Site icon Vistara News

Nice Road Accident: ಐಕಿಯಾಗೆ ಶಾಪಿಂಗ್‌ ಹೋಗಿ ಬರುತ್ತಿದ್ದವರನ್ನು ನೀರಿನ ಬಾಟಲಿ ರೂಪದಲ್ಲಿ ಕಾಡಿತು ಸಾವು!

nice road accident

ಬೆಂಗಳೂರು: ನೈಸ್‌ ರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತ (Nice Road Accident) ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದೆ. ಅಪಘಾತ ಸಂಭವಿಸಿದಾಗ ಕಾರಿನಲ್ಲೇ ತಾಯಿ ಹಾಗೂ ಒಂದು ಮಗು ಸಜೀವ ದಹನಗೊಂಡಿದ್ದರು (Burnt alive). ಆಸ್ಪತ್ರೆಯಲ್ಲಿ ಇನ್ನೊಂದು ಮಗು ಸಾವಿಗೀಡಾಗಿದೆ.

ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು- ದಂಪತಿ ಹಾಗೂ ಇಬ್ಬರು ಮಕ್ಕಳು- ಪ್ರಯಾಣ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೂಲತಃ ತಮಿಳುನಾಡಿನ ಸೇಲಂ ಮೂಲದ ಮಹೇಂದ್ರನ್- ಸಿಂಧು ಕುಟುಂಬ ರಾಮಮೂರ್ತಿ ನಗರದ ವಿಜಿನಾಪುರ ನಿವಾಸಿಗಳಾಗಿದ್ದರು.

nice road accident

ನಿನ್ನೆ ರಜೆ ಇದ್ದಿದ್ದರಿಂದ ಟಾಟಾ ನೆಕ್ಸಾನ್ ಕಾರನ್ನು ಅನ್ಲೈನ್‌ನಲ್ಲಿ ಬಾಡಿಗೆ ಪಡೆದಿದ್ದ ಕುಟುಂಬ ಸೆಲ್ಫ್ ಡ್ರೈವ್ ಮಾಡಿಕೊಂಡು ರಾತ್ರಿ ನಾಗಸಂದ್ರದ ಐಕಿಯಾ ಮಾಲ್‌ಗೆ ಶಾಪಿಂಗ್‌ಗಾಗಿ ಹೋಗಿದ್ದರು. ಬಳಿಕ ಹಾಗೇ ಕಾರಿನಲ್ಲಿ ಸುತ್ತಾಡಿಕೊಂಡು ತಡರಾತ್ರಿ ನೈಸ್ ರೋಡಿಗೆ ಇಳಿದು ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತ್ತಿದ್ದರು.

nice road accident

ದುರದೃಷ್ಟವಶಾತ್‌ ಈ ಕುಟುಂಬಕ್ಕೆ ನೀರಿನ ಬಾಟಲಿಯ ರೂಪದಲ್ಲಿ ಸಾವು ಎದುರಾಗಿದೆ. ಕಾರಿನ ಫ್ಲೋರ್‌ನಲ್ಲಿ ಉರುಳಾಡುತ್ತಿದ್ದ ವಾಟರ್ ಬಾಟೆಲ್ ಕಾಲಿನ ಕೆಳಗೆ ಬಂದಿದೆ. ಸೋಮಪುರ ಬಳಿ ನೀರಿನ ಬಾಟಲ್ ತೆಗೆದುಕೊಳ್ಳಲು ಡ್ರೈವ್‌ ಮಾಡುತ್ತಿದ್ದ ಮಹೇಂದ್ರನ್ ಕೆಳಗೆ ಬಾಗಿದ್ದರು. ಕೆಳಗೆ ಬಗ್ಗಿ ಬಾಟಲಿ ತೆಗೆಯುವ ಯತ್ನದಲ್ಲಿದ್ದಾಗ ಕಾರು ಅಪಘಾತಕ್ಕೊಳಗಾಗಿದೆ.

ರಸ್ತೆಯ ಬಲಗಡೆಗೆ ಕಾರು ಹೋಗಿದ್ದು, ಸುಟ್ಟುಹೋಗಿದೆ. ಎಡಗಡೆಯಲ್ಲಿ ಒಂದು ಲಾರಿ ಪಲ್ಟಿಯಾಗಿದ್ದು, ಇದಕ್ಕೂ ಕಾರು ಅಪಘಾತಕ್ಕೂ ಸಂಬಂಧವಿದೆಯೇ ಎಂಬುದು ತನಿಖೆಯಾಗುತ್ತಿದೆ.

nice road accident

ಮೇಲ್ನೋಟಕ್ಕೆ ನಿಯಂತ್ರಣ ತಪ್ಪಿ ಅಪಘಾತ ಆಗಿದೆ ಅನಿಸುತ್ತಿದೆ. ಲಾರಿಗೆ ಡಿಕ್ಕಿಯಾದಾಗ ಕಾರಿನ ಡೀಸೆಲ್ ಟ್ಯಾಂಕ್ ಲೀಕ್ ಆಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ತಾಯಿ ಹಾಗೂ ಇಬ್ಬರು ಮೃತರಾಗಿದ್ದಾರೆ. ಎಫ್.ಎಸ್.ಎಲ್ ಸಿಬ್ಬಂದಿ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಘಟನೆಯಲ್ಲಿ ಮಹೇಂದ್ರನ್ ಕಾಲು ಸುಟ್ಟು ಹೋಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಅವರ ಬ್ಲಡ್ ಸ್ಯಾಂಪಲ್ ಪಡೆದಿದ್ದೇವೆ ಎಂದು ಘಟನಾಸ್ಥಳಕ್ಕೆ ಭೇಟಿ ನೀಡಿರುವ ದಕ್ಷಿಣ ವಿಭಾಗ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ. ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ನೈಸ್‌ ರಸ್ತೆಯಲ್ಲಿ ಭೀಕರ ಅಪಘಾತ, ತಾಯಿ- ಮಗು ಸಜೀವ ದಹನ

Exit mobile version