ಬೆಂಗಳೂರು: ಉಪಾಸನಾ ಮೋಹನ್ ಹಾಗೂ ರಂಜನಿ ಪ್ರಭು ಅವರ ಸಾಂಗತ್ಯದಲ್ಲಿ ಮೂಡಿಬಂದ ಗೀತೆಗಳು ಭಾವಗೀತೆ ಲೋಕಕ್ಕೆ ಹೊಸತನವನ್ನು ತುಂಬಿದವು. ಕವಯಿತ್ರಿ ರಂಜನಿ ಪ್ರಭು ಅವರು ಮೊದಲು ಭಾವ ಗೀತೆಗಳನ್ನು ಬರೆಯಲು ಆರಂಭಿಸಿದರು. ಈಗ ಗಂಭೀರ ಕವಿತೆಗಳತ್ತ ಸಾಗುತ್ತಿದ್ದಾರೆ. (Ranjani Prabhu-60) ತಡವಾಗಿ ಬರವಣಿಗೆ ಆರಂಭಿಸಿದರೂ ಸಶಕ್ತ ಕವಿತೆಗಳನ್ನು ನೀಡಿದ್ದಾರೆ. ಕವಿತೆ ಕೈಹಿಡಿದು ನಡೆಸಿದರೆ ಭಾವಗೀತೆ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಖ್ಯಾತ ಸಾಹಿತಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ತಿಳಿಸಿದರು.
ನಗರದ ಸಂಸ ಬಯಲು ರಂಗಮಂದಿರದಲ್ಲಿ ಉಪಾಸನಾ ಟ್ರಸ್ಟ್, ಬಹುರೂಪಿ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ‘ರಂಜನಿ ಪ್ರಭು-60’ ಕಾರ್ಯಕ್ರಮ, ಕವಯಿತ್ರಿ ರಂಜನಿ ಪ್ರಭು ಅವರ ಬಹುರೂಪಿಯ ಪ್ರಕಟಣೆ ‘ವೈಶಾಖದ ಹನಿಗಳು’ ಕೃತಿ ಹಾಗೂ ಉಪಾಸನಾ ಟ್ರಸ್ಟ್ ರೂಪಿಸಿದ ಧ್ವನಿ ಸಾಂದ್ರಿಕೆ ‘ಬಣ್ಣದೋಕುಳಿ’ಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಖ್ಯಾತ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರು ಮಾತನಾಡಿ, ಭಾವಗೀತೆ ಲೋಕದಲ್ಲಿ ರಂಜನಿ ಪ್ರಭು ಅವರ ‘ಜೋಗಿ ಕಾಡತಾನ’ ತನ್ನದೇ ಆದ ಛಾಪನ್ನು ಮೂಡಿಸಿದೆ. ಉಪಾಸನಾ ಮೋಹನ್ ಬಳಗ ರಂಜನಿ ಪ್ರಭು ಅವರ ಕವಿತೆಗಳನ್ನು ಮಾಧುರ್ಯ ಲೋಕದೊಡನೆ ಬೆಸೆದಿದ್ದಾರೆ. ಈಗ ವೈಶಾಖದ ಹನಿಗಳು ಕೃತಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಎಂದರು.
ಕವಯತ್ರಿ ಎಂ.ಆರ್.ಕಮಲಾ ಕೃತಿ ಕುರಿತು ಮಾತನಾಡಿ, ರಂಜನಿ ಪ್ರಭು ಅವರದ್ದು ಬತ್ತದ ಉತ್ಸಾಹ. ಅವರ ಪ್ರೀತಿಯ ತೊರೆ ಬತ್ತದಂತಹದ್ದು. ವೈಶಾಖದ ಹನಿಗಳು ಕೃತಿಯಲ್ಲಿನ ಅವರ ಪ್ರಯೋಗಗಳು ಗಮನ ಸೆಳೆಯುವಂತಿದೆ ಎಂದರು.
ಖ್ಯಾತ ಸಂಗೀತ ನಿರ್ದೇಶಕರಾದ ಡಾ.ಎಚ್.ಆರ್. ಲೀಲಾವತಿ ಅವರು ಮಾತನಾಡಿ, ಕವಿತೆ ಎನ್ನುವುದು ಸ್ವರ ಪ್ರಧಾನವಾದದ್ದು. ಅದು ತನ್ನೊಳಗೆ ಒಂದು ರಾಗವನ್ನು ಇಟ್ಟುಕೊಂಡಿರುತ್ತದೆ. ನಾನು ಸಂಗೀತ ನಿರ್ದೇಶಕಳಾಗಿ ಇಂತಹ ಕವಿತೆಯೊಳಗಿನ ಆತ್ಮವನ್ನು ಹುಡುಕುತ್ತಿದ್ದೆ ಎಂದರು.
ಕವಯಿತ್ರಿ ರಂಜನಿ ಪ್ರಭು ತಮ್ಮ ಕಾವ್ಯದ ಪ್ರೀತಿಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ಡಾ.ಬಿ.ವಿ.ರಾಜಾರಾಂ, ಶ್ರೀನಿವಾಸ ಪ್ರಭು, ಸಂಗೀತ ನಿರ್ದೇಶಕ ಉಪಾಸನಾ ಮೋಹನ್, ಬಹುರೂಪಿಯ ಜಿ.ಎನ್.ಮೋಹನ್ ಉಪಸ್ಥಿತರಿದ್ದರು.
ಇದನ್ನೂ ಓದಿ | BMTC Bus Pass | ಡಿ.26ರಿಂದ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗೆ ಆನ್‌ಲೈನ್ ಅರ್ಜಿ ಆಹ್ವಾನ