Site icon Vistara News

ಜೆಡಿಎಸ್ ಸರ್ಕಾರದಲ್ಲಿ ಆರ್.ಮಂಜುನಾಥ್ ಮಂತ್ರಿಯಾಗುವುದು ಖಚಿತ: ಕುಮಾರಸ್ವಾಮಿ ಅಭಯ

HD Kumaraswamy

HD Kumaraswamy

ಪೀಣ್ಯ ದಾಸರಹಳ್ಳಿ: ಜನಪರ ಕಾಳಜಿ ಹೊಂದಿರುವ ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಮತ್ತೊಮ್ಮೆ ಶಾಸಕರಾಗಿ ಆರಿಸಿ ಬಂದು, ಜೆಡಿಎಸ್ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಆರ್. ಮಂಜುನಾಥ್ ನೇತೃತ್ವದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಬ್ಯಾಟರಿ ರಾಜಣ್ಣ, ಜೆಸಿಬಿ ರಾಜಣ್ಣ ಸೇರಿ ಹಲವು ಮುಖಂಡರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದರು.

“ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಮಂಜುನಾಥ್ ಮಂತ್ರಿಯಾಗಿ ರಾಜ್ಯದಲ್ಲಿ ದಾಸರಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುತ್ತಾರೆ. ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ದಾಸರಹಳ್ಳಿಯಿಂದ 2018ರಲ್ಲಿ ಆರ್. ಮಂಜುನಾಥ್ ಜೆಡಿಎಸ್ ಪಕ್ಷದ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಸ್ಥಾನಮಾನ, ಉನ್ನತ ಹುದ್ದೆ
ಬಯಸಿದೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು” ಎಂದು ಕುಮಾರಸ್ವಾಮಿ ಬಣ್ಣಿಸಿದರು.

“ಮಂಜುನಾಥ್ ಅವರ ಆಶಯದಂತೆ ರಸ್ತೆ, ಒಳಚರಂಡಿ, ಕೆರೆಗಳ ನಿರ್ಮಾಣ ಸೇರಿ ದಾಸರಹಳ್ಳಿ ಸರ್ವಾಂಗೀಣ ಬೆಳವಣಿಗೆಗೆ ನಾನು ನೀಡಿದ್ದ ಸುಮಾರು 700 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿ ಕ್ಷೇತ್ರದ‌ ಜನತೆಗೆ ಅನ್ಯಾಯವೆಸಗಿದೆ. ಎದೆಗುಂದದೆ ಮಂಜುನಾಥ್ ನ್ಯಾಯಾಲಯದ ಮೊರೆ ಹೋಗಿ ನೂರಾರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ, ಶಕ್ತಿ ಮೀರಿ ಶ್ರಮಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆ ಮೂಲಕ ಮತದಾರರ ಋಣ ತೀರಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದರು.

“ಮಂಜುನಾಥ್ ಅವರ ಸರಳತೆ, ಅಭಿವೃದ್ಧಿ, ಕೋವಿಡ್ ಸಂಕಷ್ಟದಲ್ಲಿ ಜನರ ಜೀವ ರಕ್ಷಣೆಗೆ ಪ್ರಾಣವನ್ನು ಪಣಕ್ಕೊಡ್ಡಿ ದುಡಿದ ನಿಸ್ವಾರ್ಥ ಸೇವೆಯನ್ನು ಮನಗಂಡು ಬೇರೆ ಪಕ್ಷಗಳ ಅಸಂಖ್ಯ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿರುವುದು ಮಂಜುನಾಥ್ ಅವರಿಗೆ ಆನೆ ಬಲವಾಗಿ ಪರಿಣಮಿಸಿದೆ. ಹಾಗಾಗಿ ಮಂಜುನಾಥ್ ಮತ್ತೊಮ್ಮೆ ಶಾಸಕರಾಗುವುದು ನಿಶ್ಚಿತ” ಎಂದರು.

ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಮಾತನಾಡಿ, “ಜೆಡಿಎಸ್ ವರಿಷ್ಠ ದೇವೇಗೌಡರು ದೇಶದ ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆ ಮೆಚ್ಚಿದ್ದಾರೆ. ಜನಕಲ್ಯಾಣಕ್ಕೆ ಪೂರಕವಾಗಿರುವ‌ ಜೆಡಿಎಸ್‌ ಪಕ್ಷದ ಪಂಚರತ್ನ‌ ಯೋಜನೆಗಳ‌ ಮಹತ್ವವನ್ನು ಜನತೆ ಈಗಾಗಲೇ ಅರಿತಿದ್ದಾರೆ. ಹಾಗಾಗಿ ಎಚ್‌ಡಿಕೆ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಜನಾಭಿಪ್ರಾಯ ಬಲಗೊಂಡಿದೆ. ಈ ನಿಟ್ಟಿನಲ್ಲಿ ದಾಸರಹಳ್ಳಿಯಿಂದ ನನ್ನನ್ನು ಶಾಸಕನಾಗಿ ಆರಿಸಲು ಪ್ರತಿಪಕ್ಷಗಳ ಮುಖಂಡರು ಸ್ವ ಇಚ್ಛೆಯಿಂದ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ” ಎಂದು ಹೇಳಿದರು. ಜೆಡಿಎಸ್ ಮುಖಂಡರಾದ ಬಾಲಾಜಿ ವೆಂಕಟೇಶ್, ಬಾಲ್ಡ್‌ವಿನ್‌ ಲೋಕೇಶ್, ಜಿಸಿಬಿ ರಾಜಣ್ಣ, ಮುತ್ತುರಾಜ್, ಯೋಗೇಶ್ ಸೇರಿ ಹಲವರು ಇದ್ದರು.

ಇದನ್ನೂ ಓದಿ: Karnataka Election : ಕುಮಾರಸ್ವಾಮಿ ಕೆಲಸ ನೋಡಿ ನಮಗೆ ಮತ ಕೊಡಿ: ಸಾಗರ ಜೆಡಿಎಸ್‌ ಅಭ್ಯರ್ಥಿ

Exit mobile version