Site icon Vistara News

Narahalli Award: ಬಸವನಗುಡಿಯಲ್ಲಿ ಅ.8ರಂದು ನರಹಳ್ಳಿ ಪ್ರಶಸ್ತಿ, ನರಹಳ್ಳಿ ದಶಮಾನ ಪುರಸ್ಕಾರ ಪ್ರದಾನ

Dr narahalli balasubramanya

ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರ ಮತ್ತು ಡಾ. ನರಹಳ್ಳಿ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್‌ 8ರಂದು ಬೆಳಗ್ಗೆ 10.30ಕ್ಕೆ ʼನರಹಳ್ಳಿ ಪ್ರಶಸ್ತಿ ಹಾಗೂ ನರಹಳ್ಳಿ ದಶಮಾನ ಪುರಸ್ಕಾರ’ ಪ್ರದಾನ ಕಾರ್ಯಕ್ರಮವನ್ನು (Narahalli Award) ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜಿನ ಡಾ.ಎಚ್.ಎನ್‌. ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಹಿರಿಯ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಬಂದ ಪ್ರಶಸ್ತಿ ಮತ್ತು ಗೌರವಗಳ ಮೊತ್ತದಿಂದ ಹುಟ್ಟಿಕೊಂಡ ಸಂಸ್ಥೆ ಡಾ. ನರಹಳ್ಳಿ ಪ್ರತಿಷ್ಠಾನವಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಪ್ರತಿವರ್ಷ ಒಬ್ಬ ಪ್ರತಿಭಾನ್ವಿತ ಬರಹಗಾರರನ್ನು ಗುರುತಿಸಿ ನರಹಳ್ಳಿ ಪ್ರಶಸ್ತಿಯನ್ನು ನೀಡಿ ಪ್ರತಿಷ್ಠಾನವು ಗೌರವಿಸುತ್ತಿದೆ. ಪ್ರಶಸ್ತಿಯು 15 ಸಾವಿರ ರೂಪಾಯಿ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಈಗಾಗಲೇ ನಾಡಿನ ಒಂಬತ್ತು ಮಂದಿ ಖ್ಯಾತರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇದನ್ನೂ ಓದಿ | Nobel Peace Prize: 20ನೇ ಶತಮಾನದ ಮೇರು ನಾಯಕ ‘ಮಹಾತ್ಮ ಗಾಂಧಿ’ಗೇಕೆ ಸಿಗಲಿಲ್ಲ ನೊಬೆಲ್ ಪ್ರಶಸ್ತಿ?

2023ನೇ ಸಾಲಿನ ನರಹಳ್ಳಿ ಪ್ರಶಸ್ತಿಗೆ ಖ್ಯಾತ ಬರಹಗಾರರಾದ ಚ.ಹ. ರಘುನಾಥ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿಷ್ಠಾನವು ದಶಮಾನದ ಸಂದರ್ಭದಲ್ಲಿ ವಿಶೇಷವಾದ “ನರಹಳ್ಳಿ ದಶಮಾನ ಪುರಸ್ಕಾರ”ವನ್ನು ಹೊಸ ತಲೆಮಾರಿನ ಬರಹಗಾರರನ್ನು ರೂಪಿಸುತ್ತಿರುವ ನುಡಿ ರೂವಾರಿಗಳಿಗೆ ನೀಡಲಿದ್ದು, ಈ ಪುರಸ್ಕಾರಕ್ಕೆ ಖ್ಯಾತ ಸಾಹಿತಿ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರು ಆಯ್ಕೆಯಾಗಿದ್ದಾರೆ. ಇದು ಕೂಡ 15 ಸಾವಿರ ರೂ. ನಗದು ಹಾಗೂ ಫಲಕವನ್ನೊಳಗೊಂಡಿದೆ.

ಚ.ಹ. ರಘುನಾಥ (ನರಹಳ್ಳಿ ಪ್ರಶಸ್ತಿ)

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹರಳಪುರದವರಾದ ಚ.ಹ. ರಘುನಾಥ್‌ ಅವರು ಜನಿಸಿದ್ದು, 1974ರ ನವೆಂಬರ್ 1 ರಂದು. ಇವರು ಪ್ರತಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗು ಮಳೆ ಒಳಗು ಮಳೆ (ಕತೆಗಳು), ರಾಗಿ ಮುದ್ದೆ (ಪ್ರಬಂಧ ಸಂಕಲನ) ಚೆಲ್ಲಾ ಪಿಲ್ಲಿ (ಲೇಖನಗಳು), ವ್ಯಂಗ್ಯ ಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್‌, ಡಾ. ದೇವಿ ಶೆಟ್ಟಿ, ಬಿಲ್‌ಗೇಟ್ಸ್, ಅಣ್ಣ ಹಜಾರೆ (ಜೀವನ ಚಿತ್ರಗಳು), ಸತಿ ಸುಲೋಚನಾ, ಚಂದನವನದ ಚಿನ್ನದ ಹೂಗಳು, ಬೆಳ್ಳಿ ತೊರೆ, ಪುಟ್ಟ ಲಕ್ಷ್ಮಿಯ ಕತೆಗಳು (ಮಕ್ಕಳ ಕತೆಗಳು), ಅಂಕಣ ವ್ಯಾಯೋಗ ಇವರ ಪ್ರಮುಖ ಕೃತಿಗಳು. ರಘುನಾಥ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ದತ್ತಿ ನಿಧಿ ಬಹುಮಾನ ಹಾಗೂ ಚಿನ್ನದ ಪದಕ, ಕಥಾ ರಂಗ ಪ್ರಶಸ್ತಿ, ಭೂಪಾಲಂ ದತ್ತಿ ನಿಧಿ ಬಹುಮಾನ, ವರ್ಧಮಾನ ಪ್ರಶಸ್ತಿ ಅನೇಕ ಪುಸ್ತಕ ಬಹುಮಾನಗಳು ಬಂದಿವೆ. 2019ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವು ʼಬೆಳ್ಳಿ ತೊರೆʼ ಕೃತಿಗೆ ಬಂದಿದೆ. ಇದೀಗ ನರಹಳ್ಳಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ | Raja Marga Column : ಇನ್ನು 46 ದಿನ ಕ್ರಿಕೆಟ್‌ ಕುಂಭ ಮೇಳ; ಭಾರತವೇ ಯಾಕೆ ಗೆಲ್ಲಬೇಕು?

ಜೋಗಿ (ನರಹಳ್ಳಿ ದಶಮಾನ ಪುರಸ್ಕಾರ)

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಗಿರೀಶ್‌ರಾವ್‌ ಹತ್ವಾರ್‌ ಅವರಿಗೆ ಜೋಗಿ, ಜಾನಕಿ, ಸತ್ಯವ್ರತ ಮುಂತಾದ ಅಂಕಿತ ನಾಮಗಳಿವೆ. ಇವರು ಜನಿಸಿದ್ದು 1965ರ ನವೆಂಬರ್ 16 ರಂದು. “ಹಾಯ್ ಬೆಂಗಳೂರು” ವಾರ ಪತ್ರಿಕೆಯಲ್ಲಿ ರವಿ ಕಾಣದ್ದು, ಜಾನಕಿ ಕಾಲಂ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಿತರಾದ ಜೋಗಿಯವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜತೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು, ನದಿಯ ನೆನಪಿನ ಹಂಗು, ಯಾಮಿನಿ, ಜೋಗಿ ಮನೆ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಯಾಕಿನ್ನರಿ, ಗುರುವಾಯನ ಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ಸೀಳು ನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ಕಥಾಸಮಯ, ಆಸ್ಕ್‌ ಮಿಸ್ಟರ್, ನೋಟ್ ಬುಕ್, ಅಶ್ವತ್ಥಾಮನ್, ಹಸ್ತಿನಾವತಿ ಮುಂತಾದ 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ವಡ್ಡರ್ಸೆ ರಘುರಾಮಶೆಟ್ಟ ಪತ್ರಿಕೋದ್ಯಮ ಪ್ರಶಸ್ತಿ, ಸಾಹಿತ್ಯ ರತ್ನ, ಸಾಹಿತ್ಯ ಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ಇದೀಗ ನರಹಳ್ಳಿ ದಶಮಾನ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

Exit mobile version