ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದಲ್ಲಿ (Namma Metro Yellow line) ಟ್ರಯಲ್ ರನ್ ಮುಕ್ತಾಯಗೊಂಡಿದ್ದು, ಸಿಗ್ನಲಿಂಗ್ ಟೆಸ್ಟ್ (Driverless Metro train) ಆರಂಭವಾಗಿದೆ. ರಾಜಧಾನಿಯಲ್ಲಿ ಚಾಲಕರಹಿತ ಮೆಟ್ರೋ ರೈಲು (Driverless Metro train) ಸಂಚಾರಕ್ಕೆ ಸರ್ವ ಸಿದ್ಧತೆಗಳು ನಡೆಯುತ್ತಿವೆ. ಬಿಎಂಆರ್‌ಸಿಎಲ್ ತಂಡವು ಚೀನಾದ ಡ್ರೈವರ್ಲೆಸ್ ಮೆಟ್ರೋ ಮೂಲಕ ಸಿಗ್ನಲಿಂಗ್ ಟೆಸ್ಟ್ ನಡೆಸಿದೆ. ಟ್ರಯಲ್ ಯಶಸ್ವಿಯಾದ ಬೆನ್ನಲ್ಲೇ ಸಿಗ್ನಲಿಂಗ್ ಟೆಸ್ಟ್ ಆರಂಭಿಸಲಾಗಿದೆ. ಹಂತ ಹಂತವಾಗಿ ಸಿಗ್ನಲಿಂಗ್ ಟೆಸ್ಟ್ ನಡೆಯಲಿದ್ದು, ಇದು ಮುಗಿಯುತ್ತಿದ್ದಂತೆ ದೂರಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯಲಿದೆ.
ಈ ಹಳದಿ ಮಾರ್ಗವು ಒಟ್ಟು 16 ಮೆಟ್ರೋ ಸ್ಟೇಷನ್‌ಗಳು ಇದ್ದು, ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸಲಿದೆ. 18.82 ಕಿ.ಮೀ. ಉದ್ದದ ಮೆಟ್ರೋ ಮಾರ್ಗದ ಕಾಮಗಾರಿ 2017ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಎಲ್ಲವೂ ಸರಿ ಇದ್ದರೆ 2023ರ ಜೂನ್‌ನಲ್ಲೇ ರೈಲು ಓಡಬೇಕಾಗಿತ್ತು. ಆದರೆ, ಕೆಲವೊಂದು ಕಾಮಗಾರಿ ವಿಳಂಬದಿಂದ ಮೊದಲು 2023 ಮತ್ತು ಬಳಿಕ 2024ರ ಫೆಬ್ರವರಿಯಲ್ಲಿ ಓಡಾಟ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಅದು 2024ರ ಜುಲೈನಲ್ಲಿ ಟ್ರಯಲ್ ರನ್ ಮುಕ್ತಾಯವಾಗಿದ್ದು, ಸಿಗ್ನಲಿಂಗ್ ಟೆಸ್ಟ್ ಆರಂಭವಾಗಿದೆ.
ಸದ್ಯ ಎಲ್ಲಾ ರೀತಿಯ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಪರೀಕ್ಷೆ ನಡೆಸಿ ವರದಿ ಸಲ್ಲಿಸಲಾಗುತ್ತದೆ. ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳ ಪರಿಶೀಲನೆ ನಂತರ ಚಾಲಕ ರಹಿತ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತವೆ.
ಎಲ್ಲಿಂದ ಎಲ್ಲಿವರೆಗೆ ಹಳದಿ ಮಾರ್ಗ?
ಹಳದಿ ಲೈನ್ ಮೆಟ್ರೋ ಆರಂಭವಾಗುವುದು ಈಗ ಹಸಿರು ಮಾರ್ಗದಲ್ಲಿರುವ ರಾಷ್ಟ್ರೀಯ ವಿದ್ಯಾಲಯ ರಸ್ತೆ ಸ್ಟೇಷನ್‌ನಿಂದ. ರಾಷ್ಟ್ರೀಯ ವಿದ್ಯಾಲಯ ಸ್ಟೇಷನ್‌ನಿಂದ ರಾಗಿಗುಡ್ಡ, ಜಯದೇವ ಆಸ್ಪತ್ರೆ ಬಿ ಟಿ ಎಂ ಬಡಾವಣೆ, ಕೇಂದ್ರ ರೇಷ್ಮೆ ಮಂಡಳಿ, ಬೊಮ್ಮನಹಳ್ಳಿ (ರೂಪೇನ ಅಗ್ರಹಾರ), ಹೊಂಗಸಂದ್ರ (ಗಾರ್ವೇಬಾವಿ ಪಲ್ಯ), ಕೂಡ್ಲು ದ್ವಾರ, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ರಸ್ತೆ (ವೀರಸಂದ್ರ), ಹೆಬ್ಬಗೋಡಿ, ಬೊಮ್ಮಸಂದ್ರ ಹೀಗೆ 14 ಸ್ಟೇಷನ್‌ಗಳು ಈ ಮಾರ್ಗದಲ್ಲಿವೆ.