಬದಲಾಗಿ 06.00 ಕ್ಕೆ ಪ್ರಾರಂಭವಾಗಲಿದೆ.
ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ ಆಗಸ್ಟ್ 24 ರಂದು ಕೊನೆಯ ರೈಲು ಸೇವೆಯು ರಾತ್ರಿ 11.12 ಕ್ಕೆ ಪ್ರಾರಂಭವಾಗಲಿದೆ. 25 ರಂದು ಮೊದಲ ರೈಲು ಸೇವೆಯು ಬೆಳಿಗ್ಗೆ 05.00 ಕ್ಕೆ ಪ್ರಾರಂಭವಾಗಲಿದೆ. ಇನ್ನೂ ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇದನ್ನೂ ಓದಿ: Murder case : ಪಿತ್ರಾರ್ಜಿತ ಆಸ್ತಿಗಾಗಿ ತಾರಕಕ್ಕೇರಿದ ಗಲಾಟೆ; ವ್ಯಕ್ತಿಯ ಕೊಲೆಯಲ್ಲಿ ಅಂತ್ಯ
ಮೆಟ್ರೋ ಹಳಿ ಮೇಲೆ ಬಿದ್ದ ವ್ಯಕ್ತಿ; ಹಸಿರು ಮಾರ್ಗದ ರೈಲು ಸಂಚಾರ ಸ್ಥಗಿತ
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಅವಘಡಗಳು (Namma Metro) ಮುಂದುವರಿದಿದೆ. ಆ.19ರ ಮಧ್ಯಾಹ್ನ 1:30ರ ಸುಮಾರಿಗೆ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಬಿದ್ದಿದ್ದಾನೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ವ್ಯಕ್ತಿ ಮೆಟ್ರೋ ಹಳಿ ಮೇಲೆ ಬಿದ್ದ ಪರಿಣಾಮ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು.
ವ್ಯಕ್ತಿ ಹಸಿರು ಮಾರ್ಗದ ಮೆಟ್ರೋ ಹಳಿಯ ಮೇಲೆ ಬಿದ್ದ ಕೂಡಲೆ ಸೆಕ್ಯೂರಿಟಿ ತಕ್ಷಣ ಎಮರ್ಜೆನ್ಸಿ ಬಟನ್ ಉಪಯೋಗಿಸಿದ್ದಾರೆ. ಹಳಿ ಮೇಲೆ ಬಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆಕಸ್ಮಿಕವಾಗಿ ಬಿದ್ದಿದ್ದ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ತಿಳಿದು ಬಂದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ