ಬೆಂಗಳೂರು: ರಣಜಿ ಫೈನಲ್ ಪಂದ್ಯದಲ್ಲಿ ೪೧ ಬಾರಿಯ ಚಾಂಪಿಯನ್ ಮುಂಬೈ ತಂಡದ ವಿರುದ್ಧ ಗೆದ್ದ ಮಧ್ಯಪ್ರದೇಶ ತಂಡ ೫ ದಶಕಗಳ ನಂತರ ರಣಜಿ ಟ್ರೋಪಿ ತನ್ನದಾಗಿಸಿಕೊಂಡು ಬೀಗಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಪೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಈ ಮಹತ್ವದ ಸಾಧನೆ ಮಾಡಿದೆ. ೧೯೫೨-೫೩ ರಲ್ಲಿ ಕೊನೆಯದಾಗಿ ಮಧ್ಯಪ್ರದೇಶ ತಂಡ (ಹೋಳ್ಕರ್) ಈ ಪ್ರಶಸ್ತಿ ಗೆದ್ದಿತ್ತು.
ಬುಧವಾರ ಆರಂಭವಾದ ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್(134) ಶತಕದ ನೆರವಿನಿಂದ 127.4 ಓವರ್‌ಗಳಲ್ಲಿ 374 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ತಂಡ ಯಶ್ ದುಬೆ(133), ಶುಭಂ ಶರ್ಮಾ(116) ಹಾಗೂ ರಜತ್ ಪಾಟೀದಾರ್(122) ಶತಕದ ನೆರವಿನಿಂದ 177.2 ಓವರ್‌ಗಳಲ್ಲಿ 536 ರನ್ ಕಲೆ ಹಾಕಿ, 162 ರನ್ ಮುನ್ನಡೆ ಗಳಿಸಿತು.
162 ರನ್‌ಗಳ ಹಿನ್ನಡೆಯೊಂದಿಗೆ 4ನೇ ದಿನದಾಟದ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡಕ್ಕೆ ನಾಯಕ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿದ್ದರು. ಹಾರ್ದಿಕ್ ತಮೊರೆ ಜತೆಗೂಡಿ ತಂಡದ ಮೊತ್ತವನ್ನು 10 ಓವರ್‌ಗಳಲ್ಲಿ 60 ರನ್ ಗಡಿ ದಾಟಿಸಿದರು. ಇದರ ಬೆನ್ನಲ್ಲೇ ಪೃಥ್ವಿ ಶಾ 44(52 ಎಸೆತ) ಗಳಿಸಿದ್ದಾಗ ಔಟಾದರು.
ಬಳಿಕ ಆಗಮಿಸಿದ ಅರ್ಮಾನ್ ಜಾಫರ್(37), ಸವೇದ್ ಪಾರ್ಕರ್ (51) ಹಾಗೂ ಸರ್ಫರಾಜ್ ಖಾನ್ (45) ಬಳಿಕ ಮುಂಬೈ ತಂಡ ವಿಕಟ್‌ಗಳನ್ನು ಕೈಚೆಲ್ಲುತ್ತಾ ಹೋಯಿತು. ಪರಿಣಾಮ 5 ದಿನದಾಟದ ವೇಳೆ 269 ರನ್ ಗಳಿಸಿ ಆಲ್‌ಔಟ್ ಆಯಿತು.
ನಂತರ 108 ರನ್‌ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಮಧ್ಯ ಪ್ರದೇಶ ತಂಡಕ್ಕೆ ಧವಲ್ ಕುಲಕರ್ಣಿ 2ನೇ ಓವರ್‌ನಲ್ಲಿ ಯಶ್ ದುಬೆ(1) ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. ಆದಾಗ್ಯೂ ಹಿಮಾಂಶು ಮಂತ್ರಿ ಮತ್ತು ಶುಭಂ ಶರ್ಮಾ ಎಚ್ಚರಿಕೆಯ ಆಟವಾಡಿದರು. ಈ ಮೂಲಕ ಅರ್ಧ ಶತಕದ ಜತೆಯಾಟದ ಬಳಿಕ ಹಿಮಾಂಶು ಮಂತ್ರಿ (37) ಶಮ್ಸ್ ಮುಲಾನಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪಾರ್ಥ್ ಸಹಾನಿ(5) ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಶುಭಂ ಶರ್ಮಾ ಮತ್ತು ರಜತ್ ಪಾಟಿದಾರ್ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು. ಅಂತಿಮವಾಗಿ 4 ವಿಕೆಟ್ ಕಳೆದುಕೊಂಡು 29.5 ಓವರ್‌ಗಳಲ್ಲಿ 108 ರನ್ ಗುರಿ ತಲುಪಿದ
ಮಧ್ಯಪ್ರದೇಶ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಇದನ್ನೂ ಓದಿ | Team India ಹಿಟ್ಟರ್ ರೋಹಿತ್ ಶರ್ಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ಇಲ್ಲಿದೆ ನೋಡಿ ಅಭಿಮಾನಿಗಳಿಗೆ ವಿಶೇಷ ಸಂದೇಶ