Site icon Vistara News

ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಕೈಗಾರಿಕಾ ವಲಯದ ಕೊಡುಗೆ ಅಪಾರ: ಚಿಂತಕ ರಾ.ನಂ. ಚಂದ್ರಶೇಖರ

ಕನ್ನಡ

ಬೆಂಗಳೂರು: ನಾಡಿನ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಕೈಗಾರಿಕಾ ವಲಯವು, ಕನ್ನಡ ಸಾಂಸ್ಕೃತಿಕ ಜಗತ್ತಿಗೆ ನೀಡಿರುವ ಕೊಡುಗೆ ಅಪಾರ. ಹಾಗೆಯೇ ಕನ್ನಡ ಜಾಗೃತಿಗೆ ಕಾರ್ಮಿಕರ ಕೊಡುಗೆ ಸ್ಮರಣೀಯವಾದುದು ಎಂದು ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ತಿಳಿಸಿದರು.

ಎಚ್ಎಎಲ್‌ನ ತೇಜಸ್ ಕನ್ನಡ ಸಂಘದ ‘ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಮತ್ತು ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್ಎಎಲ್‌ನಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಆಡಳಿತ ಪ್ರಶಿಕ್ಷು ಆಗಿದ್ದರು. ಇಲ್ಲಿ ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಸಾಹಿತಿಗಳು, ಕಲಾವಿದರು ಕೆಲಸ ಮಾಡುತ್ತಿದ್ದರು. ಕವಿ ಗೋಷ್ಠಿಯನ್ನು ಕೇಳಿದಾಗ ಪ್ರತಿಭೆಗೆ ಕೊರತೆಯಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇದನ್ನೂ ಓದಿ | ಚರ್ಮಗಂಟು ರೋಗ ನಿರ್ವಹಣೆಗೆ ₹13 ಕೋಟಿ ಬಿಡುಗಡೆಗೆ ಮುಖ್ಯಮಂತ್ರಿ ಸೂಚನೆ

ಕೈಗಾರಿಕೆಯಲ್ಲಿ ತೊಡಗಿರುವ ಬರಹಗಾರರು, ಸಾಹಿತ್ಯಾಸಕ್ತರು ಸೇರಿ ಕವನ, ಕಥೆ, ಪ್ರಬಂಧಗಳ ಸಂಕಲನಗಳನ್ನು ಪ್ರಕಟಿಸಿ, ಕನ್ನಡ ಸಂಘದ ಮೂಲಕ ಬಿಡುಗಡೆ ಮಾಡುವಂತೆ ಸೂಚಿಸಿದ ಅವರು, ಆಡಳಿತ ವರ್ಗ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ರಂಗ ವಿಮರ್ಶಕ ಡಾ. ರುದ್ರೇಶ್ ಅದರಂಗಿ, ಕವನ ರಚಿಸುವವರಿಗೆ ಕನ್ನಡ ಕಾವ್ಯ ಪರಂಪರೆಯ ಅರಿವಿರಬೇಕು, ಸಮಾಜದ ಪ್ರಚಲಿತ ಆಗುಹೋಗುಗಳ ಅರಿವು, ಅಧ್ಯಯನಶೀಲತೆ ಇದ್ದರೆ ಉತ್ತಮ ಕವಿತೆಗಳು ಪ್ರಕಟವಾಗುತ್ತವೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಂ. ಚಂದ್ರಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ ವಿಭಾಗದ ಮಾನವ ಸಂಪನ್ಮೂಲ ಇಲಾಖೆಯ ಅಪರ ಮಹಾ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಸತ್ಯವತಿ, ಕಾರ್ಖಾನೆಯ ಕಾರ್ಮಿಕ ಸಂಘದ ಎಂ.ಆರ್. ತಾರಾನಾಥ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಧಿಕಾರಿ ಮತ್ತು ಕಾರ್ಮಿಕ ಸಂಘದ ಭೀಮಾನಾಯಕ್ ಪಾಲ್ಗೊಂಡಿದ್ದರು.

ಇದನ್ನೂ ಓದಿ | Vande Bharat Express | ಕರ್ನಾಟಕಕ್ಕೆ ಬರಲಿದೆ 130 ಕಿ.ಮೀ. ವೇಗದಲ್ಲಿ ಚಲಿಸುವ ರೈಲು: ದಿನಾಂಕ, ಮಾರ್ಗ ಘೋಷಣೆ

Exit mobile version