ಬೆಂಗಳೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಲಾಭರಹಿತ ಸ್ವಯಂಸೇವಾ ಸಂಸ್ಥೆ ʼಒಸಾಟ್ʼ (OSAAT) ವತಿಯಿಂದ, ಸಂಸ್ಥೆಯ 19 ವರ್ಷಗಳ ಪ್ರಯಾಣದಲ್ಲಿ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಲು ನವೆಂಬರ್ 25ರಂದು ನಗರದಲ್ಲಿ ʼಸಾಧನೆ-2023ʼ (SAADHANE-2023) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ವಿಶ್ವೇಶ್ವರಪುರದ ಕೃಷ್ಣರಾಜ ರಸ್ತೆಯ ಕಿಮ್ಸ್ ಆಸ್ಪತ್ರೆ ಮತ್ತು ಬಿಐಟಿ ಕ್ಯಾಂಪಸ್ ಹಿಂಭಾಗದ ಕುವೆಂಪು ಕಲಾಕ್ಷೇತ್ರದಲ್ಲಿ ನ.25ರಂದು ಸಂಜೆ 4 ರಿಂದ 7 ಗಂಟೆವರೆಗೆ ‘ಸಾಧನೆ-2023ʼ ನಡೆಯಲಿದೆ. ಸಂಜೆ 4 ಗಂಟೆಗೆ ಶಾಲಾ ಮಕ್ಕಳೊಂದಿಗೆ ಪ್ರದರ್ಶನ ಸಂವಾದ, ಸಂಜೆ 5 ರಿಂದ 7ರವರೆಗೆ ವೇದಿಕೆ ಕಾರ್ಯಕ್ರಮ, 7 ಗಂಟೆ ಭೋಜನ ವ್ಯವಸ್ಥೆ ಇರಲಿದೆ.
ಮುಖ್ಯ ಅತಿಥಿಗಳಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಇನ್ವೆಸ್ಟ್ ಇಂಡಿಯಾ – ಎಫ್‌ಡಿಐ ಟ್ರೇಡ್‌ನ ಎಂಡಿ ಮತ್ತು ಸಿಇಒ ನಿವೃತಿ ರೈ, ಮೈಸೂರಿನ ಎಕ್ಸೆಲ್‌ಸಾಫ್ಟ್ ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಸುಧನ್ವ ಧನಂಜಯ ಹಾಗೂ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್‌ನ ಚಿಂತಕ, ಪ್ರೇರಕ ಭಾಷಣಕಾರ ಡಾ. ಗುರುರಾಜ ಕರಜಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | ಡಿ. 2ರಂದು ರಾಜ್ಯೋತ್ಸವ ಸುವರ್ಣ ಸಂಭ್ರಮ, ಕಲಾ ದರ್ಪಣ ಪ್ರಶಸ್ತಿ ಪ್ರದಾನ, ಚಿತ್ರಕಲಾ ಸ್ಪರ್ಧೆ
ಅಮೆರಿಕದ ಸಿಲಿಕಾನ್ ವ್ಯಾಲಿ ಕ್ವಾಡ್‌ನ (SVQ) ಒಸಾಟ್ ಆಡಳಿತ ಮಂಡಳಿ ಚೇರ್ಮನ್, ಫೌಂಡಿಂಗ್ ಮ್ಯಾನೇಜಿಂಗ್ ಪಾರ್ಟ್ನರ್ ಬಿ.ವಿ. ಜಗದೀಶ್, ಒಸಾಟ್ ಅಮೆರಿಕದ ಅಧ್ಯಕ್ಷ, ಸಿಸ್ಕೊ ನೆಟ್‌ವರ್ಕಿಂಗ್‌ನ ಸೀನಿಯರ್ ಡೈರೆಕ್ಟರ್ (ಎಂಜಿನಿಯರಿಂಗ್), ಮಂಡಳಿಯ ಸದಸ್ಯ ಮತ್ತು ಮಾರ್ಗದರ್ಶಕ ಪದ್ದು ಮೇಲನಹಳ್ಳಿ, ಟ್ರಸ್ಟಿಗಳಾದ ಅಶೋಕ್ ಕುಮಾರ್, ಸತೀಶ್ ಹೆಡ್ಡೆಸೆ, ವಾದಿರಾಜ ಭಟ್ ಉಪಸ್ಥಿತರಿರಲಿದ್ದಾರೆ.
ಈ ಸಂಭ್ರಮದ ಕ್ಷಣದಲ್ಲಿ ಸಂಸ್ಥೆಯ ಸ್ವಯಂಸೇವಕರು, ದಾನಿಗಳು, ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗಿಯಾಗಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ