Site icon Vistara News

Pitbull Dog: ಅಪಾರ್ಟ್‌ಮೆಂಟ್‌ನಲ್ಲಿ ಅಪಾಯಕಾರಿ ನಾಯಿ! ಪೊಲೀಸ್‌ ಠಾಣೆ ಮೆಟ್ಟಿಲೇರಿದ ಜಗಳ

pitbull dog jp nagar

ಬೆಂಗಳೂರು: ಅಪಾರ್ಟ್‌ಮೆಂಟ್‌ನೊಳಗೆ ಅಪಾಯಕಾರಿ ನಾಯಿ (pitbull dog) ಸಾಕಿ, ನಿವಾಸಿಗಳಿಗೆ ಭಯ ಆತಂಕ ಸೃಷ್ಟಿಸಿರುವ ವಿಚಾರ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಸದ್ಯ ʼಡೇಂಜರಸ್ ಡಾಗ್ʼ ಸಂಬಂಧ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ. ದಂಪತಿ ಸಾಕುತ್ತಿದ್ದ ಅಪಾಯಕಾರಿ ʼಪಿಟ್‌ಬುಲ್‌ʼ ಜಾತಿಯ ನಾಯಿಯ ಕುರಿತು ಕಿರಿಕ್‌ ಶುರುವಾಗಿತ್ತು.

ಜೆ.ಪಿ ನಗರದ ಎಸ್‌ಕೆಎನ್ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿರುವ ರೂಪಶ್ರೀ ಹಾಗೂ ನಾಗೇಶ್ ಎಂಬವರು ಪಿಟ್‌ಬುಲ್ ನಾಯಿ ಸಾಕಿದ್ದಾರೆ. ಈ ನಾಯಿಯನ್ನು ಸರಿಯಾಗಿ ಪಳಗಿಸದ ಕಾರಣ ಅದು ಇತರ ಜನರನ್ನು ಕಂಡಾಗ ಅವರ ಮೈಮೇಲೆ ಎಗರಿ ಬರುತ್ತಿತ್ತು. ಈ ಬಗ್ಗೆ ಅಪಾರ್ಟ್ಮೆಂಟ್ ನಿವಾಸಿಗಳು ದಂಪತಿಗೆ ಹೇಳಿ ನೋಡಿದ್ದು, ಅದನ್ನು ದಂಪತಿಗಳು ಕ್ಯಾರೇ ಮಾಡಿರಲಿಲ್ಲ. ಹೀಗಾಗಿ, ನಾಯಿಯನ್ನು ಹೊರಗಡೆ ಬಿಡಬಾರದೆಂದು ಅಪಾರ್ಟ್ಮೆಂಟ್ ಅಸೋಸಿಯೇಷನ್ ಷರತ್ತು ಹಾಕಿತ್ತು.

ಆದರೆ ನಿನ್ನೆ ದಂಪತಿಗಳ ಮಗ ಯುವನ್ ಎಂಬಾತ ಲಿಫ್ಟ್‌ನನಲ್ಲಿ ನಾಯಿಯನ್ನು ಕರೆ ತಂದಿದ್ದ. ಆಗಲೂ ನಾಯಿ ಸಂತೋಷ್ ಎಂಬವರ ಮೇಲೆ ಎಗರಿ ಬಿದ್ದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ವಿವಾದ ಉಂಟಾಗಿದೆ. ಲಿಫ್ಟ್‌ನಲ್ಲಿ ಶುರುವಾದ ಜಗಳಕ್ಕೆ ಯುವನ್ ಪೋಷಕರು ಸಾಥ್ ನೀಡಿದ್ದರು. ಈ ವೇಳೆ ಸಂತೋಷ್ ಹಾಗು ಆತನ ಸ್ನೇಹಿತನ ಮೇಲೆ ಇವರು ವಿಕೆಟ್, ಹೂಕುಂಡಗಳಿಂದ ಹಲ್ಲೆ ನಡೆಸಿದ್ದಾರೆ. ಸದ್ಯ ಈ ಕುರಿತು ಎರಡೂ ಕಡೆಯವರೂ ಪೊಲೀಸ್ ಠಾಣೆಗೆ ಆಗಮಿಸಿ ಪರಸ್ಪರ ದೂರು ದಾಖಲಿಸಿದ್ದಾರೆ.

ಅಮೇರಿಕನ್ ಬುಲ್ಲಿ ಎಂದೂ ಕರೆಯಲ್ಪಡುವ ಈ ಪಿಟ್‌ಬುಲ್‌, ಅಪಾಯಕಾರ ನಾಯಿ ತಳಿಗಳಲ್ಲಿ ಒಂದು. ಆಸ್ಟ್ರೇಲಿಯಾ, ಫ್ರಾನ್ಸ್, ಕೆನಡಾ, ಡೆನ್ಮಾರ್ಕ್ ಸೇರಿದಂತೆ ಹಲವು ದೇಶಗಳಲ್ಲಿ ಇದನ್ನು ಸಾಕುವುದು ನಿಷೇಧಿಸಲಾಗಿದೆ. ಆಕ್ರಮಣ ಮಾಡಿದರೆ ಮನುಷ್ಯನನ್ನೇ ಮುಗಿಸಿಬಿಡುವಷ್ಟು ಆಕ್ರಮಣಕಾರಿ ಸ್ವಭಾವವನ್ನು ಈ ಪಿಟ್‌ಬುಲ್‌ ಹೊಂದಿದೆ. ಯಲಹಂಕದಲ್ಲಿ ಪಿಟ್‌ಬುಲ್ ತಳಿಯ ನಾಯಿ ಮಹಿಳೆಯೊಬ್ಬರ ಕುತ್ತಿಗೆ ಕಚ್ಚಿ ಕೊಂದು ಹಾಕಿತ್ತು.

ಇದನ್ನೂ ಓದಿ: Dog bite | ಬೆಳಗಾವಿಯಲ್ಲಿ 6 ತಿಂಗಳಲ್ಲಿ 14 ಸಾವಿರ ನಾಯಿ ಕಡಿತ ಪ್ರಕರಣ!

Exit mobile version