ಬೆಂಗಳೂರು: ಕಲಾ ದರ್ಪಣ ಆರ್ಟ್ ರಿಫ್ಲೆಕ್ಟ್ಸ್ (Kaladarpana Artreflects) ವತಿಯಿಂದ ಡಿಸೆಂಬರ್ 2ರಂದು ರಾಜ್ಯೋತ್ಸವ ಸುವರ್ಣ ಸಂಭ್ರಮ, ಕಲಾ ದರ್ಪಣ ಪ್ರಶಸ್ತಿ ಪ್ರದಾನ (Kaladarpana Award) ಹಾಗೂ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿಯ 2ನೇ ಹಂತದ ಎನ್‌ಜಿಇಎಫ್ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8.30ಕ್ಕೆ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ, 9.45ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು, ಸಭಾ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸಂಗೀತ ಗಂಗಾ ಸಂಸ್ಥೆ ಅಧ್ಯಕ್ಷೆ, ಖ್ಯಾತ ಗಾಯಕಿ ಡಾ. ಹೇಮಾ ಪ್ರಸಾದ್ ಅವರು ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಅಧ್ಯಕ್ಷತೆ ವಹಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜರಾಜೇಶ್ವರಿ ನಗರ ಕ್ಷೇತ್ರ ಶಾಸಕ ಮುನಿರತ್ನ, ಎಂಎಲ್‌ಸಿ ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್‌ನ ಮಾಲೀಕ ಟಿ.ಎ. ಶರವಣ ಅವರು ಭಾಗವಹಿಸಲಿದ್ದಾರೆ.
ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು
ಸಂಗೀತ ಕ್ಷೇತ್ರದಲ್ಲಿ ಖ್ಯಾತ ದಾಸವಾಣಿ ಗಾಯಕ ವಿದ್ವಾನ್ ರಾಯಚೂರು ಶೇಷಗಿರಿರಾವ್, ಕನ್ನಡ ಸೇವಾ ಕ್ಷೇತ್ರದಲ್ಲಿ ಸಮಾಜ ಸೇವಕ, ಮಾರುತಿ ಮೆಡಿಕಲ್ಸ್ ಮಾಲೀಕ ಮಹೇಂದ್ರ ಮುಣೋತ್ ಜೈನ್, ಚಿತ್ರಕಲಾ ಕ್ಷೇತ್ರದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ವಿಶ್ರಾಂತ ಪ್ರಾಚಾರ್ಯ ಬಾಬು ಜತ್ಕರ್ ಅವರಿಗೆ ಕಲಾದರ್ಪಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇನ್ನು 50 ಮಹಿಳಾ ಸಾಧಕಿಯರು, ಸಮಾಜ ಸೇವಕರು, ಕಲಾವಿದರು, ಬಾಲಪ್ರತಿಭೆಗಳಿಗೆ ಕಲಾ ದರ್ಪಣ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಚಿತ್ರಕಲಾ ಸ್ಪರ್ಧೆ
ಬೆಳಗ್ಗೆ 8.30ಕ್ಕೆ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯು 8, 12, 16 ವರ್ಷದೊಳಗಿನ ಮಕ್ಕಳಿಗೆ ಮೂರು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9380671947 ಸಂಪರ್ಕಿಸಿ.
ಸಹೃದಯರು ಡಿ.2ರಂದು ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿ ಕನ್ನಡದ ಹಬ್ಬವನ್ನು ಯಶಸ್ಸುಗೊಳಿಸಬೇಕು ಎಂದು ಕಲಾ ದರ್ಪಣ ಆರ್ಟ್ ರಿಫ್ಲೆಕ್ಟ್ಸ್ ಅಧ್ಯಕ್ಷೆ, ಚಿತ್ರಕಲಾವಿದೆ ಹೇಮಾ ವಿನಾಯಕ್ ಪಾಟೀಲ್ ಕೋರಿದ್ದಾರೆ.