ಬೆಂಗಳೂರು: ವೀರಲೋಕ ಪ್ರತಿಷ್ಠಾನದ (Prekshaa Pratishtana) ವತಿಯಿಂದ ಫೆಬ್ರವರಿ 10 ಮತ್ತು 11 ರಂದು ನಗರದ ಎಚ್.ಎಸ್.ಆರ್ ಬಡಾವಣೆಯ ಸ್ವಾಭಿಮಾನ ಉದ್ಯಾನವನದಲ್ಲಿ ‘ಪುಸ್ತಕ ಸಂತೆ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಪುಸ್ತಕ ಸಂತೆಗೆ ನೂರಕ್ಕೂ ಹೆಚ್ಚು ಪ್ರಕಾಶಕರು, ಸಾವಿರಾರು ಓದುಗರು, ಬರಹಗಾರರು ಜೊತೆಯಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥದ್ದೊಂದು ಕಾರ್ಯಕ್ರಮ ಜರುಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.10ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಸ್ತಕ ಸಂತೆಯನ್ನು ಉದ್ಘಾಟಿಸಲಿದ್ದಾರೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗಿಯಾಗಿ, ಮಕ್ಕಳ ಸಂತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಜನರಿಂದ ದೂರವಾಗಿರುವ ಪುಸ್ತಕಗಳ ಕಾಳಜಿಯನ್ನು ಮತ್ತೆ ಮರುಕಳಿಸಲು ಪ್ರಯತ್ನ ಹಾಗೂ ಮೊಬೈಲ್, ಟಿವಿ, ಸೋಷಿಯಲ್ ಮೀಡಿಯಾ ಜಗತ್ತು ಮರೆಸುವ ದೃಷ್ಟಿಯಲ್ಲಿ ಪುಸ್ತಕ ಸಂತೆ ಏರ್ಪಾಡು ಮಾಡಲಾಗಿದೆ. ಪ್ರಕಾಶಕರು, ಬರಹಗಾರರ ನೇತೃತ್ವದಲ್ಲಿ ನಡೆಯುವ ಪುಸ್ತಕ ಸಂತೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದೆ. ಎಚ್‌ಎಸ್‌ಆರ್ ಬಡಾವಣೆಯಲ್ಲಿ ಕನ್ನಡೇತರರು ಹೆಚ್ಚಾಗಿದ್ದಾರೆ. ಅವರಿಗೂ ಪುಸ್ತಕ ಮತ್ತು ಕನ್ನಡದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | Pustaka Sante: ಫೆ. 10, 11ರಂದು ತಪ್ಪದೇ ಬನ್ನಿ ʼಪುಸ್ತಕ ಸಂತೆʼಗೆ!
ಸುದ್ದಿಗೋಷ್ಠಿಯಲ್ಲಿ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ರಾಜ್ಯಾಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿಗಳಾದ ಆರ್. ದೋಡ್ಡೇಗೌಡ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ, ರೋಟರಿ ಕ್ಲಬ್‌ನ ಮುಖ್ಯಸ್ಥ ರಾಜೀವ್ ಥ್ಯಾಕಟ್, ಪುಸ್ತಕಸಂತೆಯ ಆಯೋಜಕರಾದ ವೀರಕಪುತ್ರ ಶ್ರೀನಿವಾಸ ಇದ್ದರು.