ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟಕ್ಕೆ (Rain news) ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾಮಳೆ ನಡುವೆಯೂ ಟ್ರಾಫಿಕ್ ಪೊಲೀಸರ ಕಾರ್ಯವೈಖರಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿರುವ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಶತ ಪ್ರಯತ್ನ ಮಾಡುತ್ತಿದ್ದಾರೆ.
ಟ್ರಾಫಿಕ್ ಪೊಲೀಸರ ಕಾರ್ಯವೈಖರಿಗೆ ರಾಜಧಾನಿಯ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಮಳೆಯಿಂದಾಗಿ ತೊಂದರೆಯಾಗಿರುವ ಮಾರ್ಗಗಳಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸಂಚಾರಿ ಪೊಲೀಸರು ಬೀಡು ಬಿಟ್ಟಿದ್ದಾರೆ. ರೈನ್ ಕೋಟ್ ಧರಿಸಿ ಮಳೆ ನಡುವೆಯೂ ಕಾರ್ಯಾಚರಣೆ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆಯೋ ಆ ಸ್ಥಳಗಳಲ್ಲಿ ಪೊಲೀಸರು ಸುಗಮ ಸಂಚಾರಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ಜಲಾವೃತಗೊಂಡಿರುವ ರಸ್ತೆ ಮಾರ್ಗಗಳಲ್ಲಿ ಸಂಚಾರ ದಟ್ಟಣೆಯಾಗದಂತೆ ಟ್ರಾಫಿಕ್ ಡೈವರ್ಷನ್ ಮಾಡಲಾಗಿದೆ.
ಇದನ್ನೂ ಓದಿ | ಬೆಂಗಳೂರು ಮಹಾಮಳೆಗೆ ಯುವತಿ ಬಲಿ | ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯದಿಂದ ಹೋಯ್ತು ಜೀವ
ಬೆಳ್ಳಂದೂರು ಇಕೋ ಸ್ಪೆಸ್ ಬಳಿ ರಸ್ತೆ ತುಂಬಾ ನೀರು ತುಂಬಿದ ಪರಿಣಾಮ ಮಡಿವಾಳ ಸಂಚಾರ ಪೊಲೀಸರು ಮೈಕ್ ಹಿಡಿದು ಮಾಹಿತಿ ನೀಡುತ್ತಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಟ್ವಿಟರ್ ಹಾಗೂ ಫೇಸ್ ಬುಕ್ ಮುಖಾಂತರ ಮಾಹಿತಿಗಳನ್ನು ಪೋಸ್ಟ್ ಮಾಡಿ, ಆಗಬಹುದಾದ ಸಂಚಾರ ದಟ್ಟಣೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸುತ್ತಿದ್ದಾರೆ.
ಬಾಣಸವಾಡಿ, ಚಿಕ್ಕಪೇಟೆ ಮುಂತಾದೆಡೆ ವಿವಿಧ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಳೆ ನಡುವೆಯೂ ರಸ್ತೆಯಲ್ಲಿ ತುಂಬಿದ್ದ ನೀರನ್ನು ಚರಂಡಿಗೆ ಹರಿಯುವಂತೆ ಮಾಡಿ ಯೋಗ್ಯ ಸಂಚಾರಕ್ಕೆ ಅನುವು ಮಾಡುತ್ತಿದ್ದಾರೆ. ನೀರಿನಲ್ಲಿ ಕೆಟ್ಟು ನಿಂತಿರುವ ವಾಹನಗಳಿಗೂ ಪೊಲೀಸರು ಸಾಥ್ ನೀಡಿ ಮುಂದೆ ಹೋಗಲು ನೆರವು ನೀಡುತ್ತಿದ್ದಾರೆ. ಮೂಲ ಸೌಕರ್ಯ ಕಲ್ಪಿಸದ ಸ್ಥಳೀಯ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ಟ್ರಾಫಿಕ್ ಪೊಲೀಸರು ಮಾಡುತ್ತಿರುವುದಕ್ಕಾಗಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ | Rain news | ದಾಖಲೆಯ ಮಳೆಗೆ ತತ್ತರಿಸಿದ ಬೆಂಗಳೂರು, ಜನಜೀವನ ಅಸ್ತವ್ಯಸ್ತ