ಬೆಂಗಳೂರು : ರಾಜ್ಯದೆಲ್ಲೆಡೆ ಮಳೆಯಿಂದಾಗಿ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಮಳೆ ಬಂದು ರೈತರು ಸಂತಸ ವ್ಯಕ್ತಪಡಿಸಿದರೆ, ಅದೇ ಮಳೆಯಿಂದಾಗಿ ನಗರದ ಜನರು ಪರದಾಡುವಂತಾಗಿದೆ. ಭಾರೀ ಮಳೆಯಿಂದಾಗಿ ರಾಜ್ಯಾದ್ಯಂತ ಅಪಾರ ಹಾನಿ ಸಂಭವಿಸಿದ್ದು, ಮತ್ತೂ ಕೆಲ ದಿನ ಮಳೆಯಾಗುವ ಅಂದಾಜಿದೆ.
ಭಾರತೀಯ ಹವಾಮಾನ ಇಲಾಖೆಯು ಬೆಂಗಳೂರು, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಮೇ 18ರಿಂದ ಮೇ 21ರವರೆಗೆ ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿತ್ತು.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸರಾಸರಿ 27 ಮಿ.ಮೀ ಮಳೆಯಾಗಿದೆ. 28 ಜಿಲ್ಲೆಗಳಲ್ಲಿ ಅಧಿಕ ಮಳೆ ದಾಖಲಾಗಿದ್ದು, ಈವರೆಗೆ 299 ಹಳ್ಳಿಗಳು ಹಾನಿಗೊಳಗಾಗಿವೆ. ಜನ, ಜಾನುವಾರುಗಳಿಗೆ ರಾಜ್ಯಾದ್ಯಂತ ಅಪಾರ ಹಾನಿ ಸಂಭವಿಸಿದ್ದು, ಮೂವರು ಸಾವನಪ್ಪಿದ್ದಾರೆ. 19 ಮನೆಗಳಿಗಿಗೆ ತೀವ್ರ ಹಾನಿ ಒಳಗೊಂಡು 673 ಮನೆಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.
10 ಜಾನುವಾರಗಳು ಸಾವನಪ್ಪಿವೆ. 4 ಪರಿಹಾರ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. 2,323 ಜನರ ರಕ್ಷಣೆ ಮಾಡಲಾಗಿದೆ. 1,800 ಹೆಕ್ಟೇರ್ ಬೆಳೆಹಾನಿ ವರದಿ ಆಗಿದೆ. 3 ಶಾಲಾ ಕಟ್ಟಡಗಳು, 302 ವಿದ್ಯುತ್ ಕಂಬ ಹಾಗೂ 23 ಟ್ರಾನ್ಸಫಾರ್ಮರ್ ಧರೆಗೆ ಉರುಳಿವೆ.
ಅಪಾರ ನಷ್ಟ
ತುಮಕೂರು ಜಿಲ್ಲೆಯ ಮಾರ್ಕೋನಹಳ್ಳಿ ಡ್ಯಾಂ ಭರ್ತಿ ಆದ ಕಾರಣ ಡ್ಯಾಂನಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಕ್ಕೆ ಹಾಕಲಾಗಿದೆ. ಕುಣಿಗಲ್ ತಾಲೂಕಿನ ಮಾರ್ಕೋನಳ್ಳಿ ಜಲಾಶಯ ಮಟ್ಟ 88.5 ಅಡಿಗೆ ಭರ್ತಿಯಾಗಿದೆ. 2 ಸಾವಿರ ಕ್ಯುಸೆಕ್ ಒಳ ಹರಿವು ಹಾಗೂ 2 ಸಾವಿರ ಕ್ಯುಸೆಕ್ ಹೊರಹರಿವು ಆಗಿದೆ. ಇದರಿಂದಾಗಿ ಮಂಡ್ಯದ ಮದ್ದೂರು ಹಾಗೂ ಮಳವಳ್ಳಿ ಜಲಾನಯನ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿದ್ದು, ಇಂದಿನಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಇದೆ