ಬೆಂಗಳೂರು: ರಾಮಾಯಣ ಕಾಲದಲ್ಲಿ ಕರ್ನಾಟಕಕ್ಕೆ ಅತ್ಯಂತ ಹೆಚ್ಚಿನ ಮಹತ್ವ ಇತ್ತು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಸಾಕ್ಷಾತ್ ಶ್ರೀರಾಮಚಂದ್ರನೇ ಕರ್ನಾಟಕದುದ್ದಕ್ಕೂ ಸಂಚರಿಸಿದ್ದ ಐತಿಹ್ಯಗಳು ಇಲ್ಲಿ ಯಥೇಚ್ಛವಾಗಿವೆ. ರಾಮ ಇಟ್ಟ ಹೆಜ್ಜೆಯಲ್ಲೆಲ್ಲ ಮಂದಿರಗಳು ತಲೆ ಎತ್ತಿವೆ. ಕನ್ನಡಿಗರು ಇಂದಿಗೂ ಹೃನ್ಮನಗಳಲ್ಲಿ ಪ್ರಭು ಶ್ರೀರಾಮಚಂದ್ರನನ್ನು ಸ್ಥಾಪಿಸಿಕೊಂಡು ಆರಾಧಿಸುತ್ತಲೇ ಇದ್ದಾರೆ. ಇದರ ನಡುವೆ ಹಲವು ಶತಮಾನಗಳ ಬಳಿಕ ಜ.22ರಂದು ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯ (Ram Mandir) ನಡೆದಿದ್ದು, ಕರ್ನಾಟಕದ ಆಸ್ತಿಕ ಜನರು ಆನಂದ ತುಂದಿಲರಾಗಿದ್ದಾರೆ. ಅಯೋಧ್ಯೆಯಲ್ಲಿ ಇದೀಗ 48 ದಿನಗಳ ಕಾಲ ಮಂಡಲೋತ್ಸವ ನಡೆಯುತ್ತಿದ್ದು, ಕರ್ನಾಟಕದ ಸುಪ್ರಸಿದ್ಧ ಜ್ಯೋತಿಷಿಗಳು, ವಿದ್ವನ್ಮಣಿಗಳಾದ ಡಾ.ಪಂಡಿತ್ ಪ್ರಸನ್ನಾಚಾರ್ಯ ಎಸ್. ಕಟ್ಟಿ ಮತ್ತು ತಂಡದವರು ಸತತ ನಾಲ್ಕು ದಿನಗಳ ಕಾಲ ಅಯೋಧ್ಯಾಧಿಪತಿಯ ಸನ್ನಿಧಾನದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಧನ್ಯತೆ ಮೆರೆದಿದ್ದಾರೆ.
ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಮಂಡಲೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಶ್ರೀ ರಾಮಜನ್ಮಭೂಮಿ ಮಂಡಲ ಉತ್ಸವ, ಅಯೋಧ್ಯೆ-2024′ ಹೊಸ ಸಮಿತಿ ವತಿಯಿಂದ ವೈವಿಧ್ಯಮಯ ಧಾರ್ಮಿಕ ಆಚರಣೆಗಳನ್ನು ವಿಧ್ಯುಕ್ತ ಹಾಗೂ ವಿಧಾನೋಕ್ತವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ.
ಶ್ರೀರಾಮಲಲ್ಲಾ ಉತ್ಸವ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ನಡೆಯುವ ಸುದೀರ್ಘ 48 ದಿನಗಳ ಈ ಮಂಡಲೋತ್ಸವದಲ್ಲಿ ಪ್ರತಿದಿನ ಯಾಗ, ಯಜ್ಞ, ಹೋಮ, ಹವನ, ಶಾಂತಿ ಪೂಜೆಗಳು ನಡೆಯುತ್ತಿವೆ. ಅನೇಕ ಸಾಧು, ಸಂತರು, ಸತ್ಪುರುಷರು ಮತ್ತು ಭಕ್ತಾಗ್ರಣಿಗಳಿಂದ ಜಪ, ತಪ, ಅನುಷ್ಠಾನ ಹಾಗೂ ಪಾರಾಯಣಗಳು ಸಾಂಗೋಪಾಂಗವಾಗಿ ಜರುತ್ತಿವೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ತಾರಕ ಮಂತ್ರದ ಓಘ ಇಡೀ ವಿಶ್ವದೆಲ್ಲೆಡೆ ಓಂಕಾರನಾದವಾಗಿ ಅನುರಣಿಸುತ್ತಿದೆ. ರಾಮನ ಆಗಮನದಿಂದ ಜಗತ್ತು ಎಲ್ಲ ಜಂಜಾಟಗಳಿಂದ ಮುಕ್ತವಾಗಿ ಝಗಮಗಿಸುತ್ತಿದೆ.
ಸದಾವಕಾಶ
ತಮ್ಮ ವಾಕ್ಚಾತುರ್ಯ ಹಾಗೂ ವಾಸ್ತವತೆಯ ಮೌಲ್ಯಗಳೊಂದಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರವೀಣರಾಗಿರುವ, ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಡಾ. ವಿದ್ವಾನ್ ಪ್ರಸನ್ನಾಚಾರ್ಯ ಎಸ್.ಕಟ್ಟಿ ಮತ್ತು ತಂಡದವರು ಸಹಿತ ಅಯೋಧ್ಯೆಗೆ ತೆರಳಿ ಶ್ರೀರಾಮಲಲ್ಲಾನ ಸನ್ನಿಧಾನದಲ್ಲಿ ಸಾರ್ಥಕ ಕ್ಷಣಗಳನ್ನು ಕಳೆದಿದ್ದಾರೆ. ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸದಸ್ಯರಾಗಿರುವ ಉಡುಪಿಯ ಪೇಜಾವರ ಮಠದ 1008 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಪಾಲ್ಗೊಂಡು ಪಾರಮರ‍್ಥದ ಪರಮ ಪಾವಿತ್ರ‍್ಯತೆಯನ್ನು ಸವಿದಿದ್ದಾರೆ. ಆ ನಾಲ್ಕು ದಿನಗಳು ಉತ್ತರ ಭಾರತದಲ್ಲಿ ದಕ್ಷಿಣ ಭಾರತದ ಸೊಬಗ’ನ್ನು ಸೂರೆಗೊಳಿಸಿದ್ದಾರೆ.
ಡಾ.ಪಂಡಿತ್ ಪ್ರಸನ್ನಾಚಾರ್ಯ ಎಸ್.ಕಟ್ಟಿ ಮತ್ತು ತಂಡದವರಿಗೆ ಶ್ರೀಬಾಲರಾಮನ ಉತ್ಸವ ಮೂರ್ತಿಯ ಉತ್ತರ ದ್ವಾರದ ಮಂದಿರದ ಪ್ರಾಂಗಣದಲ್ಲಿ ಪ್ರತಿನಿತ್ಯ ತತ್ವ ಮಂತ್ರ, ಜಪ, ತಪ, ಹೋಮ, ಹವನ, ಪಾರಾಯಣಾದಿಗಳನ್ನು ನಡೆಸಿದ್ದಾರೆ. ಮಂದಿರದ ಈಶಾನ್ಯ ಭಾಗದಲ್ಲಿರುವ ಬೃಹತ್ ಪ್ರಮಾಣದ ಉಭಯ ಯಾಗ-ಯಜ್ಞ ಶಾಲೆಗಳಲ್ಲಿ ಋಗ್ವೇದ ಸಂಹಿತಾ ಮಹಾಯಾಗ, ರಾಮತಾರಕ ಮಂತ್ರಯಾಗ’ ಮತ್ತು 72
ಮಹಾಮಂತ್ರಯಾಗ’ ಸೇರಿದಂತೆ ಲೋಕ ಕಲ್ಯಾಣಾರ್ಥವಾದ ಇನ್ನೂ ಅನೇಕ ಹೋಮ, ಹವನಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಎಲ್ಲ ಪುರೋಹಿತರ ಸಹಕಾರದಿಂದ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ್ದಾರೆ.
ಪ್ರಾಕಾರ ಸೇವೆ
ಮಂಡಲೋತ್ಸವ ನಿಮಿತ್ತ ಪ್ರತಿನಿತ್ಯ ಸಂಜೆ 4 ಗಂಟೆಗೆ ಅಯೋಧ್ಯೆ ರಾಮಮಂದಿರದಲ್ಲಿ ನಡೆಯುವ ಪ್ರಾಕಾರ ಸೇವೆಯನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಮಹಾಭಾಗ್ಯ. ದೇವಸ್ಥಾನದ ಮೂಲ ಉತ್ಸವ ವಿಗ್ರಹವನ್ನು ಉಡುಪಿಯ ಪೇಜಾವರ ಶ್ರೀಪಾದಂಗಳವರಿಂದ ಕರ್ನಾಟಕರಿಂದ ಬಂದಿರುವ ರಜತ ಪಲ್ಲಕ್ಕಿ’ಯಲ್ಲಿ ಸಂಪೂರ್ಣ ಮೂರು ಪ್ರದಕ್ಷಿಣೆ ಹಾಕುವ ಮೂಲಕ ಪ್ರಾಕಾರ ಸೇವೆ ನಡೆಸುತ್ತಿದ್ದಾರೆ.
ಅಷ್ಟಾವಧಾನಾದಿ ಸ್ವಸ್ತಿವಾಚನ ಸೇವೆ’ಗಳು ಒಳಗೊಂಡಂತೆ ಸನಾತನ ಸತ್ಸಂಪ್ರದಾಯಗಳನ್ನು ಯಥಾವತ್ತಾಗಿ ಇಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈವೇಳೆ ಪಂಡಿತ್ ಡಾ.ಪ್ರಸನ್ನಾಚಾರ್ಯ ಎಸ್.ಕಟ್ಟಿ ಮತ್ತು ತಂಡದವರಿಗೆ ಸತತ ನಾಲ್ಕು ದಿನಗಳ ಕಾಲ 10 ಸಾವಿರಕ್ಕೂ ಅಧಿಕ ಆಹುತಿಗಳನ್ನು ಹಾಕಿ ಹೋಮ ಸೇವೆ ಮಾಡಲು ಅವಕಾಶ ಲಭಿಸಿದ್ದು ವಿಶೇಷವಾಗಿತ್ತು. ಈ ಎಲ್ಲಾ ಕಾರ‍್ಯಕ್ರಮಗಳಲ್ಲೂ ಡಾ.ವಿದ್ವಾನ್ ಪ್ರಸನ್ನಾಚರ‍್ಯ ಎಸ್.ಕಟ್ಟಿ ಮತ್ತು ತಂಡದವರಿಂದ ಮಂಗಳಾಷ್ಟಕಾದಿ ಪಠಣ ಸೇವಾ,’ ಋಗ್ವೇದಾದಿಗಳ ಪಠಣ ಸೇವೆ’ ಮತ್ತು
ಚಾಮರ ಸೇವೆ’ ಮೊದಲಾದ ವಿಶೇಷ ಸೇವೆಗಳು ಒದಗಿ ಬಂದಿದ್ದು ವಿಶೇಷ. ಕರ್ನಾಟಕದಿಂದ ಭಕ್ತರಿಗಾಗಿ ತಂದಿದ್ದ 5 ಸಾವಿರಕ್ಕೂ ಹೆಚ್ಚು ಕಂಕಣಗಳನ್ನು ಶ್ರೀರಾಮಲಲ್ಲಾನ ವಿಗ್ರಹಕ್ಕೆ ಸಮರ್ಪಣೆ ಮಾಡಿ ಡಾ.ವಿದ್ವಾನ್ ಪ್ರಸನ್ನಾಚಾರ್ಯ ಎಸ್.ಕಟ್ಟಿ ಅವರಿಗೆ ನೀಡಿದ್ದು ಕೂಡ ಪ್ರಮುಖವಾಗಿತ್ತು.
ಗಣ್ಯರೊಂದಿಗೆ ಚರ್ಚೆ
ಆ ನಾಲ್ಕು ದಿನಗಳು ಅತ್ಯಂತ ಅಪೂರ್ವವಾಗಿದ್ದವು ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಡಾ.ವಿದ್ವಾನ್ ಎಸ್.ಪ್ರಸನ್ನಾಚಾರ್ಯ ಕಟ್ಟಿ ಅವರು, ಅಯೋಧ್ಯಾ ರಾಮಮಂದಿರದ ಮುಖ್ಯಸ್ಥರಾದ ಚಂಪತ್ ರಾಯ್, ಕರ್ನಾಟಕದ ಗೋಪಾಲ್ ಜಿ ಅವರನ್ನು ಹಲವು ಬಾರಿ ಭೇಟಿಯಾಗಿ ಅಯೋಧ್ಯೆ ರಾಮಮಂದಿರದ ಕುರಿತು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಸುಬ್ರಮಣ್ಯನ್ ಸ್ವಾಮಿ, ಕರ್ನಾಟಕದ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಮತ್ತು ಅವರ ಶ್ರೀಮತಿಯವರೊಂದಿಗೆ ಭೇಟಿಯಾದದ್ದು ಕೂಡ ವಿಶೇಷವೇ. ಅಯೋಧ್ಯೆಗೆ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಭಾರತದ ಎಲ್ಲ ಭಕ್ತರಿಗೆ ದಿನದ ಸಂಪೂರ್ಣ ವ್ಯವಸ್ಥೆಯನ್ನು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಚಾಕಚಕ್ಯತೆಯಿಂದ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವೆಂದು ಡಾ.ಪ್ರಸನ್ನಾಚಾರ್ಯ ಎಸ್.ಕಟ್ಟಿ ಅತ್ಯಂತ ಗೌರವಪೂರ್ವಕಾಗಿ ಹೇಳಿಕೊಂಡಿದ್ದಾರೆ.
ಶ್ರೀಗಳು ತಮಗೆ ಮಂಡಲೋತ್ಸವದ ಈ ಸುದಿನಗಳಲ್ಲಿ ಹೋಮ, ಯಜ್ಞ, ಯಾಗಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ಸುಕೃತವೆಂದೇ ಭಾವಿಸಿರುವುದಾಗಿ ಹೇಳಿದ್ದಾರೆ. ಪೇಜಾವರ ಶ್ರೀಗಳು ಅವರ ಬಳಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವ’ ವನ್ನು ಅಯೋಧ್ಯಾ ಕ್ಷೇತ್ರದಲ್ಲಿಯೇ ಆಚರಿಸುತ್ತಿರುವುದು ಇನ್ನಷ್ಟು ಹೆಚ್ಚಿನ ಸೊಬಗು ಮೂಡಿದಂತಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಾಮನ ಸೇವೆಗೈದವರಿವರು
ವಿದ್ವಾನ್ ಡಾ.ಪ್ರಸನ್ನಾಚರ‍್ಯ ಎಸ್.ಕಟ್ಟಿ ಅವರೊಂದಿಗೆ ಶ್ರೀರಾಮನ ಸೇವೆ ಗೈದು ಪುನೀತರಾದವರ ಪೈಕಿ ಪ್ರಮುಖವಾಗಿ ವಿದ್ವಾನ್ ನಂಬಿ ವಾಸುದೇವಾಚಾರ್ಯರು, ವಿದ್ವಾನ್ ನಂಬಿ ವೇಣುಮಾಧವಾಚಾರ್ಯರು, ಪಂಡಿತ್ ನಂಬಿ ನರಹರಿ ಆಚಾರ್ಯರು, ಪಂಡಿತ್ ಸತ್ಯಪ್ರಿಯ ಆಚಾರ್ಯರು, ಪಂಡಿತ್ ರಜತ್ ಆಚಾರ್ಯರು, ರಾಘವೇಂದ್ರ ಚಾರ್ಯ ಮತ್ತು ಹರೀಶ್ ಆಚಾರ್ಯರು ಮತ್ತಿತರರು ಅಯೋಧ್ಯೆ ಶ್ರೀರಾಮನ ಸನ್ನಿಧಾನದಲ್ಲಿ ನಡೆಯುತ್ತಿರುವ ಮಂಡಲೋತ್ಸವದ ಪ್ರಮುಖ ಹೋಮ ಮತ್ತು ಹವನಾದಿಗಳಲ್ಲಿ ಪಾಲ್ಗೊಂಡಿದ್ದರು.
ಜ.22ರಿಂದ ನಿರಂತರವಾಗಿ ಮಂದಿರದಲ್ಲಿ ಷೋಡಶೋಪಚಾರಗಳ ಸೇವೆ ನಡೆಯುತ್ತಿದ್ದು, ಭಾರತದಲ್ಲಿ ಸದ್ಯಕ್ಕೀಗ ಹಬ್ಬದ ವಾತಾವರಣವೇ ಮೂಡಿದೆ. ಇದಕ್ಕೆ ಕಲಶಪ್ರಾಯವಾಗಿ ಡಾ.ವಿದ್ವಾನ್ ಪ್ರಸನ್ನಾಚರ‍್ಯ ಎಸ್.ಕಟ್ಟಿಯವರಂತಹ ಅನೇಕ ಪಂಡಿತರು, ವಿದ್ವಾಂಸರು ತಂಡೋಪತಂಡವಾಗಿ ತೆರಳಿ ರಾಮದಾಸ ಪರಂಪರೆಯನ್ನು ರ‍್ಜಿತಗೊಳಿಸುತ್ತಿದ್ದಾರೆ. ಸಂತರ ಸಾಮ್ರಾಜ್ಯದ ನೆನಹನ್ನು ಶಾಶ್ವತವಾಗಿರಿಸಲು ಸನಾತನ ಸತ್ಸಂಪ್ರದಾಯಗಳನ್ನು ಜೀವಂತವಾಗಿರಿಸುತ್ತಿದ್ದಾರೆ.
ಅಗಣಿತ ಮಹಿಮನ ಸೇವೆಗೆ ಲೆಕ್ಕವಿಲ್ಲದಷ್ಟು ಜನರು ಲೋಕಾಭಿರಾಮವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಡಲೋತ್ಸವ ಆಚರಣೆಯ ಈ ವೇಳೆ ಅಯೋಧ್ಯೆಯಲ್ಲಿ ಇಡೀ ಭಾರತದ ದಿಗ್ದರ್ಶನವಾಗುತ್ತಿದೆ. ಹಬ್ಬದ ವಾತಾವರಣ ಮೈದೋರಿದೆ. ಭಕ್ತರು ಬೆಡಗಿನಿಂದ ಅಯೋಧ್ಯೆಯತ್ತ ಧಾವಿಸಿ ಬರುತ್ತಿದ್ದಾರೆ.
ರಾಮರಾಜ್ಯ ನಿರ್ಮಾಣ ಆಗಬೇಕೆನ್ನುವುದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಆಶಯವಾಗಿದೆ. ಜಗತ್ತಿನಾದ್ಯಂತ ರಾಮರಾಜ್ಯದ ಪರಿಕಲ್ಪನೆ ಮೂಡಿಸುವುದರಿಂದ ಎಲ್ಲೆಡೆ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಮೃದ್ಧಿ ಮತ್ತು ಸೌಖ್ಯ ನೆಲೆಸುತ್ತದೆ ಎಂದು ಕೊಂಡಿರುವ ಶ್ರೀಗಳು ಸಮಾಜ ಸೇವಕರಿಗೆ, ಸಾಧಕರಿಗೆ ಆಶೀರ್ವದಿಸುತ್ತಿದ್ದಾರೆ. ಬಡವರಿಗೆ ಉಚಿತ ಮನೆ ಕಟ್ಟಲು ನೆರವಾದವರು, ಗೋಶಾಲೆಗಳಿಗೆ ಸಹಾಯ ಮಾಡಿದವರು, ಅನೇಕ ರೀತಿಯ ಸಮಸ್ಯೆಯಲ್ಲಿರುವವರಿಗೆ ವಿದ್ಯಾದಾನ, ಅನ್ನದಾನ ಇತ್ಯಾದಿ ಸೇವಾಕಾರ್ಯ ಮಾಡಿದವರನ್ನು ಗುರುತಿಸಿ ಆಶೀರ್ವದಿಸುತ್ತಿದ್ದಾರೆ. ನಿಜಕ್ಕೂ ಇದು ನಮಗೆಲ್ಲ ಮಾದರಿಯಾಗಿದೆ.
| ವಿದ್ವಾನ್ ಡಾ.ಪಂಡಿತ್ ಪ್ರಸನ್ನಾಚಾರ್ಯ ಎಸ್.ಕಟ್ಟಿ, ಖ್ಯಾತ ಜ್ಯೋತಿಷಿಗಳು, ಬೆಂಗಳೂರು