ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ (Mallepuram G Venkatesh) ಅವರ ಆತ್ಮಕಥನ ʼದಿಟದ ದೀವಟಿಗೆʼ ಗ್ರಂಥ ಭಾನುವಾರ ಲೋಕಾರ್ಪಣೆಗೊಂಡಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಅಂಕಿತ ಪುಸ್ತಕ ಸಹಯೋಗದಲ್ಲಿ ಗಾಂಧಿಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ʼದಿಟದ ದೀವಟಿಗೆʼ ಕೃತಿಯನ್ನು ಬಿಡುಗಡೆ ಮಾಡಿದರು.
ಈ ವೇಳೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ಮಾತನಾಡಿ, ಆತ್ಮಕಥೆ ಎನ್ನುವುದು ಇತಿಹಾಸ, ಪ್ರವಾಸಕಥನವಾದರೆ ಅಲ್ಲಿ ವ್ಯಕ್ತಿ ಮರೆಯಾಗುತ್ತಾನೆ. ಸಾಹಿತ್ಯದ ಗದ್ಯ ಕೃತಿಯಾದರೆ ಅದು ಕಲ್ಪನಾ ಲೋಕದ ಗದ್ಯ ಕೃತಿಯಾಗಲಿದೆ. ಆದ್ದರಿಂದ ಆತ್ಮಕಥೆಗಳು ನೈಜತೆಯಿಂದ ಕೂಡಿರಬೇಕು. ಬಹಳಷ್ಟು ಜನ ಆತ್ಮಕಥೆಯ ಹೆಸರಿನಲ್ಲಿ ಸ್ವಗತವನ್ನು ಬರೆಯುತ್ತಾರೆ. ಆತ್ಮಕಥೆಯಲ್ಲಿ ಸ್ವ ಮತ್ತು ಅಹಂ ಇದ್ದರೆ ಅದು ಅಹಂಕಥನವಾಗುತ್ತದೆ. ಆತ್ಮಕಥೆ ಬರೆಯಬೇಕಾದರೆ ಮೊದಲು ಆ ವ್ಯಕ್ತಿಯೇ ಅದಕ್ಕೆ ಸಾಕ್ಷಿಯಾಗಬೇಕು. ಏಕೆಂದರೆ ತಾನು ಲೇಖಕನಾಗಿ ತನ್ನನ್ನು ತಾನು ಕಾಣದೇ ಒಬ್ಬ ಸಾಕ್ಷಿಯಾಗಿ ತನ್ನ ಜೀವನವನ್ನು ನೋಡಬೇಕಾಗುತ್ತದೆ. ಇಂತಹ ವಿಚಾರವನ್ನು ನಾನು ಮಲ್ಲೇಪುರಂ ಅವರ ಆತ್ಮಕಥೆಯಲ್ಲಿ ಕಂಡಿದ್ದೇನೆ ಎಂದರು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!
ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮಾತನಾಡಿ, ʼದಿಟದ ದೀವಟಿಗೆ’ ಆತ್ಮಕಥೆಯಲ್ಲಿ ಎಲ್ಲೂ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆದಿಲ್ಲ. ನನ್ನ ಜೀವನದಲ್ಲಿ ಮೂರ್ನಾಲ್ಕು ಮಂದಿ ಬಹಳಷ್ಟು, ನೋವು, ಸಂಕಷ್ಟಗಳನ್ನು ಕೊಟ್ಟಿದ್ದರು. ಹೀಗಾಗಿ ಈ ಜೀವನವೇ ಬೇಡ ಅನಿಸಿದ್ದೂ ಇದೆ. ಆದರೆ ಅದ್ಯಾವುದನ್ನು ಕೂಡ ಆತ್ಮಕಥೆಯಲ್ಲಿ ಬರೆದುಕೊಂಡಿಲ್ಲ. ಗುರುಬಲ ಮತ್ತು ಮಿತ್ರ ಬಲದಿಂದ ಎಲ್ಲ ಸಂಕಷ್ಟಗಳನ್ನು ಗೆದ್ದಿದ್ದೇನೆ’ ಎಂದರು.
ನನ್ನ ಎಲ್ಲಾ ಸಾಹಿತ್ಯ ಸೇವೆಯಲ್ಲಿಯೂ ಹಲವಾರು ಸಾಹಿತ್ಯಕ ಗೆಳೆಯರ ಬೆಂಬಲವಿದೆ. ‘ದಿಟದ ದೀವಟಿಗೆ’ ಆತ್ಮಕಥನವನ್ನು ಹೊರತರಲು ಬಹಳಷ್ಟು ಮಂದಿ ಪ್ರೋತ್ಸಾಹವನ್ನು ನೀಡಿದ್ದಾರೆ. ಅನಾದಿಕಾಲದ ಗುರುಗಳಿಂದ ಹಿಡಿದು ಇತ್ತೀಚಿನ ಬರಹಗಾರರು ನನಗೆ ಪ್ರೀತಿಯನ್ನು ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರಿಗೂ ನಾನು ಕೃತಜ್ಞತೆ ತಿಳಿಸುತ್ತೇನೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಅವರು, ಮಾತನಾಡಿ. ತಮ್ಮ ಜತೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಮನಸ್ಥಿತಿ ಮಲ್ಲೇಪುರಂ ಅವರದ್ದು. ತಾನು ಬೆಳೆಯುದರ ಜತೆಗೆ ಇತರರನ್ನು ಬೆಳೆಸುವ ಪ್ರವೃತ್ತಿಯನ್ನು ಅವರು ಹೊಂದಿದ್ದಾರೆ. ಇಂದಿನ ಈ ಕಾರ್ಯಕ್ರಮವು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಮ್ಮುತ್ತಿದ್ದು, ಬಹಳಷ್ಟು ಖುಷಿ ತಂದಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ವಿದ್ವಾಂಸ ಎ.ವಿ. ಪ್ರಸನ್ನ, ಕಾದಂಬರಿಕಾರ ಕು. ವೀರಭದ್ರಪ್ಪ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮುಂತಾದವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ | Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್ ಕಂಪನಿ ಸಿಇಓ!
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ಅಖಿಲ ಕರ್ನಾಟಕ ಕೊರಮ ಸಂಘದ ಅಧ್ಯಕ್ಷ ಜಿ. ಮಾದೇಶ, ವಿಸ್ತಾರ ನ್ಯೂಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿರಣ್‌ಕುಮಾರ್ ಡಿ.ಕೆ ಮತ್ತಿತರರು ಉಪಸ್ಥಿತರಿದ್ದರು.