Site icon Vistara News

Parahitam Foundation: ಸ್ವಚ್ಛ ಬೆಂಗಳೂರಿಗೆ ಪರಹಿತಮ್ ಸೇವೆ

Parahitam Foundation

ಬೆಂಗಳೂರು: ಪರಹಿತಮ್ ಫೌಂಡೇಷನ್ (ಎನ್.ಜಿ.ಒ) ವತಿಯಿಂದ ಬಿಬಿಎಂಪಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಭಾನುವಾರ ನಗರದ ಬಿಸಿಸಿ ಬಡಾವಣೆ ಬಸ್ ನಿಲ್ದಾಣದ ಬಳಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ನಿತ್ಯ ಕಸ ಹಾಕುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ವಾಲ್ ಪೇಂಟಿಂಗ್ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಇಂತಹದೊಂದು ಸಮಾಜಮುಖಿ ಕೆಲಸದ ಮೂಲಕ ಹೊಸ ವರ್ಷಾರಂಭವನ್ನು ಸಾರ್ಥಕ ರೀತಿಯಲ್ಲಿ ಪರಹಿತಮ್ ಸದಸ್ಯರು ಆಚರಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಗೋಡೆಯ ಎದುರು ಕೆಲವು ಸ್ಥಳೀಯರು ಕಸವನ್ನು, ಪ್ರಾಣಿ ಮಾಂಸ ತ್ಯಾಜ್ಯವನ್ನು ಹಾಕುತ್ತಿದ್ದು, ಈ ಬಗ್ಗೆ ಸ್ಥಳೀಯರು ಬಿಬಿಎಂಪಿಗೆ ದೂರು ನೀಡಿದ್ದರು. ಸಮಸ್ಯೆಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ಸಂದೀಪ್ ಮತ್ತು ತಂಡದ ಜತೆಗೆ ಪರಹಿತಮ್ ಕೈ ಜೋಡಿಸಿತು. ಆ ಜಾಗವನ್ನು ತ್ಯಾಜ್ಯಮುಕ್ತವಾಗಿಸಲು ಪರಹಿತಮ್ ಫೌಂಡೇಷನ್ ಸಂಸ್ಥೆಯು ಗೋಡೆಯನ್ನು ದುರಸ್ತಿಗೊಳಿಸಿ ಅದನ್ನು ಬಣ್ಣಗಳಿಂದ, ಚಿತ್ರಗಳಿಂದ ಸಿಂಗರಿಸಿತು. ಸುಮಾರು 15 ಜನರ ಸಮಾನ ಮನಸ್ಕರ ಯುವಕರ ತಂಡ ಸೇರಿ ಈ ಕಾರ್ಯ ಮಾಡಿತು. ಪರಹಿತಮ್ ಸಂಸ್ಥಾಪಕ ಪ್ರಮೋದ ಹೆಗಡೆ, ಸಹಸಂಸ್ಥಾಪಕ ಗಣೇಶ ಹೆಗಡೆ ಜತೆಗೆ ಅನರ್ಘ್ಯ, ಆದರ್ಶ, ಅಖಿಲೇಶ್, ನಿಧಿಶ್ರೀ, ಭಕ್ತಿ, ಈಶಾನೀ, ವಸುಂಧರಾ, ಲೋಹಿತ್, ಗ್ರೀಶ್ಮಾಂಗ್, ದ್ಯುತಿ, ಸುಪ್ರಿಯಾ, ಸುನೀತಾ ಹಾಗೂ ಕೆಲವು ಸ್ಥಳೀಯರು, ಬಿ.ಬಿ.ಎಂ.ಪಿ ಅಧಿಕಾರಿಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು

ಇದನ್ನೂ ಓದಿ | Monkey Love : ಮಕ್ಕಳ ಜತೆ ಆಟ, ಹಿರಿಯರ ಜತೆ ಪ್ರೀತಿ; ಮೊಬೈಲ್‌ ನೋಡುತ್ತೆ ಈ ಕೋತಿ! ವಿಡಿಯೊ ಇದೆ!

ಗಾರ್ಬೇಜ್ ಪಾಯಿಂಟ್‌ನಿಂದ ನಿವಾಸಿಗಳಿಗೆ ತುಂಬಾ ಸಮಸ್ಯೆಯಿತ್ತು. ಇಲ್ಲಿ ಪ್ರಾಣಿ ಮಾಂಸ ತ್ಯಾಜ್ಯಗಳನ್ನು ಪಕ್ಕದ ಪ್ರದೇಶದಿಂದಲೂ ತಂದು ಹಾಕುತ್ತಿದ್ದರು. ಅದರಿಂದ ಉಂಟಾದ ದುರ್ಗಂಧದಿಂದ ಇಲ್ಲಿನ ನಿವಾಸಿಗಳಿಗೆ ಉಸಿರಾಡಲು ತೊಂದರೆಯಾಗಿತ್ತಿತ್ತು. ಕಳೆದ 2-3 ವರ್ಷದಿಂದ ಸತತ ಹೋರಾಟ ಮಾಡಿದ್ದೇವೆ. ಬಿ.ಬಿ.ಎಂ.ಪಿ ಸಹಯೋಗದಿಂದ ಈಗ ಸ್ವಚ್ಛವಾಗುತ್ತಿದೆ. ಜೊತೆಗೆ ಪರಹಿತಮ್ ಫೌಂಡೇಷನ್ ಸಂಸ್ಥೆಯು ಇಲ್ಲಿ ಪೇಂಟ್ ಮಾಡುತ್ತಿರುವುದು ತುಂಬಾ ಸಹಕಾರಿ. ಹೀಗೆ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಶುದ್ಧ ಗಾಳಿಯನ್ನು ಉಸಿರಾಡಬಹುದು, ನೆಮ್ಮದಿಯಿಂದಿರಬಹುದು.
| ಚೇತನ್, ಸ್ಥಳೀಯ

ಇಲ್ಲಿ ತುಂಬಾ ಕಸ ಬೀಳುತ್ತಿತ್ತು. ಪರಹಿತಮ್ ಫೌಂಡೇಷನ್ ಇಂದ ತುಂಬಾ ಸಹಕಾರ ಆಗಿದೆ. ಬಿ.ಬಿ.ಎಂ.ಪಿ ಪರವಾಗಿ ಅವರಿಗೆ ಧನ್ಯವಾದ ಹೇಳಿತ್ತಿದ್ದೇನೆ.
| ಮುತ್ತು, ಗಾರ್ಬೇಜ್ ಉಸ್ತುವಾರಿ

ಪರಹಿತಮ್ ಬಗ್ಗೆ

ಪರಹಿತಮ್ ಫೌಂಡೇಷನ್ ಒಂದು ಸಮಾನ ಮನಸ್ಕರ ಯುವಕರ ತಂಡ. ಕಳೆದ ಎರಡು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅನಾಥಾಶ್ರಮದಲ್ಲಿ ಮಕ್ಕಳಿಗೆ ಪಾಠ ಮಾಡುವುದು, ಮರಗಳಿಗೆ ಹೊಡೆದ ಮೊಳೆಗಳನ್ನು ತೆಗೆಯುವುದು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಜಾಗೃತಿ ಮೂಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ 13 ವಾರಗಳಿಂದ ಪ್ರತಿ ಭಾನುವಾರ ಅಗತ್ಯ ಇರುವ 50 ಜನರಿಗೆ ಊಟವನ್ನು ನೀಡಲಾಗುತ್ತಿದೆ.

Exit mobile version