ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಗುಂಡಿ (Pothole) ಗಂಡಾಂತರ ನಿಲ್ಲುವಂತೆ ಕಾಣುತ್ತಿಲ್ಲ. ನಗರದಲ್ಲಿ ಸುರಿಯುವ ಒಂದು ಗಂಟೆ ಮಳೆಯೂ ಬೆಂಗಳೂರಿನ ರಸ್ತೆಯ ಬಣ್ಣ ಬಯಲು ಮಾಡುತ್ತದೆ. ಈಗ ಇಂತಹದ್ದೆ ಒಂದು ಹದಗೆಟ್ಟ ರಸ್ತೆಗೆ ಬೈಕ್ ಸವಾರರೊಬ್ಬರು ವ್ಹೀಲ್ ಚೇರ್ ಮೇಲೆ ಜೀವನ ಕಳೆಯುವಂತೆ ಮಾಡಿದೆ.
ಜೆ.ಸಿ.ನಗರದ ನಿವಾಸಿಯಾಗಿರುವ ೩೮ ವರ್ಷದ ಬಾಲಾಜಿ ಎಂಬುವರು ಶನಿವಾರ (ಅ.22) ಬೆಳಗ್ಗೆ 8 ಗಂಟೆಗೆ ಯಶವಂತಪುರದ ಬಿಇಎಲ್ ಸರ್ಕಲ್ ಬೈಕ್‌ನಲ್ಲಿ ಬರುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಬಿದ್ದ ರಭಸಕ್ಕೆ ಬಾಲಾಜಿಯ ಕತ್ತು, ಭುಜದ ಮೂಳೆ ಮುರಿದು ಹೋಗಿದೆ. ಜತೆಗೆ ಕಾಲಿಗೆ ತೀವ್ರ ಪೆಟ್ಟಾಗಿದ್ದು, ವ್ಹೀಲ್ ಚೇರ್ ಗತಿಯಾಗಿದೆ.
ಪ್ರಾಣಾಪಾಯದಿಂದ ಪಾರಾದ ಬಾಲಾಜಿ ಈ ಬಗ್ಗೆ “”ಕತ್ತು, ಭುಜದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಾಲಿಗೂ ಹೊಡೆತ ಬಿದ್ದ ಕಾರಣ ನಡೆದಾಡಲು ಆಗದೆ ವ್ಹೀಲ್ ಚೇರ್ ಮೂಲಕವೇ ಓಡಾಡುವಂತಾಗಿದೆ. ನನ್ನ ಈ ಸ್ಥಿತಿಗೆ ಬಿಬಿಎಂಪಿ ಹಾಗೂ ಸರ್ಕಾರವೇ ಕಾರಣ. ನನ್ನ ಸ್ಥಿತಿ ಯಾರಿಗೂ ಬಾರದಿರಲಿ, ಸರ್ಕಾರ ಕೂಡಲೇ ಗುಂಡಿಗಳನ್ನು ಮುಚ್ಚಲಿʼʼ ಎಂದು ಆಗ್ರಹಿಸಿದರು.
ಇದನ್ನೂ ಓದಿ | 14 ದಿನದ ಹೋರಾಟ ಮುಗಿಸಿದ ಶಿಲ್ಪಾ: ಬೆಂಗಳೂರು ವಿವಿ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು