ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗ (Sangha Shiksha Varga) ಕಾರ್ಯಚಟುವಟಿಕೆಯು ಮಹಾರಾಷ್ಟ್ರದ ನಾಗ್ಪುರದ ರೇಶಿಂಬಾಗ್‌ನಲ್ಲಿನ ಡಾ. ಹೆಡಗೇವಾರ್ ಸ್ಮೃತಿ ಭವನದ ಮಹರ್ಷಿ ವ್ಯಾಸ ಸಭಾಗೃಹದಲ್ಲಿ ಸೋಮವಾರ ಪ್ರಾರಂಭವಾಯಿತು. ದೀಪ ಪ್ರಜ್ವಲನೆ ಮತ್ತು ಭಾರತ ಮಾತೆ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಸಂಘ ಶಿಕ್ಷಾ ವರ್ಗದ ಪಾಲಕ ಅಧಿಕಾರಿ ಮತ್ತು ಸಹ ಸರಕಾರ್ಯವಾಹ ರಾಮದತ್ತ್ ಅವರು, ಪ್ರಯತ್ನದ ಹಾದಿಯಲ್ಲಿನ ಶ್ರಮದ ಮೂಲಕ ಆನಂದವನ್ನು ಆಸ್ವಾದಿಸುವ ಭಾವವನ್ನು ಸಾಧನಾ ಎಂದು ಕರೆಯಲಾಗುತ್ತದೆ. ಸಂಘ ಶಿಕ್ಷಾ ವರ್ಗವು ಕೂಡ ಅಂತಹದೊಂದು ಸಾಧನಾ ಎಂದು ಹೇಳಿದರು.
ರೈತ ತನ್ನ ಭೂಮಿಯಲ್ಲಿ ಬೀಜವನ್ನು ಬಿತ್ತುವ ಹಾಗೆ ಸಂಘ ಶಿಕ್ಷಾ ವರ್ಗದಲ್ಲಿ ಸ್ವಯಂಸೇವಕರಿಗೆ ಸಂಸ್ಕಾರವನ್ನು ಬಿತ್ತುತ್ತದೆ. ಈ ಪ್ರಕ್ರಿಯೆ ಸಂಘ ಕಾರ್ಯದಲ್ಲಿ ಪ್ರಶಿಕ್ಷಣದ ಮಹತ್ವವನ್ನು ಸಾರುತ್ತದೆ. ರೇಶಿಂಬಾಗ್ ಡಾ.ಹೆಡಗೇವಾರ್ ಮತ್ತು ಗುರೂಜಿಯವರ ತಪೋಭೂಮಿ. ಈ ಪುಣ್ಯಭೂಮಿಗೆ ಭೇಟಿ ನೀಡಿದ ಪ್ರತಿ ಸ್ವಯಂಸೇವಕನಿಗೂ ರಾಷ್ಟ್ರ ಮೊದಲು, ಸ್ವಾಭಿಮಾನ, ಪ್ರಾಮಾಣಿಕತೆ, ರಾಷ್ಟ್ರಭಕ್ತಿ, ಶಿಸ್ತು, ಬಂಧುತ್ವ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘ ಶಿಕ್ಷಾ ವರ್ಗದಲ್ಲಿ ಭಾಗವಹಿಸಿದ ಶಿಕ್ಷಾರ್ಥಿಗಳಲ್ಲಿ ವರ್ಗದಲ್ಲಿರುವ ಪ್ರತಿ ಪ್ರಾಂತದ ಕನಿಷ್ಠ ಇಬ್ಬರು ಶಿಕ್ಷಾರ್ಥಿಗಳನ್ನು ಪರಿಚಯ ಮಾಡಿಕೊಂಡು ಅವರ ಪ್ರಾದೇಶಿಕ ಸಮಸ್ಯೆಗಳ ಕುರಿತು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಸಂಘದ ಸ್ವಯಂಸೇವಕರು ಕೇವಲ ಸವಾಲುಗಳ ಕುರಿತು ಚರ್ಚಿಸದೇ, ಅದಕ್ಕೆ ಪರಿಹಾರವನ್ನು ನೀಡುವವರಾಗಬೇಕು ಎಂದು ಅಪೇಕ್ಷಿಸಿದರು.
ಸ್ವಯಂಸೇವಕರು ಸಂಘದ ತತ್ತ್ವವನ್ನು ಮತ್ತು ಸಾಮೂಹಿಕ ಒಪ್ಪಂದದೊಂದಿಗೆ ವೈಯಕ್ತಿಕ ಅಭಿಪ್ರಾಯಗಳನ್ನು ಸಮೀಕರಿಸುವ ಇಚ್ಛೆಯನ್ನು ಗ್ರಹಿಸುವಂತವರಾಗಬೇಕು. ಸ್ವಯಂಸ್ವೇವಕರಲ್ಲಿ ಈ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಪ್ರತಿ ಸಂಘಟನೆಯ ಸದ್ಗುಣವಾಗಿರುತ್ತದೆ ಎಂದು ನುಡಿದರು.
ವರ್ಗದ ಶಿಕ್ಷಾರ್ಥಿಗಳು ಸಮಾಜಕ್ಕಾಗಿ ದುಡಿಯುವುದಕ್ಕಾಗಿ ಸದಾ ಮುಂಚೂಣಿಯಲ್ಲಿರಬೇಕು. ಶೀಘ್ರದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಸ್ವಯಂಸೇವಕರು ತಮ್ಮ ಕರ್ತವ್ಯವನ್ನು ಅರಿತು ಸಂಘ ಕಾರ್ಯವನ್ನು ವಿವಿಧ ಆಯಾಮಗಳಲ್ಲಿ ವಿಸ್ತರಿಸುವ ಮತ್ತು ಸಂಘ ಹಾಗೂ ಸಮಾಜ ಒಂದೇ ಆಗುವವರೆಗೂ ಶ್ರಮವಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ | Karnataka Election : ಮತದಾನದ ಮುನ್ನಾದಿನವೂ ಹನುಮಾನ್ ಚಾಲೀಸ್ ಪಠಣ; ಕಾಂಗ್ರೆಸ್ ವಿರುದ್ಧ ಬಜರಂಗ ಅಸ್ತ್ರ
ವೇದಿಕೆಯಲ್ಲಿ ಅಖಿಲ ಭಾರತೀಯ ಸಹ ಸರಕಾರ್ಯವಾಹ ಕೆ.ಸಿ.ಮುಕುಂದ, ಅವಧ್ ಪ್ರಾಂತದ ಸಂಘ ಚಾಲಕ ಹಾಗೂ ವರ್ಗದ ವರ್ಗ ಸರ್ವಾಧಿಕಾರಿ ಕೃಷ್ಣ ಮೋಹನ ಉಪಸ್ಥಿತರಿದ್ದರು. ಈ ಬಾರಿಯ ಸಂಘ ಶಿಕ್ಷಾ ವರ್ಗದಲ್ಲಿ ರಾಷ್ಟ್ರದ ಎಲ್ಲ ಪ್ರಾಂತವನ್ನು ಪ್ರತಿನಿಧಿಸಿ 682 ಮಂದಿ ಶಿಕ್ಷಾರ್ಥಿಗಳು ಭಾಗವಹಿಸಿದ್ದಾರೆ. ಸಂಘ ಶಿಕ್ಷಾ ವರ್ಗದ ಪಥ ಸಂಚಲನ ಮೇ 21ರಂದು ನಡೆಯಲಿದ್ದು, ಜೂನ್ 1 ರಂದು ಸಮಾರೋಪ ಸಮಾರಂಭ ನಡೆಯಲಿದೆ.