ಬೆಂಗಳೂರು: ಕನ್ನಡ ಪತ್ರಿಕಾಲೋಕ ಕಂಡ ಧೀಮಂತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಸ್ಥಾಪಿಸಿದ ಪ್ರಾರ್ಥನಾ ಶಾಲೆಯು (Prarthana School) ಯಶಸ್ವಿಯಾಗಿ 21 ವರ್ಷಗಳನ್ನು ಪೂರೈಸುತ್ತಿದೆ. ಈ ಶುಭ ಸಂದರ್ಭದಲ್ಲಿ ಅವರ ಮಗ ಆದಿತ್ಯೋದಯ ಕರ್ಣ ಅವರು ಕಾರ್ಯದರ್ಶಿಯಾಗಿ ಮುನ್ನಡೆಸುತ್ತಿರುವ ಪ್ರಾರ್ಥನಾ ಎಜುಕೇಶನ್ ಸೊಸೈಟಿಯಿಂದ ‘ಪ್ರಾರ್ಥನಾ. ಇನ್ ವರ್ಲ್ಡ್ ಸ್ಕೂಲ್’ (Prarthana.in World School) ಎಂಬ ಹೊಸ ಶಾಲೆಯನ್ನು ಪ್ರಾರಂಭಿಸುತ್ತಿದ್ದು, ನೂತನ ಶಾಲೆಯ ಉದ್ಘಾಟನಾ ಕಾರ್ಯಕ್ರಮವನ್ನು ನವೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಪ್ರಾರ್ಥನಾ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಆದಿತ್ಯೋದಯ ಕರ್ಣ ಅವರು ಮಾಹಿತಿ ನೀಡಿದ್ದು, ಬನಶಂಕರಿಯ 6ನೇ ಹಂತದಲ್ಲಿ ʼಪ್ರಾರ್ಥನಾ. ಇನ್ ವರ್ಲ್ಡ್ ಸ್ಕೂಲ್ʼ ಶಾಲೆ ಆರಂಭಿಸಲಾಗುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಲೆಯನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ನಿರ್ದೆಶಕ ಟಿ.ಎನ್. ಸೀತಾರಾಮ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟೀ ವಿವೇಕ್ ಆಳ್ವ ಮತ್ತು ಕರ್ನಾಟಕ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ನಾಗರಾಜ ಉಪಾಧ್ಯಾಯ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಡೊನೇಶನ್ ತೆಗೆದುಕೊಳ್ಳದ, ಪಾಲಕರ ಜಾತಿ, ಧರ್ಮ, ಶ್ರೀಮಂತಿಕೆ ಯಾವುದನ್ನೂ ಕೇಳದ, ಸಾಮಾನ್ಯರಿಗೂ ಕೈಗೆಟಕುವ ಮಟ್ಟದಲ್ಲಿ ಫೀಸ್ ತೆಗೆದುಕೊಂಡು ಪಠ್ಯ ಪುಸ್ತಕಗಳನ್ನು ಕೂಡ ನೀಡಿ, ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ನೀಡುತ್ತಿರುವ ಸಂಸ್ಥೆ ಎಂದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಮ್ಮ ಶಾಲೆಯು ಹೆಸರಾಗಿದೆ. ಸದ್ಯ 6 ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಪ್ರಾರ್ಥನಾ ಸಂಸ್ಥೆಯ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.
ಇದನ್ನೂ ಓದಿ | ಇತಿಹಾಸದ ಪಠ್ಯದಲ್ಲಿ ರಾಮಾಯಣ, ಮಹಾಭಾರತ! ಶಾಲೆಗಳಲ್ಲಿ ಕಲಿಸಲು ಎನ್‌ಸಿಇಆರ್‌ಟಿಗೆ ಶಿಫಾರಸು
ರವಿ ಬೆಳಗೆರೆಯವರು ಹಾಕಿಕೊಟ್ಟ ಆದರ್ಶಗಳನ್ನೇ ಮುಂದುವರೆಸಿಕೊಂಡು, ಪಠ್ಯ ಪುಸ್ತಕಗಳು, ಯೂನಿಫಾರ್ಮ್ ಅಲ್ಲದೆ ಶಾಲೆಯಲ್ಲಿಯೇ ಮಕ್ಕಳಿಗೆ ಟಿಫಿನ್ ಮತ್ತು ಊಟವನ್ನು ಕೂಡ ನೀಡಿ ಅತ್ಯಾಧುನಿಕ, ಅತ್ಯುತ್ತಮ ವಿದ್ಯಾಭ್ಯಾಸವನ್ನು ನೀಡುವ ಗುರಿ ಹೊಂದಿದ್ದೇವೆ ಎಂದು ಆದಿತ್ಯೋದಯ ಕರ್ಣ ಹೇಳಿದ್ದಾರೆ.